ಸಾರಾಂಶ
ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಬಿಜೆಪಿ 150-160 ಸ್ಥಾನ ಗೆಲ್ಲುತ್ತೆ ಎಂದು ಖಾಸಗಿ ಸಮೀಕ್ಷೆಯೊಂದು ಹೇಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕಲಬುರಗಿ : ಗ್ಯಾರಂಟಿ ಜಾರಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಹೀಗಾಗಿ, ಜನ ಬೇಸರಗೊಂಡಿದ್ದಾರೆ. ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಬಿಜೆಪಿ 150-160 ಸ್ಥಾನ ಗೆಲ್ಲುತ್ತೆ ಎಂದು ಖಾಸಗಿ ಸಮೀಕ್ಷೆಯೊಂದು ಹೇಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಛಲವಾದಿ ನಾರಾಯಣ ಸ್ವಾಮಿಯವರ ಗೃಹಬಂಧನ ಖಂಡಿಸಿ, ಬಿಜೆಪಿ ಹಮ್ಮಿಕೊಂಡಿದ್ದ ಕಲಬುರಗಿ ಚಲೋದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆಪರೇಷನ್ ಸಿಂದೂರದ ಬಗ್ಗೆ ಇಡೀ ಜಗತ್ತೆ ಮೆಚ್ಚಿದೆ. ಆದರೆ, ಕಾಂಗ್ರೆಸ್ ನವರು ಮಾತ್ರ ಅಪಸ್ವರದ ಬಗ್ಗೆ ಮಾತನಾಡುತ್ತಿದ್ದಾರೆ. ‘ನಮ್ಮ ಪಾಕಿಸ್ತಾನ’ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಹೇಳ್ತಾರೆ. ಇದನ್ನು ಪ್ರಶ್ನೆ ಮಾಡಿದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಈ ರೀತಿ ಅವಮಾನ ಮಾಡೋದಾ? ಎಂದು ಅವರು ಪ್ರಶ್ನಿಸಿದರು. ಅಧಿಕಾರ ಶಾಶ್ವತ ಅಲ್ಲ ಪ್ರಿಯಾಂಕ್ ಖರ್ಗೆಯವರೇ, ನಿಮ್ಮ ದರ್ಪ, ಸೊಕ್ಕು ಮುರಿಯುವ ಕೆಲಸವನ್ನು ಈ ಭಾಗದ ಜನ ಮಾಡ್ತಾರೆ. ನಿಮ್ಮ ತಂದೆ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಂತಹ ನಾಯಕನ ಮಗನಾಗಿ ನಿಮ್ಮ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಕಿಡಿ ಕಾರಿದರು.
ನನಗೆ ಪ್ರಿಯಾಂಕ್ ಖರ್ಗೆ ಬಗ್ಗೆ ಮರುಕವಿದೆ, ಅಭಿವೃದ್ಧಿಗೆಂದು ಜನ ಇವರನ್ನು ಗೆಲ್ಲಿಸಿದ್ರೆ ಇವರು ಬರೀ ಟೀಕೆಯಲ್ಲೇ ಕಾಲಹರಣ ಮಾಡ್ತಿದ್ದಾರೆ. ಇಲ್ಲಿನ ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಿದರೇನೆ ಇವರ ಪ್ರಗತಿಪರ ಚಿಂತನೆ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದರು.