9 ವಿವಿ ಮುಚ್ಚುವ ನಿರ್ಧಾರ ಕೈಬಿಡದೆ ಇದ್ದರೆ ಸದನದ ಒಳ- ಹೊರಗೆ ಹೋರಾಟ : ಬಿಜೆಪಿ, ಎಬಿವಿಪಿ ಎಚ್ಚರಿಕೆ

| N/A | Published : Feb 22 2025, 11:42 AM IST

BY vijayendraa

ಸಾರಾಂಶ

ಒಂಬತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡದಿದ್ದರೆ ಮಾ.3ರಿಂದ ಆರಂಭವಾಗುವ ರಾಜ್ಯ ವಿಧಾನಮಂಡಲದ ಅಧಿವೇಶನದ ಒಳ-ಹೊರಗೆ ಹೋರಾಟಕ್ಕಿಳಿಯುವುದಾಗಿ ಪ್ರತಿಪಕ್ಷ ಬಿಜೆಪಿ ಮತ್ತು ಎಬಿವಿಪಿ ಎಚ್ಚರಿಕೆ ನೀಡಿವೆ.

 ಬೆಂಗಳೂರು : ಒಂಬತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡದಿದ್ದರೆ ಮಾ.3ರಿಂದ ಆರಂಭವಾಗುವ ರಾಜ್ಯ ವಿಧಾನಮಂಡಲದ ಅಧಿವೇಶನದ ಒಳ-ಹೊರಗೆ ಹೋರಾಟಕ್ಕಿಳಿಯುವುದಾಗಿ ಪ್ರತಿಪಕ್ಷ ಬಿಜೆಪಿ ಮತ್ತು ಎಬಿವಿಪಿ ಎಚ್ಚರಿಕೆ ನೀಡಿವೆ.

ವಿವಿಗಳನ್ನು ಮುಚ್ಚುವ ನಿರ್ಧಾರ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಶುಕ್ರವಾರ ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ‘ಶಿಕ್ಷಣ ತಜ್ಞರ ದುಂಡುಮೇಜಿನ ಸಭೆ’ಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಾಲ್ವರು ಮಾಜಿ ಉನ್ನತ ಶಿಕ್ಷಣ ಸಚಿವರು, ವಿವಿಧ ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು, ವಿಧಾನ ಪರಿಷತ್‌ ಸದಸ್ಯರು ಹಿಂದುಳಿದ ಜಿಲ್ಲೆಗಳಲ್ಲಿ ಸಾಮಾಜಿಕ ಅಸಮತೋಲನ ಸರಿಪಡಿಸುವ ದೃಷ್ಟಿಯಿಂದ ಸ್ಥಾಪಿಸಿರುವ ವಿವಿಗಳನ್ನು ಮುಚ್ಚುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಒಮ್ಮತದಿಂದ ವಿರೋಧಿಸಿದರು.

ವಿಜಯೇಂದ್ರ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಹಣಕಾಸಿನ ಕೊರತೆ ಹೆಸರಲ್ಲಿ 9 ವಿವಿಗಳನ್ನು ಮುಚ್ಚಲು ಕೈಗೊಂಡಿರುವ ತೀರ್ಮಾನ ಅವಿವೇಕದ್ದು. ಕೂಡಲೇ ಎಚ್ಚೆತ್ತು ಈ ನಿರ್ಧಾರ ಕೈಬಿಡದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದರು.

ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ನಾವು ವೈಜ್ಞಾನಿಕವಾಗಿ ಅಧ್ಯಯನ ನಡೆಸಿಯೇ ಈ ವಿವಿಗಳನ್ನು ಸ್ಥಾಪಿಸಿದ್ದೇವೆ. ಬಾಗಲಕೋಟೆ ವಿವಿ ಹೊರತುಪಡಿಸಿ ಉಳಿದೆಲ್ಲ ವಿವಿಗಳಿಗೆ ಕನಿಷ್ಠ 50 ಎಕರೆ ಜಾಗ, ಆಡಳಿತ ಕಟ್ಟಡ, ತಲಾ 25 ಬೋಧಕ, ಬೋಧಕೇತರರನ್ನು ಇತರೆ ವಿವಿಗಳಿಂದ ವರ್ಗಾವಣೆ ಮಾಡಿ ಸ್ಥಾಪಿಸಲಾಗಿದೆ. ಆದರೆ, ರಾಜಕೀಯ ಪ್ರೇರಿತವಾಗಿ ಇವುಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಎಬಿವಿಪಿ ಹೋರಾಟಕ್ಕೆ ಸಂಪೂರ್ಣ ಸಹಕಾರದ ಜೊತೆಗೆ ಬಿಜೆಪಿಯೂ ಹೋರಾಟ ನಡೆಸಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರು ಲಾಭ ಇಲ್ಲದೆ ಏನೂ ಮಾಡುವುದಿಲ್ಲ. ಆದರೆ, ಇಲ್ಲಿ ರಾಜಕೀಯ ಲಾಭ ಇಲ್ಲದಿದ್ದರೂ ವ್ಯಾವಹಾರಿಕ ಲಾಭಕ್ಕಾಗಿ ವಿವಿಗಳ ಬಂದ್‌ಗೆ ತೀರ್ಮಾನಿಸಿದ್ದಾರೆ. ಇದರ ವಿರುದ್ಧ ಉಭಯ ಸದನಗಳಲ್ಲಿ ಬಿಜೆಪಿ ಹೋರಾಟ ನಡೆಸಬೇಕು ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಮಾತನಾಡಿ, ಸರ್ಕಾರದ ನಿರ್ಧಾರ ನಾಚಿಕೆಗೇಡು. ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು. ಜನರ ಮೇಲೆ ಹೆಚ್ಚಿನ ತೆರಿಗೆ ಹೊರಿಸಿ ಗ್ಯಾರಂಟಿಗಳು ನಿಲ್ಲದಂತೆ ನೋಡಿಕೊಳ್ಳುತ್ತಿರುವ ಸರ್ಕಾರ, ಹಿಂದುಳಿದ ಪ್ರದೇಶಗಳ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸ್ಥಾಪಿಸಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚದೆ ಸಿಎಸ್‌ಆರ್‌ ಅನುದಾನ, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎನ್‌.ಮಹೇಶ್‌, ವಿಶ್ರಾಂತ ಕುಲಪತಿಗಳಾದ ಪ್ರೊ.ಸಿದ್ದೇಗೌಡ, ಎಸ್.ಸಿ.ಶರ್ಮಾ, ವಿಷ್ಣುಕಾಂತ್ ಚಟ್ಪಲ್ಲಿ, ವಿಮರ್ಶಕ ರವೀಂದ್ರ ರೇಷ್ಮೆ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ.ಸಂಕನೂರ, ಹೇಮಲತಾ, ಅರುಣ್‌ ಕುಮಾರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್ ಶಹಾಪುರ್ ಮತ್ತಿತರರು ಭಾಗವಹಿಸಿದ್ದರು.