ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಾಸನ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಳ್ಳಲು ಹವಾಮಾನ ವೈಪರೀತ್ಯ ಕಾರಣ ಎಂದು ವಿಜ್ಞಾನಿಗಳು ವರದಿ ನೀಡಿದ್ದು, ರೋಗ ನಿವಾರಣೆಗೆ ಪೂರಕವಾದ ಔಷಧಿ ವಿತರಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಹಾರನಹಳ್ಳಿ ಕೋಡಿಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ನಾವು ವಿತರಣೆ ಮಾಡಿದ್ದ ಬಿತ್ತನೆ ಬೀಜಕ್ಕಿಂತ ಹೆಚ್ಚಾಗಿ ರೈತರು ಖಾಸಗಿಯವರ ಬಳಿ ಖರೀದಿ ಬಿತ್ತನೆ ಮಾಡಿದ್ದಾರೆ. ಅದು ಒಂದು ಕಾರಣ ಇರಬಹುದು, ಹವಾಮಾನದ ವೈಪರೀತ್ಯವೂ ಹಾಗೂ ಅತಿವೃಷ್ಟಿ ಇತ್ಯಾದಿ ಪ್ರಾಕೃತಿಕ ಬದಲಾವಣೆ ಸಹ ಕಾರಣ ಇರಬಹುದು ಎಂದುಕೊಂಡಿದ್ದೆವು. ಆದರೆ ಹವಾಮಾನ ವೈಪರೀತ್ಯದಿಂದ ರೋಗ ಬಂದಿದೆ ಎಂದು ವಿಜ್ಞಾನಿಗಳು ವರದಿ ಕೊಟ್ಟಿದ್ದಾರೆ. ರೋಗ ನಿವಾರಣೆಗೆ ಬೇಕಾದ ಔಷಧಿ ಕೊಟ್ಟಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ಇದ್ದರೆ ನೀಡುವಂತೆ ಸಂಬಂಧಪಟ್ಟ ವಿವಿಗೆ ಹೇಳಿದ್ದೇನೆ ಎಂದರು.
ಕಾವೇರಿ ಆರತಿ ಸಂಬಂಧ ಹೈಕೋರ್ಟ್ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅದೊಂದು ಧಾರ್ಮಿಕ ಪದ್ಧತಿ, ಕಾವೇರಿ ಆರತಿ ಹಿಂದೆ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶವೂ ಅಡಗಿದೆ. ಮೈಸೂರು ಮಹಾರಾಜರು ನಿರ್ಮಿಸಿರುವ ಕೆಆರ್‌ಎಸ್ ಬಳಿ ಕಾವೇರಿ ಆರತಿ ಮಾಡುವುದು ಭಾವನಾತ್ಮಕವಾಗಿ, ಧಾರ್ಮಿಕವಾಗಿ ಒಳ್ಳೆಯದು. ಮಹತಾಯಿ ಪೂಜೆ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆ ನಮ್ಮದು ಎಂದರು. ಆದರೂ ಯಾವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಹೈಕೋರ್ಟ್ ಸಮಯ ಕೊಟ್ಟು, ಸ್ಪಷ್ಟನೆ ಕೇಳಿದ್ದು ಇಲಾಖೆ ಅದನ್ನು ನೀಡಲಿದೆ. ನಂತರ ಕೋರ್ಟ್ ನೀಡುವ ಆದೇಶ ಆಧರಿಸಿ ಸರ್ಕಾರ ಮುಂದುವರಿಯಲಿದೆ ಎಂದು ಪ್ರತಿಕ್ರಿಯೆ ನೀಡಿದರು.ರಾಜ್ಯದಲ್ಲಿ ಕಳೆದೆರಡು ವರ್ಷಗಳಲ್ಲಿ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ. ಮೊದಲ ವರ್ಷ ಮಳೆ ಇಲ್ಲದೆ, ಕೇಂದ್ರ ಪರಿಹಾರ ನೀಡದೇ ಇದ್ದರೂ ಸುಪ್ರೀಂಕೋರ್ಟ್ ಮೊರೆ ಹೋಗಿ ಪರಿಹಾರ ಪಡೆದವು, ೨ ವರ್ಷ ಉತ್ತಮ ಮಳೆ-ಬೆಳೆಯಾಗಿ ೧.೪೮ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಆಗಿದೆ. ಈ ವರ್ಷ ೮೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಜುಲೈವರೆಗೂ ಮುಂದುವರಿಯಲಿದೆ. ಇನ್ನೂ ಹೆಚ್ಚಿನ ಇಳುವಳಿ ನಿರೀಕ್ಷಿಸಲಾಗಿದೆ ಎಂದರು. ಮಳೆಯಿಂದ ಕೆಲವು ಜಿಲ್ಲೆಗಳಲ್ಲಿ ತೊಂದರೆಯಾಗಿದ್ದು, ಅದನ್ನು ಸರಿಪಡಿಸಲಾಗುವುದು ಎಂದರು. ಸಚಿವ ಕೆ.ಎನ್.ರಾಜಣ್ಣ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನನಗೆ ಯಾವ ವಿಚಾರ ಗೊತ್ತಿಲ್ಲ. ರಾಜ್ಯದಲ್ಲಿ ಒಳ್ಳೆಯ ಮಳೆ ಆಗುತ್ತಿದೆ. ರೈತರಿಗೆ ಅಗತ್ಯವಿರುವ ಗೊಬ್ಬರ, ಬಿತ್ತನೆ ಬೀಜ ಒದಗಿಸುವುದರತ್ತ ನಾನು ಗಮನ ಹರಿಸಿದ್ದೇನೆ. ರಾಜಕಾರಣವನ್ನು ಅವರಿಗೇ ಬಿಟ್ಟು ಬಿಟ್ಟಿದ್ದೇನೆ ಎಂದಷ್ಟೇ ಹೇಳಿದರು. ಇದೇ ವೇಳೆ ಸ್ವಾಮೀಜಿ ಅವರ ಬಳಿ ಪ್ರಸ್ತುತ ರಾಜಕೀಯದ ಬಗ್ಗೆ ಏನನ್ನೂ ಮಾತನಾಡಿಲ್ಲ. ನಾನು ರಾಜಕಾರಣಕ್ಕೆ ಬರುವ ಮುಂಚಿನಿಂದಲೂ ಈ ಮಠಕ್ಕೆ ಬಂದು ಹೋಗುತ್ತಿದ್ದೇನೆ. ಇತ್ತೀಚೆಗೆ ಬರಲು ಆಗಿರಲಿಲ್ಲ. ಅದಕ್ಕಾಗಿ ಬಂದಿದ್ದೇನೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಾವಗಲ್ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು