ಸಾರಾಂಶ
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ದತ್ತಾಂಶ ಸಂಗ್ರಹಿಸಲು ನಡೆಸುತ್ತಿರುವ ಮನೆ-ಮನೆ ಸಮೀಕ್ಷೆ ರಾಜ್ಯಾದ್ಯಂತ ತಾಂತ್ರಿಕ ಸಮಸ್ಯೆ, ಗೊಂದಲಗಳ ನಡುವೆಯೂ ಉತ್ತಮವಾಗಿ ನಡೆಯುತ್ತಿದೆ
ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ದತ್ತಾಂಶ ಸಂಗ್ರಹಿಸಲು ನಡೆಸುತ್ತಿರುವ ಮನೆ-ಮನೆ ಸಮೀಕ್ಷೆ ರಾಜ್ಯಾದ್ಯಂತ ತಾಂತ್ರಿಕ ಸಮಸ್ಯೆ, ಗೊಂದಲಗಳ ನಡುವೆಯೂ ಉತ್ತಮವಾಗಿ ನಡೆಯುತ್ತಿದೆ. ಆದರೆ ಬಿಬಿಎಂಪಿ ವ್ಯಾಪ್ತಿ ಹಾಗೂ ವಿವಿಧ ನಗರ ಪ್ರದೇಶಗಳಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ಹೀಗಾಗಿ ನಿಗದಿಯಂತೆ ಮೇ 17ರ ಒಳಗಾಗಿ ಎಲ್ಲ ಮನೆಗಳ ಸಮೀಕ್ಷೆ ನಡೆಸುವುದು ಕಷ್ಟಸಾಧ್ಯ ಎಂದು ಹೇಳಲಾಗಿದೆ. ಆದರೆ, ಮೇ ಅಂತ್ಯದೊಳಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಸಲ್ಲಿಸುವ ವಿಶ್ವಾಸವನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಮವಾರ ಮನೆಗಳ ಸಮೀಕ್ಷೆ ಕುರಿತು ಉನ್ನತ ಮಟ್ಟದ ಪ್ರಗತಿ ಪರಿಶೀಲನೆ ಸಭೆ ಹಮ್ಮಿಕೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕುಂಟುತ್ತಾ ನಡೆಯುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಸರ್ಕಾರ ಹಿಂದೆ ನೀಡಿದ್ದ ಅಂಕಿ-ಅಂಶಗಳ ಪ್ರಕಾರ 18.5 ಲಕ್ಷ ಪರಿಶಿಷ್ಟ ಜಾತಿ ಕುಟುಂಬ ಇತ್ತು. ಪ್ರಸ್ತುತ 20 ರಿಂದ 22 ಲಕ್ಷ ಕುಟುಂಬ ಇರಬಹುದು ಎಂದು ಆಯೋಗ ಅಂದಾಜು ಮಾಡಿದೆ.
ಭಾನುವಾರ 1.70 ಲಕ್ಷ ಕುಟುಂಬ ಸಮೀಕ್ಷೆ:
ಪರಿಶಿಷ್ಟ ಜಾತಿಗಳ ಕುಟುಂಬದಿಂದ ದತ್ತಾಂಶ ಸಂಗ್ರಹಿಸುವ ಕೆಲಸವನ್ನು ಮೇ 5 ರಿಂದ ಆರಂಭವಾಗಿತ್ತು. ಮೊದಲ ದಿನವಾದ ಮೇ 5ರಂದು ಕೇವಲ 10,746 ಪರಿಶಿಷ್ಟ ಜಾತಿ ಕುಟುಂಬದ ಸಮೀಕ್ಷೆ ನಡೆಸಲಾಗಿತ್ತು. ಬಳಿಕ ನಿತ್ಯ 1.5 ಲಕ್ಷದಿಂದ 2 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಯುತ್ತಿತ್ತು. ಆದರೆ ಶುಕ್ರವಾರ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಗಣತಿ ಕುಂಠಿತ ಆಗಿತ್ತು. ರಜಾ ದಿನವಾದ ಭಾನುವಾರವೂ ಸಮೀಕ್ಷೆ ನಡೆಸಿದ ಪರಿಣಾಮ ಭಾನುವಾರ 1.70 ಲಕ್ಷ ಮನೆಗಳ ಸಮೀಕ್ಷೆ ನಡೆಸಿದ್ದು, ಒಟ್ಟು 10.40 ಲಕ್ಷಗಳ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.
ಮೇ ಅಂತ್ಯದ ವೇಳೆಗೆ ವರದಿ ಸಲ್ಲಿಕೆ: ಮೂರು ಹಂತದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಮೇ 5 ರಿಂದ ಮೇ 17ರವರೆಗೆ ಮನೆ-ಮನೆಗೆ ಸಮೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಮಾಹಿತಿ ನೀಡಲು ಆಗದಿದ್ದರೆ ಮೇ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ಏರ್ಪಡಿಸುವ ತಾತ್ಕಾಲಿಕ ಶಿಬಿರ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ನೀಡಬಹುದು. ಈ ವೇಳೆಯೂ ಮಾಹಿತಿ ನೀಡಲಾಗದಿದ್ದರೆ ಆನ್‌ಲೈನ್ ಮೂಲಕ ದತ್ತಾಂಶ ನೀಡಲು ಸಹ ಅವಕಾಶ ಕಲ್ಪಿಸಲಾಗಿದೆ. ಅಂತಹವರು ಮೇ 19 ರಿಂದ ಮೇ 23 ರವರೆಗೆ ಆನ್‌ಲೈನ್ ಮೂಲಕ ತಮ್ಮ ಉಪ ಜಾತಿ ಹಾಗೂ ವಿವರ ಘೋಷಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಿನ್ನಡೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಸಮೀಕ್ಷೆ ನೀರಸವಾಗಿ ನಡೆಯುತ್ತಿದೆ. ಒಟ್ಟು 7,858 ಮಂದಿ ಗಣತಿದಾರರನ್ನು ನೇಮಿಸಲಾಗಿದ್ದು, ಮೇ 11 ರವರೆಗೆ 18,350 ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಮಾತ್ರ ನಡೆಸಿದ್ದಾರೆ. ಒಟ್ಟಾರೆ 5,07,433 ಮನೆಗಳಿಗೆ ಭೇಟಿ ನೀಡಿದ್ದು 18,350 ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 84, ಬಸವನಗುಡಿಯಲ್ಲಿ 23 ಎಸ್.ಸಿ. ಕುಟುಂಬಗಳ ಸಮೀಕ್ಷೆ ಮಾತ್ರ ಏಳು ದಿನದಲ್ಲಿ ನಡೆಸಲಾಗಿದೆ.
ಬೆಂಗಳೂರಿನಲ್ಲಿ 1,200 ಕೊಳಗೇರಿ ಪ್ರದೇಶ ಇದೆ. ಕೊಳಗೇರಿಗಳಲ್ಲಿ ಶೇ.80 ರಷ್ಟು ಎಸ್.ಸಿ. ಜನಸಂಖ್ಯೆ ವಾಸ ಮಾಡುತ್ತಿದ್ದಾರೆ. ಉಳಿದ ಶೇ.20 ರಷ್ಟು ಜನಸಂಖ್ಯೆ ಬಿಬಿಎಂಪಿಯ 800 ಚದರ ಕಿ.ಮೀ. ವಿಶಾಲ ವ್ಯಾಪ್ತಿಯಲ್ಲಿ ಹಂಚಿ ಹೋಗಿದ್ದಾರೆ. ಇವರನ್ನು ಗುರುತಿಸಲು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಆದರೆ, ರಜಾ ದಿನಗಳಾಗಿದ್ದರಿಂದ ಬಹುತೇಕರು ಮನೆ ಖಾಲಿ ಇವೆ. ಹೀಗಾಗಿ ಸಮೀಕ್ಷೆಗೆ ಹಿನ್ನಡೆ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣತಿದಾರರು, ಬಿಎಲ್‌ಓಗಳೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಮೇ ಅಂತ್ಯದೊಳಗೆ ವರದಿ ಸಲ್ಲಿಕೆ
ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ ಮೇ 11ರ ಅಂತ್ಯದ ವೇಳೆಗೆ 10.40 ಲಕ್ಷ ಎಸ್‌ಸಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ನಿಗದಿಪಡಿಸಿರುವ ಮೇ 17ರ ಗುರಿ ಒಳಗೆ ಮನೆ ಸಮೀಕ್ಷೆ ನಡೆಸುತ್ತೇವೆ ಎಂಬ ವಿಶ್ವಾಸವಿದೆ. ಸಮೀಕ್ಷೆ ವೇಗವಾಗಿ ನಡೆಸಲು ಸೋಮವಾರ ಪ್ರಗತಿಪರಿಶೀಲನಾ ಸಭೆ ಹಮ್ಮಿಕೊಂಡಿದ್ದೇವೆ. ಮೇ ಅಂತ್ಯದೊಳಗೆ ಆಯೋಗಕ್ಕೆ ವರದಿ ಸಲ್ಲಿಸಲಿದ್ದೇವೆ.
- ಡಾ.ಕೆ. ರಾಕೇಶ್ ಕುಮಾರ್, ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ