ಸಾರಾಂಶ
ಭಾರೀ ಮಳೆಗೆ ರಾಜ್ಯದ ಪ್ರಮುಖ ಡ್ಯಾಂಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ. ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು 4 ಅಡಿ (ಗರಿಷ್ಠ ಮಟ್ಟ:1819) ಮಾತ್ರ ಬಾಕಿಯಿದೆ.
ಬೆಂಗಳೂರು : ಭಾರೀ ಮಳೆಗೆ ರಾಜ್ಯದ ಪ್ರಮುಖ ಡ್ಯಾಂಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ.
ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು 4 ಅಡಿ (ಗರಿಷ್ಠ ಮಟ್ಟ:1819) ಮಾತ್ರ ಬಾಕಿಯಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದ್ದು, ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.
ಮಧ್ಯ ಕರ್ನಾಟಕದ ಜೀವನಾಡಿ, ಭದ್ರಾ ಜಲಾಶಯ ಭರ್ತಿಗೆ ಕೇವಲ ಒಂದು ಅಡಿಯಷ್ಟೇ (ಗರಿಷ್ಠ 186 ಅಡಿ) ಬಾಕಿ ಇದೆ. ಜಲಾನಯನ ಪ್ರದೇಶವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ತುಂಗಭದ್ರಾ ಜಲಾಯಶದಿಂದ ನದಿಗೆ 1.7 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಹಾಸನ ಭಾಗದಲ್ಲಿಯೂ ಮಳೆಯಾಗುತ್ತಿದ್ದು, ಹೇಮಾವತಿಗೆ 32,925 ಕ್ಯುಸೆಕ್ ಒಳ ಹರಿವಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿಗೆ ಒಳಹರಿವು ಹೆಚ್ಚಿದೆ. ಬಸವಸಾಗರ ಜಲಾಶಯದ 30 ಗೇಟುಗಳ ಮೂಲಕ 1.27 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಬಾ, ಮಲಪ್ರಭಾ ಜಲಾಶಯಗಳು ಭರ್ತಿಯಾಗಿವೆ. ಮಲಪ್ರಭಾ ಜಲಾಶಯದಿಂದ 5,594 ಕ್ಯುಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಕೇರಳದ ವಯನಾಡಿನಲ್ಲಿ ಮಳೆಯಾಗುತ್ತಿದ್ದು, ಕಬಿನಿ ಜಲಾಶಯಕ್ಕೂ ಒಳಹರಿವು ಹೆಚ್ಚಿದೆ. ಜಲಾಶಯದಿಂದ 23,846 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೊಡಗಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್‌ನಿಂದ 1.2 ಲಕ್ಷ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.