ಐಪಿಎಲ್‌ ಫೈನಲ್‌ ಹಣಾಹಣಿ ಪಂದ್ಯದ ಹಿನ್ನೆಲೆಯಲ್ಲಿ ವಿಶೇಷವಾಗಿ ಆರ್‌ಸಿಬಿ ಗ್ರಾಹಕರನ್ನು ಸೆಳೆಯಲು ನಗರದ ಪ್ರತಿಷ್ಠಿತ ಹೊಟೆಲ್‌, ರೆಸ್ಟೊರೆಂಟ್‌, ಕ್ಲಬ್‌ಗಳು ಭರ್ಜರಿ ಸಿದ್ಧತೆ

 ಬೆಂಗಳೂರು : ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್‌ ಸೂಪರ್‌ ಕಿಂಗ್ಸ್‌ ನಡುವೆ ಮಂಗಳವಾರ ನಡೆಯಲಿರುವ ಐಪಿಎಲ್‌ ಫೈನಲ್‌ ಹಣಾಹಣಿ ಪಂದ್ಯದ ಹಿನ್ನೆಲೆಯಲ್ಲಿ ವಿಶೇಷವಾಗಿ ಆರ್‌ಸಿಬಿ ಗ್ರಾಹಕರನ್ನು ಸೆಳೆಯಲು ನಗರದ ಪ್ರತಿಷ್ಠಿತ ಹೊಟೆಲ್‌, ರೆಸ್ಟೊರೆಂಟ್‌, ಕ್ಲಬ್‌ಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿವೆ.

ಕೋರಮಂಗಲ, ವೈಟ್‌ಫೀಲ್ಡ್‌, ಎಂ.ಜಿ.ರಸ್ತೆ, ಚರ್ಚ್‌ ಸ್ಟ್ರೀಟ್‌, ಎಲೆಕ್ಟ್ರಾನಿಕ್ ಸಿಟಿ, ಇಂದಿರಾ ನಗರದ ಹೊಟೆಲ್‌ಗಳಲ್ಲಿ ಐಪಿಎಲ್‌ ಫೈನಲ್‌ ಪಂದ್ಯಾವಳಿ ನೇರಪ್ರಸಾರಕ್ಕೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಿಶೇಷ ಖಾದ್ಯಗಳನ್ನು ರಿಯಾಯಿತಿ ದರದಲ್ಲಿ ಉಣಬಡಿಸಲು ಮುಂದಾಗಿವೆ. ಪಂದ್ಯದ ಹಿನ್ನೆಲೆಯಲ್ಲಿ ಐಟಿ ಸೇರಿ ಇತರೆ ಉದ್ಯೋಗಿಗಳು ಸಂಜೆ ವೇಳೆ ಹೆಚ್ಚಾಗಿ ಹೊಟೆಲ್‌ಗಳತ್ತ ಮುಖ ಮಾಡುವ ನಿರೀಕ್ಷೆಯೊಂದಿಗೆ ಸಿದ್ಧತೆ ಆಗಿದೆ.

ಮಂಗಳವಾರ ತಡರಾತ್ರಿವರೆಗೆ ವ್ಯಾಪಾರ, ವಹಿವಾಟು ಜೋರಾಗಿ ನಡೆಯುವ ನಿರೀಕ್ಷೆಯಿದೆ. ಈಗಾಗಲೇ ಬಹುತೇಕ ರೆಸ್ಟೋರೆಂಟ್‌ಗಳಲ್ಲಿ ಬುಕ್ಕಿಂಗ್‌ ಆಗಿವೆ. ವಿಶೇಷವಾಗಿ ಆರ್‌ಸಿಬಿ ಅಭಿಮಾನಿಗಳನ್ನು ಸೆಳೆಯಲು ಸಜ್ಜಾಗಿದ್ದೇವೆ. 6.30ಕ್ಕೆ ಟೇಬಲ್‌ಗಳಿಗೆ ಬರಲು ಗ್ರಾಹಕರಿಗೆ ತಿಳಿಸಲಾಗಿದೆ. ವಿಶೇಷ ದೊಡ್ಡ ಗಾತ್ರದ ಪೀಜಾ, ಬರ್ಗರ್‌ಗಳು, ಪೇಯಗಳನ್ನು ಸರ್ವ್‌ ಮಾಡಲಾಗುವುದು. ಗಲಾಟೆ ಆಗದಂತೆ ಹೆಚ್ಚಿನ ಬೌನ್ಸರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ನ್ಯಾಷನಲ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ ಬೆಂಗಳೂರು ವಿಭಾಗ ತಿಳಿಸಿದೆ.

ಬೆಂಗಳೂರು ಹೊಟೆಲ್‌ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಮಾತನಾಡಿ, ದೊಡ್ಡ ಹೊಟೆಲ್‌ಗಳಲ್ಲಿ ಫೈನಲ್ ಪಂದ್ಯಕ್ಕೆ ವಿಶೇಷ ವ್ಯವಸ್ಥೆ ಆಗಿದೆ. ಯುವ ಗ್ರಾಹಕರು ಹೆಚ್ಚಾಗಿ ಬರಲಿದ್ದು, ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಇದಲ್ಲದೆ ವಸತಿ ಸಂಕಿರ್ಣ ಅಸೋಸಿಯೇಶನ್‌ಗಳು, ನೌಕರರ ಕ್ಲಬ್‌ಗಳು, ಗಲ್ಲಿಗಳಲ್ಲಿ ಕೂಡ ಎಲ್‌ಇಡಿ ಪರದೆ ಅಳವಡಿಸಿ ಫೈನಲ್‌ ಪಂದ್ಯಾವಳಿ ನೇರ ಪ್ರಸಾರಕ್ಕೆ ಸಿದ್ಧತೆ ಮಾಡಿಕೊಂಡಿವೆ.