ಕನ್ನಡ ಲೇಖಕಿ ಬಾನು ಮುಷ್ತಾಕ್ ಕೃತಿ ಬೂಕರ್ ಅಂತಿಮ ಸುತ್ತಿಗೆ - ಆಯ್ಕೆಯಾದ ವಿಶ್ವದ 6 ಕೃತಿಗಳಲ್ಲಿ ‘ಹಾರ್ಟ್ ಲ್ಯಾಂಪ್’ಗೆ ಸ್ಥಾನ

| N/A | Published : Apr 09 2025, 07:29 AM IST

Banu Mushtaq
ಕನ್ನಡ ಲೇಖಕಿ ಬಾನು ಮುಷ್ತಾಕ್ ಕೃತಿ ಬೂಕರ್ ಅಂತಿಮ ಸುತ್ತಿಗೆ - ಆಯ್ಕೆಯಾದ ವಿಶ್ವದ 6 ಕೃತಿಗಳಲ್ಲಿ ‘ಹಾರ್ಟ್ ಲ್ಯಾಂಪ್’ಗೆ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

 ಹೆಸರಾಂತ ಲೇಖಕಿ,  ಹೋರಾಟಗಾರ್ತಿ ಹಾಗೂ ವಕೀಲೆ ಬಾನು ಮುಷ್ತಾಕ್ ಅವರ ಸಣ್ಣಕಥೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ 2025ನೇ ಸಾಲಿನ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ನಲ್ಲಿ ಸೇರ್ಪಡೆಯಾಗಿದೆ. ಈ ಕೃತಿಯನ್ನು ಕನ್ನಡಿಗ ಪತ್ರಕರ್ತೆ ದೀಪಾ ಭಸ್ತಿ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

 ಲಂಡನ್ : ಕನ್ನಡದ ಹೆಸರಾಂತ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ವಕೀಲೆ ಬಾನು ಮುಷ್ತಾಕ್ ಅವರ ಸಣ್ಣಕಥೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ 2025ನೇ ಸಾಲಿನ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ನಲ್ಲಿ ಸೇರ್ಪಡೆಯಾಗಿದೆ. ಈ ಕೃತಿಯನ್ನು ಕನ್ನಡಿಗ ಪತ್ರಕರ್ತೆ ದೀಪಾ ಭಸ್ತಿ ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ವಿಶ್ವಾದ್ಯಂತ ಆಯ್ಕೆಯಾದ 6 ಕೃತಿಗಳಲ್ಲಿ ಒಂದಾಗಿರುವ ಮುಸ್ತಾಕ್ ಅವರ ಕೃತಿಯು ಕುಟುಂಬ ಮತ್ತು ದಕ್ಷಿಣ ಭಾರತದ ಮುಸ್ಲಿಂ ಸಮುದಾಯದ ಉದ್ವಿಗ್ನತೆಗಳ ಚಿತ್ರಣಗಳನ್ನು ಸೆರೆಹಿಡಿದಿದೆ. ಇದರಲ್ಲಿ 12 ಸಣ್ಣ ಕಥೆಗಳಿವೆ. ಕೃತಿಯ ಚಮತ್ಕಾರಿ, ಹೃದಯಸ್ಪರ್ಶಿ ಮತ್ತು ಅನನ್ಯ ಶೈಲಿ ನಿರ್ಣಾಯಕರನ್ನು ಆಕರ್ಷಿಸಿದೆ ಎನ್ನಲಾಗಿದೆ. ಕನ್ನಡದ ಅನುವಾದಿತ ಕೃತಿಯೊಂದು ಈ ಪ್ರಶಸ್ತಿಯ ರೇಸ್‌ನಲ್ಲಿರುವುದು ಇದೇ ಮೊದಲು.

‘ನನ್ನ ಕಥೆಗಳು ಮಹಿಳೆಯರ ಮೇಲಿನ ಅಮಾನವೀಯ ಕ್ರೌರ್ಯದ ಕುರಿತು ಬೆಳಕು ಚೆಲ್ಲುತ್ತವೆ. ಮಹಿಳೆಯರ ನೋವು, ಸಂಕಟ ಮತ್ತು ಅಸಹಾಯಕ ಜೀವನಗಳು ನನ್ನೊಳಗೆ ಆಳವಾದ ಭಾವನಾತ್ಮಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ನಾನು ವ್ಯಾಪಕ ಸಂಶೋಧನೆಯಲ್ಲಿ ತೊಡಗುವುದಿಲ್ಲ; ನನ್ನ ಹೃದಯವೇ ನನ್ನ ಅಧ್ಯಯನ ಕ್ಷೇತ್ರ’ ಎಂದು ಬಾನು ಮುಷ್ತಾಕ್ ಹೇಳಿಕೆ ನೀಡಿದ್ದಾರೆ.

ಆಯ್ಕೆ ಪ್ರಕ್ರಿಯೆ ಹೇಗೆ?:

ಈ ಮೊದಲು 13 ಕೃತಿಗಳನ್ನು ಮೊದಲ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಅವುಗಳ ಪೈಕಿ 6 ಕೃತಿಗಳನ್ನು 2ನೇ ಸುತ್ತಿಗೆ ಆಯ್ಕೆ ಮಾಡಲಾಗಿದೆ. 2ನೇ ಸುತ್ತಿಗೆ ಆಯ್ಕೆಯಾದ 6 ಕೃತಿಗಳಲ್ಲಿ ಅಂತಿಮವಾಗಿ ಒಂದು ಕೃತಿಗೆ 2025ನೇ ಸಾಲಿನ ಬೂಕರ್‌ಪ್ರಶಸ್ತಿ ಘೋಷಿಸಲಾಗುತ್ತದೆ. ಮೇ 20ರಂದು ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯ ಘೋಷಣೆ ನಡೆಯಲಿದೆ. ವಿಜೇತ ಲೇಖಕರಿಗೆ ಮತ್ತು ಅನುವಾದಕರಿಗೆ ತಲಾ 27,58,110 ರು. ಬಹುಮಾನ ಸಿಗಲಿದೆ.