‘ಕುಂಭ’ ದುರಂತ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ - ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರ ಯತ್ನ

| N/A | Published : Jan 30 2025, 09:24 AM IST / Updated: Jan 30 2025, 09:30 AM IST

 Prayagraj Mahakumbh 2025 bageshwar dham baba dhirendra shastri mahakumbh sangam dubki

ಸಾರಾಂಶ

 ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟಿದ್ದಾರೆನ್ನಲಾದ ಕರ್ನಾಟಕದ ಭಕ್ತರ ಮಾಹಿತಿ ಪಡೆಯುವ ಸಂಬಂಧ ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ಅವರು ಈಗಾಗಲೇ ಉತ್ತರ ಪ್ರದೇಶ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

  ಬೆಂಗಳೂರು : ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟಿದ್ದಾರೆನ್ನಲಾದ ಕರ್ನಾಟಕದ ಭಕ್ತರ ಮಾಹಿತಿ ಪಡೆಯುವ ಸಂಬಂಧ ಕಂದಾಯ ಇಲಾಖೆ ಕಾರ್ಯದರ್ಶಿ ರಶ್ಮಿ ಅವರು ಈಗಾಗಲೇ ಉತ್ತರ ಪ್ರದೇಶ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪ್ರಯಾಗ್‌ರಾಜ್ ಕುಂಭಮೇಳ ಕಾಲ್ತುಳಿತ ದುರಂತದಲ್ಲಿ ರಾಜ್ಯದ ನಾಲ್ವರು ಮೃತಪಟ್ಟಿರುವ ಬಗ್ಗೆ ಶಂಕೆ ಇದೆ. ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವರ್ (24), ಜ್ಯೋತಿ ದೀಪಕ್ ಹತ್ತರವರ್ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣ್‌ ಕೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿರುವ ಸಾಧ್ಯತೆ ಇದೆ ಎಂದರು.

ಉತ್ತರಪ್ರದೇಶ ಸರ್ಕಾರದೊಂದಿಗೆ ವಿಪತ್ತು ನಿರ್ವಹಣಾ ತಂಡ ನಿರಂತರ ಸಂಪರ್ಕದಲ್ಲಿದೆ. ಆದರೆ, ಉತ್ತರಪ್ರದೇಶ ಸರ್ಕಾರ ದುರಂತದಲ್ಲಿ ರಾಜ್ಯದ ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಜನ ಗಾಯಾಳುಗಳಾಗಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ಸ್ವತಃ ಕುಂಭಮೇಳಕ್ಕೆ ತೆರಳಿದವರ ಕುಟುಂಬದವರನ್ನು ಸಂಪರ್ಕಿಸಿ ನಾಲ್ಕು ಜನ ಮೃತಪಟ್ಟಿರುವ ಸಾಧ್ಯತೆ ಇದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ನಾಯಕರ ಸಹಾಯದಿಂದ ಬೆಳಗಾವಿ ಜಿಲ್ಲೆಯ 300ಕ್ಕಿಂತ ಹೆಚ್ಚು ಜನ ಕುಂಭಮೇಳಕ್ಕೆ ಪ್ರಯಾಣ ಮಾಡಿದ್ದಾರೆಂಬ ಮಾಹಿತಿ ಇದೆ. ಈ ನಡುವೆ ಉತ್ತರಪ್ರದೇಶ ಸರ್ಕಾರ ಯಾವುದೇ ಮಾಹಿತಿ ನೀಡದ ಕಾರಣ ಕನ್ನಡಿಗರ ಹಿತರಕ್ಷಣೆಗಾಗಿ ಓರ್ವ ಐಎಎಸ್ ಅಧಿಕಾರಿ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಯೊಬ್ಬರನ್ನೊಳಗೊಂಡ ಮೂರು ಜನರ ತಂಡವನ್ನು ಈಗಾಗಲೇ ಪ್ರಯಾಗ್‌ರಾಜ್‌ಗೆ ಕಳುಹಿಸಲಾಗಿದೆ ಎಂದರು.

ಈ ಸಂಖ್ಯೆಗೆ ಸಂಪರ್ಕಿಸಿ

ದುರಂತದ ಸಂಬಂಧ ಸಹಾಯವಾಣಿಯನ್ನೂ ತೆರೆದಿದ್ದು, ಕುಂಭಮೇಳಕ್ಕೆ ಹೊರಟು ಕುಟುಂಬಸ್ಥರ ಸಂಪರ್ಕಕ್ಕೆ ಸಿಗದವರ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ. ಸಹಾಯವಾಣಿ ಸಂಖ್ಯೆ 80-22340676ಗೆ ಸಂಪರ್ಕಿಸಬಹುದಾಗಿದೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

ಬ್ರಾಹ್ಮಿ ಮುಹೂರ್ತದಲ್ಲಿಯೇ ಸ್ನಾನಕ್ಕೆ ನುಗ್ಗಿದ್ದರಿಂದ ಕಾಲ್ತುಳಿತ: ಸಂತೋಷ

ಮೌನಿ ಅಮಾವಾಸ್ಯೆ ದಿನ ಅದೂ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿದರೆ ಹೆಚ್ಚು ಪುಣ್ಯ ಬರುತ್ತದೆ ಎಂಬುದು ಪ್ರತೀತಿ. ಹೀಗಾಗಿ ಬುಧವಾರ ಬೆಳಗಿನಜಾವ ಜನರು ಒಮ್ಮೆಲೆ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ನುಗ್ಗಿದರು. ಕೆಲವರು ಸ್ನಾನ ಮಾಡಿ ವಾಪಸಾಗುತ್ತಿದ್ದರು. ಮತ್ತೆ ಕೆಲವರು ಸ್ನಾನಕ್ಕೆ ಹೋಗುತ್ತಿದ್ದರು. ಒಂದು ಹಂತದಲ್ಲಿ ಜನ ಒಮ್ಮೆಲೆ ಎರಡೂ ಕಡೆಯಿಂದ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಯ್ತು...

ಪ್ರಯಾಗರಾಜ್‌ ಕುಂಭಮೇಳಕ್ಕೆ ತೆರಳಿರುವ ಬೆಳಗಾವಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಸಂತೋಷ ಪೋಟೂರ ಕಾಲ್ತುಳಿತಕ್ಕೆ ಬೆಳಗಾವಿಯ ನಾಲ್ವರು ಬಲಿಯಾದ ಘಟನೆ ಕಹಿ ಅನುಭವ ಕನ್ನಡಪ್ರಭಕ್ಕೆ ಎಳೆಎಳೆಯಾಗಿ ತಿಳಿಸಿದರು.

ಪ್ರಯಾಗರಾಜ್‌ ತ್ರಿವೇಣಿ ಸಂಗಮಕ್ಕೆ ಹೋಗಲು ಮತ್ತು ಬರಲು ಪ್ರತ್ಯೇಕ ಮಾರ್ಗಗಳಿಲ್ಲ. ರಸ್ತೆಗಳು ಅಗಲವಾಗಿದ್ದರೂ ಬಂದಿರುವ ಜನಕ್ಕೆ ಅದು ಸಾಲುವುದಿಲ್ಲ. ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲೇ, ಅದೂ ತ್ರಿವೇಣಿ ಸಂಗಮದಲ್ಲೇ ಸ್ನಾನ ಮಾಡಿದರೆ ಹೆಚ್ಚು ಪುಣ್ಯ ಲಭಿಸುತ್ತದೆ ಎಂದು ಜನರು ಗಾಢವಾಗಿ ನಂಬಿ ಒಮ್ಮೆಲೆ ಸ್ನಾನಕ್ಕೆ ಹೋಗಿದ್ದೆ ಘಟನೆಗೆ ಕಾರಣವಾಯ್ತು ಎಂದರು ಸಂತೋಷ.

ಬೆಳಗಾವಿಯಿಂದ ಸಾಯಿರಥ ಟ್ರಾವೆಲ್ಸ್‌ನ 2 ಬಸ್‌ಗಳಲ್ಲಿ ಅಂದಾಜು 60 ಜನರು ಪ್ರಯಾಗರಾಜ್‌ನ ಕುಂಭಮೇಳಕ್ಕೆ ಪ್ರಯಾಣ ಮಾಡಿದೆವು. ಜ.28ರಂದು ಪ್ರಯಾಗರಾಜ್‌ ನಾವೆಲ್ಲ ತಲುಪಿದೆವು. ನಾವು ಇಳಿದ ಜಾಗದಿಂದ ತ್ರಿವೇಣಿ ಸಂಗಮ 30 ಕಿ.ಮೀ. ದೂರದಲ್ಲಿತ್ತು. ಅಲ್ಲಿಗೆ ನಾವೆಲ್ಲ ಆಟೋ ಅಥವಾ ಇನ್ನಿತರ ವಾಹನ ಹಿಡಿದು ಹೋಗಬೇಕಿತ್ತು. ಅಲ್ಲದೆ, ನಮ್ಮನ್ನು ಕರೆದೊಯ್ದಿದ್ದ ಟ್ರಾವೆಲ್‌ ಏಜೆನ್ಸಿಯವರು ನಿಮ್ಮ ನಿಮ್ಮ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಮಾತ್ರವಲ್ಲ, ಅವರು ನಿಲ್ಲಿಸಿದ್ದ ವಾಹನದ ಗುರುತನ್ನು ನೀಡಿ, ವಾಪಸ್‌ ನಿಗದಿತ ಸ್ಥಳ ಮತ್ತು ಸಮಯಕ್ಕೆ ಬರುವಂತೆ ತಿಳಿಸಿದ್ದರು. ಅದರಂತೆ ನಾವೆಲ್ಲ 9, 10 ಜನರ ಗುಂಪುಗಳನ್ನು ಮಾಡಿಕೊಂಡು ನಮ್ಮ ಪಾಡಿಗೆ ನಾವು ತ್ರಿವೇಣಿ ಸಂಗಮದತ್ತ ಪುಣ್ಯ ಸ್ನಾನ ಮಾಡೋದಕ್ಕೆ ಅಂತಾ ಹೋಗಿದ್ದೆವು ಎಂದರು.

ಪ್ರಯಾಗರಾಜ್‌ನಲ್ಲಿ ಸ್ನಾನಕ್ಕೆ ಹೋಗಲು ಮತ್ತು ಬರಲು ಇರುವ ರಸ್ತೆ ಇಲ್ಲಿಗೆ ಬಂದಿರುವ ಕೋಟ್ಯಂತರ ಜನಕ್ಕೆ ಏನೇನೂ ಸಾಲದು. ಅಲ್ಪ ಜಾಗದಲ್ಲೇ ಬಹಳ ಜನ ಕೂಡಿದರೆ ಪರಿಸ್ಥಿತಿ ಹದಗೆಡುತ್ತದೆ. ಅದರಂತೆ ಬುಧವಾರ ಬೆಳಗಿನ ಜಾವ 1 ಗಂಟೆಯಿಂದ 3 ಗಂಟೆಯವರೆಗೆ ಜನರಿಗೆ ಪುಣ್ಯಸ್ನಾನ ಮಾಡಲು ತ್ರಿವೇಣಿ ಸಂಗಮದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಾಧುಗಳು, ಸಂತರು ಎಲ್ಲರೂ ಒಟ್ಟಿಗೆ ಬರ್ತಾರೆ. ನಾಗಾಸಾಧುಗಳು 3 ಗಂಟೆ ನಂತರ ಬ್ರಾಹ್ಮಿ ಮುಹೂರ್ತದಲ್ಲೇ ಸ್ನಾನ ಮಾಡುತ್ತಾರೆ. ಅವರೊಟ್ಟಿಗೆ ಜನರು ನುಗ್ಗಿದ್ದರಿಂದ ಭಾರೀ ನೂಕುನುಗ್ಗಲು ಉಂಟಾಯಿತು. ಘಟನೆ ನಡೆದ ಸ್ಥಳದಿಂದ ನಾವು ಕೂಡ 1 ಕಿ.ಮೀ. ದೂರದಲ್ಲಿದ್ದೆವು. ಸ್ನಾನ ಮುಗಿಸಿಕೊಂಡು ವಾಪಸ್ ಬರುವಾಗ ಘಟನೆ ನಡೆಯಿತು ಎಂದು ಅವರು ತಿಳಿಸಿದರು.