ಸಾರಾಂಶ
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಹೊಸದಾಗಿ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹೊರಡಿಸಿದ್ದ ಆದೇಶಕ್ಕೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಂಡಿದೆ.
ಧಾರವಾಡ : ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಹೊಸದಾಗಿ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹೊರಡಿಸಿದ್ದ ಆದೇಶಕ್ಕೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಂಡಿದೆ. ಇದರಿಂದಾಗಿ ಈ ಮೊದಲು ನಿಗದಿಯಾಗಿದ್ದಂತೆ ಡಿ.29ರಂದು ಮರುಪರೀಕ್ಷೆ ನಡೆಸಲು ಕೆಪಿಎಸ್‌ಸಿಗೆ ಹಾದಿ ಸುಗಮಗೊಂಡಂತಾಗಿದೆ.
ಇಲ್ಲಿಯ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರದೀಪ ಸಿಂಗ್ ಯೆರೂರ ಅವರಿದ್ದ ಏಕಸದಸ್ಯ ಪೀಠ, ಈ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಆದರೆ, ಈ ಕುರಿತಂತೆ ಅರ್ಜಿದಾರರು ಬಯಸಿದರೆ ಕರ್ನಾಟಕ ಆಡಳಿತಾತ್ಮಕ ಮಂಡಳಿ (ಕೆಎಟಿ) ಮೊರೆ ಹೋಗಬಹುದು ಎಂಬ ಅಭಿಪ್ರಾಯವನ್ನು ಸಹ ಪೀಠ ವ್ಯಕ್ತಪಡಿಸಿದೆ.
ಪ್ರಕರಣವೇನು?:
ಕೆಎಎಸ್ 40 ಹುದ್ದೆಗಳೂ ಸೇರಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ‘ಗ್ರೂಪ್ ಎ’ ಮತ್ತು ‘ಗ್ರೂಪ್ ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆಗಳಲ್ಲಿ ಹಲವು ತಪ್ಪುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮರುಪರೀಕ್ಷೆ ಮಾಡಬೇಕು ಎಂದು ಪರೀಕ್ಷಾರ್ಥಿಗಳು ಸಿಎಂಗೆ ಮನವಿ ಮಾಡಿದ್ದರು. ಸಿಎಂ ಮರುಪರೀಕ್ಷೆಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಡಿ.29ರಂದು ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಿತ್ತು.
ಆದರೆ, ಈ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಹೊಸದಾಗಿ ನಡೆಸುವ ಕೆಪಿಎಸ್‌ಸಿ ಆದೇಶ ಸರಿಯಲ್ಲ. ಸಿಎಂ ಹಾಗೂ ಸರ್ಕಾರದ ಕಾರ್ಯದರ್ಶಿಗಳ ಆದೇಶದಂತೆ ಕೆಪಿಎಸ್ಸಿ ಮರುಪರೀಕ್ಷೆ ನಡೆಸುತ್ತಿದೆ. ಹೀಗಾಗಿ, ಈ ಆದೇಶ ರದ್ದುಪಡಿಸಿ ಎಂದು ಕೋರಿ ಬೆಳಗಾವಿಯ ಸ್ಫೂರ್ತಿ ಭೈರಪ್ಪನವರ ಸೇರಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು.