ಗಣರಾಜ್ಯೋತ್ಸವದಲ್ಲಿ ಈ ಬಾರಿ ''ಸ್ವರ್ಣಿಮ್ ಭಾರತ್'' - ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತೀಯ ಸೇನೆ ಸಜ್ಜು

| N/A | Published : Jan 25 2025, 01:25 PM IST

indian army day 2025

ಸಾರಾಂಶ

ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತೀಯ ಸೇನೆ ಸಜ್ಜು । ದೆಹಲಿಯ ಕರ್ತವ್ಯ ಪಥದಲ್ಲಿ ನಾಳೆ ಭಾರತದ ಪರಂಪರೆ, ಶೌರ್ಯ, ಪ್ರಗತಿಯ ಅನಾವರಣ

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಜನವರಿ 26ರಂದು 76ನೇ ಗಣರಾಜ್ಯೋತ್ಸವವನ್ನು ಸಂಭ್ರಮಿಸಲು ಭಾರತ ಸಿದ್ಧವಾಗುತ್ತಿದೆ. ಭಾರತದ ಮುಖ್ಯವಾದ ರಾಷ್ಟ್ರೀಯ ಆಚರಣೆಗಳಲ್ಲಿ ಒಂದಾದ ಗಣರಾಜ್ಯೋತ್ಸವಕ್ಕಾಗಿ ನವದೆಹಲಿಯ ಕರ್ತವ್ಯ ಪಥದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರತಿವರ್ಷವೂ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಮಿಲಿಟರಿ ಸಾಮರ್ಥ್ಯ, ಮತ್ತು ತಾಂತ್ರಿಕ ಆಧುನಿಕತೆಗಳನ್ನು ಪ್ರದರ್ಶಿಸಿ, ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರ ಕಣ್ಮನ ಸೆಳೆಯುತ್ತದೆ.

ಈ ವರ್ಷದ ಗಣರಾಜ್ಯೋತ್ಸವ ಪೆರೇಡ್ ''ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್'' (ಸುವರ್ಣ ಭಾರತ: ಸಂಸ್ಕೃತಿ ಮತ್ತು ಅಭಿವೃದ್ಧಿ) ಎಂಬ ಘೋಷವಾಕ್ಯದಡಿ ನಡೆಯಲಿದ್ದು, ಭಾರತ ಸಾಗಿಬಂದ ಐತಿಹಾಸಿಕ ಹಾದಿ, ಆಧುನಿಕತೆ ಮತ್ತು ಸಂಪ್ರದಾಯಗಳ ಸಮ್ಮಿಲನವನ್ನು ಸಾರಲಿದೆ. ಅತ್ಯಂತ ಸೊಗಸಾಗಿ ಪಥ ಸಂಚಲನ ನಡೆಸುವ ತಂಡಗಳಿಂದ, ಅತ್ಯಾಧುನಿಕವಾದ, ದೇಶೀಯವಾಗಿ ನಿರ್ಮಿಸಿರುವ ರಕ್ಷಣಾ ಉಪಕರಣಗಳ ತನಕ 2025ರ ಗಣರಾಜ್ಯೋತ್ಸವ ಪೆರೇಡ್ ದೇಶದ ಭಾರತೀಯ ಸೇನೆಯ ಬದ್ಧತೆ, ಭಾರತದ ವೈವಿಧ್ಯತೆ ಮತ್ತು ಮಹತ್ವಾಕಾಂಕ್ಷೆಗಳನ್ನು ಪ್ರದರ್ಶಿಸಲಿದೆ.

ವೈಭವದ ಹೆಜ್ಜೆ: ಸಂಪ್ರದಾಯ ಮತ್ತು ಶೌರ್ಯಕ್ಕೆ ಗೌರವ

ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ್ತಾ, ಭಾರತೀಯ ಸೇನೆಯ ಇತಿಹಾಸ, ಶೌರ್ಯ ಮತ್ತು ಶಿಸ್ತನ್ನು ಪ್ರದರ್ಶಿಸುವ ತಂಡಗಳು ಗಣರಾಜ್ಯೋತ್ಸವ ಪಥ ಸಂಚಲನದ ಬೆನ್ನೆಲುಬಾಗಿವೆ. ಈ ವರ್ಷ, ಆರು ಐತಿಹಾಸಿಕ ರೆಜಿಮೆಂಟ್‌ಗಳು ಪಥ ಸಂಚಲನದಲ್ಲಿ ಭಾಗವಹಿಸಲಿದ್ದು, ಪ್ರತಿಯೊಂದು ತಂಡವೂ ತನ್ನದೇ ಆದ ಪರಂಪರೆಯನ್ನು ಹೊಂದಿದೆ.

ಬ್ರಿಗೇಡ್ ಆಫ್ ದ ಗಾರ್ಡ್ಸ್: ಸ್ವಾತಂತ್ರ್ಯಾನಂತರ ಸ್ಥಾಪಿಸಲಾದ ಈ ರೆಜಿಮೆಂಟ್, ''ಸಮಸ್ತ ಭಾರತದ, ಎಲ್ಲಾ ವರ್ಗಗಳ'' ನೇಮಕಾತಿಯನ್ನು ಆರಂಭಿಸಿದ ಮೊದಲ ವಿಭಾಗವಾಗಿದ್ದು, ರಾಷ್ಟ್ರೀಯ ಸಮಗ್ರತೆಯನ್ನು ಪ್ರತಿನಿಧಿಸುತ್ತದೆ. ಅಸಾಧಾರಣ ವೃತ್ತಿಪರತೆಗೆ ಹೆಸರಾಗಿರುವ ಬ್ರಿಗೇಡ್ ಆಫ್ ದ ಗಾರ್ಡ್ಸ್, ಹಲವಾರು ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ, ಬಹಳಷ್ಟು ಯುದ್ಧ ಪದಕಗಳನ್ನು ಸಂಪಾದಿಸಿದೆ.

ಮಹರ್ ರೆಜಿಮೆಂಟ್: ಮಧ್ಯ ಭಾರತ ಮೂಲದ ಈ ರೆಜಿಮೆಂಟ್, ಎರಡನೇ ಮಹಾಯುದ್ಧದ ಕಾಲದಿಂದಲೂ ತನ್ನ ಇತಿಹಾಸವನ್ನು ಹೊಂದಿದೆ. ತನ್ನ ಶೌರ್ಯಕ್ಕೆ ಹೆಸರಾಗಿರುವ ಮಹರ್ ರೆಜಿಮೆಂಟ್, 1965 ಮತ್ತು 1971ರ ಯುದ್ಧಗಳೂ ಸೇರಿದಂತೆ, ವಿವಿಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು, ಸವಾಲಿನ ಪ್ರದೇಶಗಳಲ್ಲಿ ಕಾರ್ಯಾಚರಿಸಿ, ಪುರಸ್ಕಾರಗಳನ್ನು ಪಡೆದುಕೊಂಡಿದೆ.

ಜಾಟ್ ರೆಜಿಮೆಂಟ್: ಭಾರತೀಯ ಸೇನೆಯ ಅತ್ಯಂತ ಹಳೆಯ ರೆಜಿಮೆಂಟ್‌ಗಳಲ್ಲಿ ಒಂದಾಗಿರುವ ಜಾಟ್ ರೆಜಿಮೆಂಟ್, 19ನೇ ಶತಮಾನದ ಆರಂಭದಿಂದಲೂ ತನ್ನ ಅಸಾಧಾರಣ ಧೈರ್ಯ ಮತ್ತು ಸೇವೆಗಳಿಂದ ಹೆಸರಾಗಿದೆ. ''ಸಂಘಟನ್ ವಾ ವೀರತಾ'' (ಒಗ್ಗಟ್ಟು ಮತ್ತು ಶೌರ್ಯ) ಎಂಬ ರೆಜಿಮೆಂಟಿನ ಧ್ಯೇಯ ರೆಜಿಮೆಂಟ್ ಹೇಗಿದೆ ಎಂಬ ಚಿತ್ರಣವನ್ನು ಕಟ್ಟಿಕೊಡುತ್ತದೆ.

ಗರ್ವಾಲ್ ರೈಫಲ್ಸ್: ಉತ್ತರಾಖಂಡದ ವೀರ ಯೋಧರನ್ನು ಪ್ರತಿನಿಧಿಸುವ ಈ ರೆಜಿಮೆಂಟ್, ವಿವಿಧ ಕದನಗಳಲ್ಲಿ, ಅದರಲ್ಲೂ ಎರಡೂ ಮಹಾಯುದ್ಧಗಳು ಮತ್ತು ಸ್ವಾತಂತ್ರ್ಯಾನಂತರ ಭಾರತ ಭಾಗವಹಿಸಿದ ಯುದ್ಧಗಳಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದೆ. ತನ್ನ ಶಿಸ್ತು, ಧೈರ್ಯಕ್ಕೆ ಹೆಸರಾಗಿರುವ ಈ ಪಡೆ, ಭಾರತೀಯ ಸೇನೆಯಲ್ಲಿ ಹೆಮ್ಮೆಯ ಸ್ಥಾನ ಸಂಪಾದಿಸಿದೆ.

ಜಮ್ಮು ಆ್ಯಂಡ್ ಕಾಶ್ಮೀರ್ ರೈಫಲ್ಸ್:ಐತಿಹಾಸಿಕ ಜಮ್ಮು ಮತ್ತು ಕಾಶ್ಮೀರದ ರಾಜ ಪ್ರಭುತ್ವದ ಸಮಯದಿಂದಲೂ ಚಾಲ್ತಿಯಲ್ಲಿರುವ ಈ ರೆಜಿಮೆಂಟ್, ಭಾರತೀಯ ಸೇನೆಯಲ್ಲಿ ವಿವಿಧ ಸಮುದಾಯಗಳಿಗೆ ಸ್ಥಾನ ಕಲ್ಪಿಸಿತ್ತು. ಭಾರತದ ಉತ್ತರದ ಗಡಿಗಳನ್ನು ಸುರಕ್ಷಿತವಾಗಿಸುವಲ್ಲಿ ಈ ರೆಜಿಮೆಂಟಿನ ಪಾತ್ರ ಬಹುಮುಖ್ಯವಾಗಿದೆ.

ಕಾರ್ಪ್ಸ್ ಆಫ್ ಸಿಗ್ನಲ್ಸ್: ''ಭಾರತೀಯ ಸೇನೆಯ ನರನಾಡಿಗಳು'' ಎಂದು ಹೆಸರಾಗಿರುವ ಈ ವಿಭಾಗ, ಕಾರ್ಯಾಚರಣೆಗಳ ಸಂದರ್ಭದಲ್ಲಿ ಅಡಚಣೆಯಿಲ್ಲದ ಸಂವಹನ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ವಿಭಾಗದ ತಾಂತ್ರಿಕ ಪ್ರಾವೀಣ್ಯತೆ, ಆಧುನಿಕ ಯುದ್ಧರಂಗದಲ್ಲಿ ಸೇನೆ ಪೂರ್ಣ ಸಂಪರ್ಕ ಸಾಧಿಸಿ, ಸಂಯೋಜಿತವಾಗಿರುವಂತೆ ಮಾಡುತ್ತದೆ.

ಈ ತಂಡಗಳ ಜೊತೆಗೆ, ಇಂದಿಗೂ ಕಾರ್ಯಾಚರಿಸುತ್ತಿರುವ ಜಗತ್ತಿನ ಕಡೆಯ ಅಶ್ವಾರೋಹಿ ಪಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 61ನೇ ಕ್ಯಾವಲ್ರಿ ರೆಜಿಮೆಂಟ್ ಸಹ ಪೆರೇಡ್‌ನಲ್ಲಿ ಭಾಗವಹಿಸಲಿದೆ. ರೆಜಿಮೆಂಟಿನ ಭವ್ಯ ಕುದುರೆಗಳು ಮತ್ತು ಸಮರ್ಥ ಸವಾರರು ಭಾರತೀಯ ಸೇನೆಯಲ್ಲಿ ಮುಂದುವರಿದಿರುವ ಐತಿಹಾಸಿಕ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ. ಈ ರೆಜಿಮೆಂಟ್ ಅಶ್ವಪಡೆಗಳ ಯುದ್ಧದ ಪರಂಪರೆಯ ಮುಂದುವರಿಕೆಯಾಗಿದ್ದು, ಆಧುನಿಕ ಯಂತ್ರ, ಆಯುಧಗಳ ಕಾಲದಲ್ಲೂ ಇತಿಹಾಸವನ್ನು ನೆನಪಿಸುತ್ತದೆ.

ತಾಂತ್ರಿಕ ಪ್ರಾವೀಣ್ಯತೆ: ಭಾರತದ ರಕ್ಷಣಾ ಸಾಮರ್ಥ್ಯ ಪ್ರದರ್ಶನ

ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಎಲ್ಲರೂ ಅತ್ಯಂತ ಕುತೂಹಲದಿಂದ ಕಾಯುವ ಅಂಶವೆಂದರೆ, ಮಿಲಿಟರಿ ಉಪಕರಣಗಳ ಪ್ರದರ್ಶನ. ಇವುಗಳು ಭಾರತದ ತಾಂತ್ರಿಕ ಸಾಮರ್ಥ್ಯ ಮತ್ತು ಕಾರ್ಯಾಚರಣಾ ಸಿದ್ಧತೆಗಳನ್ನು ತೆರೆದಿಡಲಿವೆ.

ಟಿ-90 ಭೀಷ್ಮ: ಭಾರತ ರಷ್ಯಾದ ಜೊತೆಗೂಡಿ ಅಭಿವೃದ್ಧಿ ಪಡಿಸಿರುವ ಈ ಯುದ್ಧ ಟ್ಯಾಂಕ್ ಅತ್ಯಾಧುನಿಕ ಆಯುಧ ಸಾಮರ್ಥ್ಯ, ಪ್ರಬಲ ಬತ್ತಳಿಕೆ, ಶಕ್ತಿಶಾಲಿ ಇಂಜಿನ್ ಹೊಂದಿ, ಯುದ್ಧರಂಗದಲ್ಲಿ ಅಸಾಧಾರಣ ಶಕ್ತಿಯಾಗಿದೆ. ಇದರ ಯುದ್ಧ ಪ್ರದರ್ಶನ ಭಾರತೀಯ ಸೇನೆಗೆ ಮೇಲುಗೈ ಒದಗಿಸಿದೆ.

ಐಸಿವಿ ಬಿಎಂಪಿ-II (ಸಾರಥ್): ಇದೊಂದು ಸಶಸ್ತ್ರ ವಾಹನವಾಗಿದ್ದು, ತನ್ನ ಕುಶಲತೆ ಮತ್ತು ಬಹುಮುಖತೆಗೆ ಹೆಸರಾಗಿದೆ. ಸಾರಥ್ ವಿವಿಧ ಪ್ರದೇಶಗಳಲ್ಲಿ ಪದಾತಿದಳದ ಚಲನಾ ಸಾಮರ್ಥ್ಯ ಮತ್ತು ಆಯುಧ ಬಲವನ್ನು ಹೆಚ್ಚಿಸುತ್ತದೆ. ಇದು ವಿಭಿನ್ನ ಭೂ ಪ್ರದೇಶಗಳಲ್ಲಿ ಕಾರ್ಯಾಚರಿಸಬಲ್ಲ ವಾಹನವಾಗಿದ್ದು, ಕ್ಷಿಪ್ರ ಪ್ರತಿಕ್ರಿಯಾ ಕಾರ್ಯಾಚರಣೆಗಳ ಮುಖ್ಯ ಭಾಗವಾಗಿದೆ.

ನಾಮಿಸ್ (ನಾಗ್ ಕ್ಷಿಪಣಿ ವ್ಯವಸ್ಥೆ): ಭಾರತದ ದೇಶೀಯ ಆಯುಧಗಳಲ್ಲಿ ಪ್ರಮುಖವಾಗಿರುವ ನಾಮಿಸ್, ಒಂದು ಆಧುನಿಕ ಆ್ಯಂಟಿ ಟ್ಯಾಂಕ್ ನಿರ್ದೇಶಿತ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದರ ಫೈರ್ ಆ್ಯಂಡ್ ಫಾರ್ಗೆಟ್ ಸಾಮರ್ಥ್ಯ ಮತ್ತು ನಿಖರ ದಾಳಿಯ ಶಕ್ತಿ ಇದನ್ನು ಆಧುನಿಕ ಯುದ್ಧದಲ್ಲಿ ಪ್ರಬಲ ಆಯುಧವಾಗಿಸಿದೆ.

ಪಿನಾಕಾ ರಾಕೆಟ್ ವ್ಯವಸ್ಥೆ (ಅಗ್ನಿಬಾಣ್): ಡಿಆರ್‌ಡಿಓ ನಿರ್ಮಿಸಿರುವ ಪಿನಾಕಾ, ಏಕಕಾಲದಲ್ಲಿ ಹಲವು ರಾಕೆಟ್‌ಗಳನ್ನು ಉಡಾವಣೆಗೊಳಿಸಬಲ್ಲದು. ಇದು ತನ್ನ ನಿಖರತೆ ಮತ್ತು ಮಾರಕತೆಗೆ ಹೆಸರಾಗಿದೆ. ಇದು ಭಾರತೀಯ ಸೇನೆಯ ಬತ್ತಳಿಕೆಯ ಆಧುನೀಕರಣದಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದು, ಕನಿಷ್ಠ ಸಮಯದಲ್ಲಿ ಗರಿಷ್ಠ ಉಡಾವಣೆ ನಡೆಸಬಲ್ಲದಾಗಿದೆ.

ಆಕಾಶ್ ವಾಯು ರಕ್ಷಣಾ ವ್ಯವಸ್ಥೆ: ಇದೊಂದು ಮಧ್ಯಮ ವ್ಯಾಪ್ತಿಯ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಭಾರತದ ವಾಯು ರಕ್ಷಣೆಯಲ್ಲಿ ಅವಶ್ಯಕವಾಗಿದೆ. ಗಾಳಿಯಲ್ಲಿ ಬರುವ ಅಪಾಯಗಳನ್ನು ನಿವಾರಿಸಬಲ್ಲ ಆಕಾಶ್, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಆದ್ಯತೆಗೆ ಉದಾಹರಣೆಯಾಗಿದೆ.

ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ: ಭಾರತ - ರಷ್ಯಾ ಸಹಯೋಗದ ಉತ್ಪನ್ನವಾಗಿರುವ ಬ್ರಹ್ಮೋಸ್, ಜಗತ್ತಿನ ಅತ್ಯಂತ ವೇಗವಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳಲ್ಲಿ ಒಂದಾಗಿದೆ. ಇದನ್ನು ಭೂಮಿ, ಸಮುದ್ರ, ಮತ್ತು ಗಾಳಿಯಿಂದಲೂ ಉಡಾಯಿಸಬಹುದಾಗಿದೆ.

ಯುದ್ಧರಂಗದ ಕಣ್ಗಾವಲು ವ್ಯವಸ್ಥೆ (ಸಂಜಯ್): ಈ ಆಧುನಿಕ ವ್ಯವಸ್ಥೆ ನೈಜ ಸಮಯದ ಚಿತ್ರಣವನ್ನು ಒದಗಿಸಿ, ಕಮಾಂಡರ್‌ಗಳಿಗೆ ಸರಿಯಾದ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.

ಲಘು ದಾಳಿ ವಾಹನಗಳು (ಬಜರಂಗ್): ಸವಾಲಿನ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸಲು ವಿನ್ಯಾಸಗೊಂಡಿರುವ ಈ ವಾಹನಗಳು ಆಯುಧ ವ್ಯವಸ್ಥೆ ಮತ್ತು ಕುಶಲ ಚಲನೆ ಎರಡನ್ನೂ ಹೊಂದಿ, ಕ್ಷಿಪ್ರ ದಾಳಿಗಳಿಗೆ ಸೂಕ್ತವಾಗಿವೆ. ಇವುಗಳು ವಿಚಕ್ಷಣೆ ಮತ್ತು ಕ್ಷಿಪ್ರ ದಾಳಿಗಳಿಗೆ ಹೇಳಿ ಮಾಡಿಸಿದಂತಿವೆ.

ಆಲ್ ಟೆರೇನ್ ವೆಹಿಕಲ್ಸ್ (ಚೇತಕ್): ಕಠಿಣವಾದ ಪ್ರದೇಶಗಳಿಗಾಗಿ ನಿರ್ಮಿಸಿರುವ ಈ ವಾಹನಗಳು ಅತ್ಯಂತ ತೀಕ್ಷ್ಣ ವಾತಾವರಣಗಳಲ್ಲಿ ಮತ್ತು ಕಷ್ಟಕರ ಭೂ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆಯನ್ನು ಸುಗಮವಾಗಿಸುತ್ತವೆ.

ಇವೆಲ್ಲ ಆಯುಧ, ವಾಹನಗಳನ್ನು ಸೇನೆಗೆ ಸೇರ್ಪಡೆಗೊಳಿಸಿರುವುದು ''ಆತ್ಮನಿರ್ಭರ ಭಾರತ'' ಯೋಜನೆಯಡಿ ರಕ್ಷಣಾ ಉತ್ಪನ್ನಗಳ ಸ್ವದೇಶೀ ನಿರ್ಮಾಣದತ್ತ ಭಾರತದ ಗಮನವನ್ನು ಸಾರುತ್ತಿವೆ.

ಭಾರತದ ಸಾಂಸ್ಕೃತಿಕ ಪರಂಪರೆ

ಭಾರತದ ಸಾಂಸ್ಕೃತಿಕ, ಅಭಿವೃದ್ಧಿಯ ಸಾಧನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳಿಲ್ಲದೆ ಗಣರಾಜ್ಯೋತ್ಸವ ಪೆರೇಡ್ ಪೂರ್ಣಗೊಳ್ಳುವುದಿಲ್ಲ. ಈ ವರ್ಷವೂ ವಿವಿಧ ಸ್ತಬ್ಧಚಿತ್ರಗಳು ಪಥ ಸಂಚಲನದಲ್ಲಿ ಪಾಲ್ಗೊಂಡು, ಭಾರತದ ಐತಿಹಾಸಿಕ ಪರಂಪರೆ, ಆಧುನಿಕ ಸಾಧನೆಗಳು ಸೇರಿದಂತೆ, ವಿವಿಧತೆಯಲ್ಲಿ ಏಕತೆ ಎಂಬ ಭಾರತದ ವೈಶಿಷ್ಟ್ಯವನ್ನು ಪ್ರದರ್ಶಿಸಲಿವೆ.

''ನಾರಿ ಶಕ್ತಿ'' ತಂಡ ಭಾರತೀಯ ಸೇನೆಯ ವಿವಿಧ ವಿಭಾಗಗಳ ಮಹಿಳಾ ಅಧಿಕಾರಿಗಳನ್ನು ಒಳಗೊಂಡಿದ್ದು, ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಹೆಚ್ಚುತ್ತಿರುವುದನ್ನು ಪ್ರತಿನಿಧಿಸಲಿದೆ. ರಾಷ್ಟ್ರ ರಕ್ಷಣೆಗೆ ಮಹಿಳೆಯರ ಕೊಡುಗೆಗಳಿಗೆ ಗೌರವ ಸಲ್ಲಿಸಲಿದೆ.

ಈ ವರ್ಷದ ಗಣರಾಜ್ಯೋತ್ಸವದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದ್ದು, ವಿವಿಧ ವಲಯಗಳ 10,000 ಜನರನ್ನು ಪೆರೇಡ್ ವೀಕ್ಷಿಸಲು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಇಂಡೋನೇಷ್ಯಾದ ಅಧ್ಯಕ್ಷರಾದ ಪ್ರಬೊವೊ ಸುಬಿಯಂತೊ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ವಿಶ್ವದಾಖಲೆ ನಿರ್ಮಿಸಿದ ಡೇರ್‌ಡೆವಿಲ್ಸ್

ಕಾರ್ಪ್ಸ್ ಆಫ್ ಸಿಗ್ನಲ್ಸ್ ಬಳಗದ ಡೇರ್‌ಡೆವಿಲ್ಸ್ ಮೋಟಾರ್ ಸೈಕಲ್ ಪ್ರದರ್ಶನ ತಂಡ ಇತ್ತೀಚೆಗೆ ಚಲಿಸುತ್ತಿರುವ ಬೈಕ್‌ಗಳ ಮೇಲೆ 20.4 ಅಡಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ವಿಶ್ವದಾಖಲೆ ನಿರ್ಮಿಸಿದೆ. ಕರ್ತವ್ಯ ಪಥದಲ್ಲಿ 2 ಕಿಲೋಮೀಟರ್ ದೂರ ಸಾಗುವಾಗ 7 ಬೈಕ್‌ಗಳ ಮೇಲೆ 40 ಯೋಧರು ಮಾನವ ಪಿರಮಿಡ್ ನಿರ್ಮಿಸಿ, ಈ ಸಾಧನೆ ಮಾಡಿದ್ದಾರೆ. ಅಸಾಧಾರಣ ಕೌಶಲ ಹೊಂದಿರುವ ಡೇರ್‌ಡೆವಿಲ್ ತಂಡ ಈ ಬಾರಿಯೂ ಪ್ರೇಕ್ಷಕರನ್ನು ಚಕಿತಗೊಳಿಸಲಿದೆ.