ಸ್ಕೈವಾಕ್‌ ಲಿಫ್ಟ್‌ನಲ್ಲಿ ಸಿಲುಕಿ ಮಹಿಳೆ ಪರದಾಟ ನಾಗರಭಾವಿ ಬಸ್‌ ನಿಲ್ದಾಣದಲ್ಲಿ ಘಟನೆ

| N/A | Published : Feb 25 2025, 07:48 AM IST

nancy tiwari

ಸಾರಾಂಶ

ವಿದ್ಯುತ್ ಸಂಪರ್ಕ ಹಠಾತ್ ಕಡಿತಗೊಂಡ ಪರಿಣಾಮ ಸ್ಕೈವಾಕ್‌ನ ಲಿಫ್ಟ್‌ನಲ್ಲಿ ಸಿಲುಕಿ ಆತಂಕಕ್ಕೊಳಗಾಗಿದ್ದ ಮಹಿಳೆಯೊಬ್ಬರನ್ನು ಚಂದ್ರಾಲೇಔಟ್ ಠಾಣೆ ಹೊಯ್ಸಳ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ.

  ಬೆಂಗಳೂರು : ವಿದ್ಯುತ್ ಸಂಪರ್ಕ ಹಠಾತ್ ಕಡಿತಗೊಂಡ ಪರಿಣಾಮ ಸ್ಕೈವಾಕ್‌ನ ಲಿಫ್ಟ್‌ನಲ್ಲಿ ಸಿಲುಕಿ ಆತಂಕಕ್ಕೊಳಗಾಗಿದ್ದ ಮಹಿಳೆಯೊಬ್ಬರನ್ನು ಚಂದ್ರಾಲೇಔಟ್ ಠಾಣೆ ಹೊಯ್ಸಳ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ.

ಹೊಯ್ಸಳ ನಗರದ ನಾಗಮ್ಮ ರಕ್ಷಣೆಗೊಳಗಾಗಿದ್ದು, ನಾಗರಬಾವಿ ಬಸ್‌ ನಿಲ್ದಾಣದ ಸ್ಕೈವಾಕ್‌ನ ಲಿಫ್ಟ್‌ನಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ನಮ್ಮ-112ಕ್ಕೆ (ಪೊಲೀಸ್ ನಿಯಂತ್ರಣ ಕೊಠಡಿ) ನಾಗರಿಕರೊಬ್ಬರು ಮಾಡಿದ ಕರೆಗೆ ಸ್ಪಂದಿಸಿ ನಾಗಮ್ಮ ಅವರನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ರವೀಂದ್ರ ಹಾಗೂ ಹೆಡ್‌ ಕಾನ್‌ಸ್ಟೇಬಲ್ ನಂಜೇಶ್ ರಕ್ಷಿಸಿದ್ದಾರೆ.

ತಮ್ಮ ಕುಟುಂಬದ ಜತೆ ಹೊಯ್ಸಳ ನಗರದಲ್ಲಿ ನೆಲೆಸಿರುವ ನಾಗಮ್ಮ ಅವರು, ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ ಗುರುವಾರ ನಾಗರಬಾವಿ ಹತ್ತಿರ ಮನೆಗೆಲಸಕ್ಕೆ ಹೋಗಿ ಅವರು ಮನೆಗೆ ಮರಳುತ್ತಿದ್ದರು. ಆಗ ನಾಗರಬಾವಿ ವೃತ್ತದಲ್ಲಿ ಸ್ಕೈವಾಕ್‌ನ ಲಿಫ್ಟ್‌ಗೆ ಅವರು ಹತ್ತಿದ್ದಾರೆ. ಇದಾದ ಕೆಲ ಸೆಕೆಂಡ್‌ನಲ್ಲಿ ಲಿಫ್ಟ್‌ಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿ ಲಿಫ್ಟ್‌ ಅರ್ಧಕ್ಕೆ ನಿಂತಿದೆ. ಇದರಿಂದ ಲಿಫ್ಟ್‌ನೊಳಗಿದ್ದ ನಾಗಮ್ಮ ಅವರು ಭೀತಿಗೊಂಡು ರಕ್ಷಣೆಗೆ ಜೋರಾಗಿ ಕೂಗಿದ್ದಾರೆ. ಆಗ ಅವರ ಕೂಗಾಟ ಕೇಳಿ ಕೂಡಲೇ ನಮ್ಮ-122ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಚಂದ್ರಾಲೇಔಟ್ ಠಾಣೆ ಹೊಯ್ಸಳಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ಹೋಗಿದೆ. ಇದಾದ ಕೆಲವೇ ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಹೊಯ್ಸಳ ವಾಹನದಲ್ಲಿ ಎಎಸ್‌ಐ ರವೀಂದ್ರ ಹಾಗೂ ಎಚ್‌ಸಿ ನಂಜೇಶ್ ಧಾವಿಸಿದ್ದಾರೆ.

ಹೇಗೆ ನಡೆಯಿತು ಆಪರೇಷನ್‌

‘ಲಿಫ್ಟ್‌ನಲ್ಲಿ ಮೇಲಿನಿಂದ ಕೆಳ ಇಳಿಯುವಾಗ ನಾಗಮ್ಮ ಸಂಕಷ್ಟಕ್ಕೆ ಸಿಲುಕಿದ್ದರು. ಗಾಜಿನ ಲಿಫ್ಟ್‌ ಆಗಿದ್ದರಿಂದ ನಮ್ಮನ್ನು ನೋಡಿದ ಕೂಡಲೇ ಅವರು ಕೈ ಬೀಸಿದರು. ನಾವು ಗಾಬರಿಗೊಳಗಾದಂತೆ ಸಮಾಧಾನ ಮಾಡಿದೆವು. ಅಷ್ಟರಲ್ಲಿ ಘಟನಾ ಸ್ಥಳಕ್ಕೆ ಜಮಾಯಿಸಿದ ಏಳೆಂಟು ಜನರಲ್ಲಿ ಒಬ್ಬಾತ ಈ ಹಿಂದೆ ಲಿಫ್ಟ್‌ ನಿರ್ವಹಣೆಕಾರನಾಗಿದ್ದ. ಆತನ ಸೂಚನೆ ಮೇರೆಗೆ ಲಿಫ್ಟ್‌ನ ಮೇಲ್ಬಾಗದಲ್ಲಿದ್ದ ಕಬ್ಬಿಣದ ವೈರ್‌ಗಳನ್ನು ಮೇಲಕ್ಕೆ ಎಳೆಯಲಾಯಿತು. ಎರಡ್ಮೂರು ಅಡಿ ಮೇಲಕ್ಕೆ ಬಂದ ಬಳಿಕ ಲಿಫ್ಟ್‌ ಮುಚ್ಚಳ ತೆಗೆದು ಅದರೊಳಗೆ ಸಿಲುಕಿದ್ದ ನಾಗಮ್ಮರವರನ್ನು ಕೈ ಹಿಡಿದು ಹೊರಗೆ ಕರೆತಂದ್ದೇವು’ ಎಂದು ಎಎಸ್‌ಐ ರವೀಂದ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದರು.