ಜನಿವಾರ ಕೇಸ್‌ ಭುಗಿಲು- ಸಿಇಟಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ರಾಜ್ಯಾದ್ಯಂತ ಆಕ್ರೋಶ

| N/A | Published : Apr 19 2025, 06:41 AM IST

Astrology Tips-Janivara is the cure for many diseases
ಜನಿವಾರ ಕೇಸ್‌ ಭುಗಿಲು- ಸಿಇಟಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ರಾಜ್ಯಾದ್ಯಂತ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಸಿಇಟಿ ಪರೀಕ್ಷೆ ವೇಳೆ ಬೀದರ್‌ನ ಸಾಯಿಸ್ಫೂರ್ತಿ ಕಾಲೇಜಿನಲ್ಲಿ ಹಾಗೂ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು :  ಸಿಇಟಿ ಪರೀಕ್ಷೆ ವೇಳೆ ಬೀದರ್‌ನ ಸಾಯಿಸ್ಫೂರ್ತಿ ಕಾಲೇಜಿನಲ್ಲಿ ಹಾಗೂ ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ದೇಶಾದ್ಯಂತ ಇದು ಸುದ್ದಿಯಾಗಿದ್ದು, ಅಲ್ಲೂ ಕೂಡ ಆಕ್ರೋಶ ಕೇಳಿಬಂದಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ತನಿಖೆಗೆ ಆದೇಶಿಸಿದೆ ಹಾಗೂ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವ ಭರವಸೆ ನೀಡಿದೆ. ಸಾಧ್ಯವಾದರೆ ವಂಚಿತ ವಿದ್ಯಾರ್ಥಿಗಳ ಮರುಪರೀಕ್ಷೆ ಬಗ್ಗೆ ಪರಿಶೀಲಿಸುವುದಾಗಿ ನುಡಿದಿದೆ.

ಜನಿವಾರ ತೆಗೆಸಿದ ಘಟನೆ ಖಂಡಿಸಿ ಬ್ರಾಹ್ಮಣ ಮಹಾಸಭಾ, ಶ್ರೀ ಅಖಿಲ ಹವ್ಯಕ ಮಹಾಸಭಾ ಸೇರಿ ವಿವಿಧ ಬ್ರಾಹ್ಮಣ ಸಂಘಟನೆಗಳು ಶಿವಮೊಗ್ಗ, ತೀರ್ಥಹಳ್ಳಿ, ಹಾಸನ, ಅರಸೀಕೆರೆ, ಬೀದರ್‌, ಮೈಸೂರು ಮುಂತಾದೆಡೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಘಟನೆ ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್‌ ಘಟನೆ ಕುರಿತಂತೆ ಎಸಿಯಿಂದ ತನಿಖೆ ನಡೆಸಿ 24 ಗಂಟೆಯಲ್ಲೇ ವರದಿ ನೀಡುವಂತೆ ಆದೇಶಿಸಿದ್ದಾರೆ.

ವಿಜಯೇಂದ್ರ ಕಿಡಿ: ಕಲಬುರಗಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿ ಸುಚಿವ್ರತ್‌ ಎಂಬಾತಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದ ಮತ್ತು ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿ ದರ್ಪ ಮೆರೆದ ಸಿಬ್ಬಂದಿ ಕ್ರಮ ಅತ್ಯಂತ ಹೇಯ ಕೃತ್ಯ ಎಂದು ಕಟು ಶಬ್ದಗಳಲ್ಲಿ ಖಂಡಿಸಿದರು. ವಿದ್ಯಾರ್ಥಿ ಭವಿಷ್ಯಕ್ಕೆ ಕಲ್ಲು ಹಾಕಿದ ಮತ್ತು ಹಿಂದೂ ಸಂಪ್ರದಾಯ ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಕೂಡಲೇ ಕ್ಷಮೆಯಾಚಿಸಬೇಕು ಎಂದೂ ಆಗ್ರಹಿಸಿದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಕುಂಕುಮ ಕೇಸರಿ ಕಂಡರೆ ದ್ವೇಷ ಕಾರುತ್ತಿದ್ದ ಸಿದ್ದರಾಮಯ್ಯ ಅವರು ಈಗ ಜನಿವಾರದ ವಿರುದ್ಧ ಹಗೆತನ ಮೆರೆಯುವ ಮೂಲಕ ಮತ್ತೊಮ್ಮೆ ತಮ್ಮ ಹಿಂದೂ ವಿರೋಧಿ ಮಾನಸಿಕತೆಯನ್ನ ಪ್ರದರ್ಶನ ಮಾಡಿದ್ದಾರೆ ಎಂದು ಹರಿಹಾಯ್ದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತುಮಕೂರಿನಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿ, ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ನಿವಾರಣೆಗೆ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಿಇಟಿ ನಿಯಮವನ್ನು ಮೊದಲು ತಿಳಿದುಕೊಳ್ಳಬೇಕು. ಅವರವರ ಆಚರಣೆಗೆ ಸಂವಿಧಾನ ಅವಕಾಶ ಕೊಟ್ಟಿದೆ. ಧಾರ್ಮಿಕ‌ ಆಚರಣೆಗಳನ್ನು ಒಪ್ಪಬೇಕು ಎಂದು ತಿಳಿಸಿದರು.

ವಿವಿಧ ಸಂಘಟನೆಗಳ ಖಂಡನೆ: ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಅಖಿಲ ಹವ್ಯಕ ಮಹಾಸಭಾ ಖಂಡಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ ಅವರು, ಬ್ರಹ್ಮೋಪದೇಶದ ಸಮಯದಲ್ಲಿ ಜನಿವಾರ ಧರಿಸಿ, ಗಾಯತ್ರೀ ಮಂತ್ರೋಪದೇಶ ಪಡೆಯುವುದು ಬ್ರಾಹ್ಮಣ ಹಕ್ಕು ಹಾಗೂ ಕರ್ತವ್ಯವಾಗಿದೆ. ಜನಿವಾರಕ್ಕೆ ಧಾರ್ಮಿಕ ಮಹತ್ವವಿದ್ದು, ಪರಮಪವಿತ್ರ ಜನಿವಾರವನ್ನು ಸಿಇಟಿ ಕೇಂದ್ರಗಳಲ್ಲಿ ತುಂಡರಿಸಿರುವುದು ಆತಂಕಕಾರಿಯಾಗಿದ್ದು, ಸಂವಿಧಾನ ದತ್ತವಾದ ಧಾರ್ಮಿಕ ಹಕ್ಕು ಮೊಟಕುಗೊಳಿಸುವ ಕೃತ್ಯವಾಗಿದೆ ಎಂದು ಖಂಡಿಸಿದ್ದಾರೆ. ಪ್ರಕರಣಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗಾಯತ್ರಿ ಮಂತ್ರ ಜಪಿಸಿ ದೀಕ್ಷೆ ಮೂಲಕ ಪಡೆದ ಜನಿವಾರ ತೆಗೆಸಿದ್ದು ಅಕ್ಷಮ್ಯ ಅಪರಾಧ ಎಂದು ಶಿವಮೊಗ್ಗದಲ್ಲಿ ಬ್ರಾಹ್ಮಣ ಮಹಾಸಭಾದ ಪ್ರಮುಖರಾದ ಎಸ್‌. ದತ್ತಾತ್ರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಜನಿವಾರ, ಶಿವದಾರ ಹಾಗೂ ಕಾಶಿದಾರವನ್ನು ತೆಗೆಸಿದ್ದಾರೆ. ಅಲ್ಲದೆ, ಜನಿವಾರವನ್ನು ತೆಗೆಯದಿದ್ದರೆ ಕತ್ತರಿಸುವುದಾಗಿ ಸಿಬ್ಬಂದಿ ಹೆದರಿಸಿದ್ದಾರೆ. ಒಂದೆರಡು ವಿದ್ಯಾರ್ಥಿಗಳ ಶಿವದಾರ ಮತ್ತು ಜನಿವಾರಕ್ಕೆ ಕತ್ತರಿ ಹಾಕಿದ್ದಾರೆ. ಇದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬ್ರಾಹ್ಮಣ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಇಂದು ಪ್ರತಿಭಟನೆ: ಇನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಬಾ ಜಿಲ್ಲಾ ಪ್ರತಿನಿಧಿ ವೆಂಕಟೇಶ ಕುಲಕರ್ಣಿ ಹುಮನಾಬಾದ್‌ ನೇತೃತ್ವದಲ್ಲಿ ಶುಕ್ರವಾರ ಬೀದರ್‌ನಲ್ಲಿ ಸಭೆ ನಡೆದು ವಿದ್ಯಾರ್ಥಿಗೆ ಆಗಿರುವ ಅನ್ಯಾಯ ಖಂಡಿಸಿ ಶನಿವಾರ (ಏ.19) ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ವಿವಿಧ ಹಿಂದುಪರ ಸಂಘಟನೆಗಳೂ ಬೆಂಬಲ ಸೂಚಿಸಿವೆ.

ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ಶಿವಮೊಗ್ಗ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ಪ್ರಕರಣ ಸಂಬಂಧ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಶುಕ್ರವಾರ ಸಂಜೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಿವಮೊಗ್ಗದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ಹಿನ್ನೆಲೆ ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್ ನೇತೃತ್ವದಲ್ಲಿ ದೂರು ನೀಡಲಾಗಿದೆ

ಹೋಮ್ ಗಾರ್ಡ್ ತಲೆದಂಡ? ಶಿವಮೊಗ್ಗ: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಮ್ ಗಾರ್ಡ್ ಮೇಲೆ ಕ್ರಮ ಜರುಗಿಸುವ ಸಾಧ್ಯತೆ ಹೆಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಸೆಕ್ಯೂರಿಟಿ ಗಾರ್ಡ್ ಮೇಲೆ ಕ್ರಮ ಜನರುಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ನೀಡಿದ್ದಾರೆ. ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕೆಂಬ ಸೂಚನೆ ಇದ್ದರೂ ಸೆಕ್ಯೂರಿಟಿ ಗಾರ್ಡ್ ಅತಿರೇಕವಾಗಿ ವರ್ತಿಸಿದ ಹಿನ್ನಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗುವ ಸಾಧ್ಯತೆಯಿದೆ.

ಸುಚಿವ್ರತ್‌ ತುಂಬಾ ನೊಂದಿದ್ದಾನೆ. ಮಾಧ್ಯಮಗಳ ಸಹಕಾರದಿಂದ ಸರ್ಕಾರ ಕಣ್ತೆರೆದಿದೆ. ನಮ್ಮ ಸಮಾಜ, ಹಿಂದು ಪರ ಸಂಘಟನೆಗಳು ಬೆಂಬಲಕ್ಕೆ ಬಂದಿದ್ದು ಧೈರ್ಯ ತಂದಿದೆ. ಮಗನಿಗೆ ಉತ್ತಮ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರವೇಶ ಸಿಗಬೇಕು. ಅದಕ್ಕೆ ಸರ್ಕಾರವೇ ಕ್ರಮವಹಿಸಬೇಕು. ಈ ಬಗ್ಗೆ ನಮಗೆ ಪತ್ರದ ಮುಖೇನ ಭರವಸೆ ನೀಡಬೇಕು 

- ನೀತಾ ಕುಲಕರ್ಣಿ, ಸುಚಿವ್ರತ್‌ ತಾಯಿ

ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಒಪ್ಪುವಂಥದ್ದಲ್ಲ. ವರದಿ ಬಂದ ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುತ್ತೇವೆ. ವಂಚಿತ ವಿದ್ಯಾರ್ಥಿಗೆ ಮತ್ತೆ ಅವಕಾಶ ನೀಡಲು ಅವಕಾಶಗಳಿವೆಯೇ ಎಂದು ಪರಿಶೀಲಿಸುತ್ತೇವೆ.

-ಡಾ। ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವ

ತನಿಖೆಯ ಬಳಿಕ ಶಿಸ್ತುಕ್ರಮ: ಕೆಇಎ

ಸಿಇಟಿ ವೇಳೆ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಜನಿವಾರ ತೆಗೆಸಿದ್ದು ಖಂಡನೀಯ. ವಸ್ತ್ರ ಸಂಹಿತೆಯಲ್ಲಿ ಎಲ್ಲಿಯೂ ಜನಿವಾರ ತೆಗೆಸಬೇಕೆಂದು ಹೇಳಿರಲಿಲ್ಲ. ಈ ಬಗ್ಗೆ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಶಿವಮೊಗ್ಗದಲ್ಲಿ ಜನಿವಾರ ತೆಗೆಸಿದ ಹೋಮ್ ಗಾರ್ಡ್ ತಲೆದಂಡ?