ಸಾರಾಂಶ
ರಾಜ್ಯದ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಜನಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ
ಬೆಂಗಳೂರು : ರಾಜ್ಯದ ಬೊಕ್ಕಸ ಭರ್ತಿ ಮಾಡಿಕೊಳ್ಳಲು ಜನಸಾಮಾನ್ಯರ ಮೇಲೆ ಯಾವುದೇ ಹೊಸ ತೆರಿಗೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ, ಬದಲಾಗಿ ಖಾಲಿ ಇರುವ ಮದ್ಯದ ಪರವಾನಗಿ ಹರಾಜು ಹಾಕುವುದು, ತೆರಿಗೆ ವಂಚನೆ ತಡೆಯಲು ಇ-ಖಾತಾ ವ್ಯವಸ್ಥೆ ಜಾರಿ, ನೋಂದಾಯಿಸಲಾಗದ ದಾಖಲೆಗಳಿಗೆ ಡಿಜಿಟಲ್ ಇ-ಸ್ಟಾಂಪಿಂಗ್ ವ್ಯವಸ್ಥೆ ಜಾರಿ, ಪ್ರಮುಖ ಖನಿಜಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.
ವಾಣಿಜ್ಯ ತೆರಿಗೆ:
2025-26ನೇ ಸಾಲಿನಲ್ಲಿ ವಾಣಿಜ್ಯ ಇಲಾಖೆಗೆ 1,20,000 ಕೋಟಿ ರು. ರಾಜಸ್ವ ನಿಗದಿಪಡಿಸಲಾಗಿದೆ.
ವೃತ್ತಿ ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಗರಿಷ್ಠ ಮಿತಿ 2500 ರು.ಗಳಿಗೆ ಅನುಗುಣವಾಗಿ ಸಂಬಳ ಅಥವಾ ಮಜೂರಿ ಪಡೆಯುವ ವ್ಯಕ್ತಿಗಳು ಫೆಬ್ರವರಿ ತಿಂಗಳಲ್ಲಿ ಪಾವತಿಸುತ್ತಿರುವ ವೃತ್ತಿ ತೆರಿಗೆಯನ್ನು ಪ್ರಸ್ತುತ 200 ರು.ಗಳಿಂದ 300 ರು.ಗಳಿಗೆ ಹೆಚ್ಚಿಸಲು ತಿದ್ದುಪಡಿ ತರಲಾಗುವುದು ಎಂದು ತಿಳಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ:
ಸರ್ಕಾರದ ಮತ್ತೊಂದು ಆದಾಯ ಮೂಲವಾದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಆಗುತ್ತಿರುವ ಆಸ್ತಿ ವಂಚನೆ, ತೆರಿಗೆ ತಪ್ಪಿಸುವುದನ್ನು ತಡೆಯಲು ಇ-ಖಾತಾ ವ್ಯವಸ್ಥೆ, ನೋಂದಾಯಿಸಲಾಗದ ದಾಖಲೆಗಳಿಗೆ ಡಿಜಿಟಲ್ ಇ-ಸ್ಟಾಂಪಿಂಗ್ ವ್ಯವಸ್ಥೆ ಜಾರಿಗೆ ತರುವುದಾಗಿ ಪ್ರಕಟಿಸಲಾಗಿದೆ. ಇ-ಖಾತಾ ವ್ಯವಸ್ಥೆಯಿಂದ ಮೌಲ್ಯಮಾಪನ ಮಾಡದ ಆಸ್ತಿಗಳು ಮೌಲ್ಯಮಾಪನ ಜಾಲಕ್ಕೆ ಬರಲಿವೆ. ಅದೇ ರೀತಿ ಆಸ್ತಿಯ ಮಾರ್ಗಸೂಚಿ ಮೌಲ್ಯದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಲು ಜಿಐಎಸ್ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಮಾರ್ಗಸೂಚಿ ನಿರ್ಧರಿಸಲಾಗುವುದು ಎಂದು ತಿಳಿಸಲಾಗಿದೆ. ಇದರ ಜತೆಗೆ ಇಲಾಖೆಗೆ 28,000 ಕೋಟಿ ರಾಜಸ್ವ ಗುರಿ ನಿಗದಿಮಾಡಲಾಗಿದೆ.
ಮೋಟಾರು ವಾಹನ:
ಈಗಾಗಲೇ ಮೋಟಾರು ವಾಹನಗಳಿಗೆ ಬೇರೆ ಬೇರೆ ರೀತಿಯ ತೆರಿಗೆ, ಸೆಸ್ ವಿಧಿಸಿರುವುದರಿಂದ ಹೊಸ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿಲ್ಲ. ಪ್ರಸಕ್ತ ಸಾಲಿನಲ್ಲಿ 15,000 ಕೋಟಿ ರಾಜಸ್ವ ಗುರಿ ನೀಡಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ:
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಗೆ ರಾಜಧನದ ಜೊತೆಗೆ ತೆರಿಗೆ ಸಹ ವಿಧಿಸಬಹುದಾಗಿದೆ. ಹೀಗಾಗಿ ಖನಿಜಗಳ ಮೇಲೆ ವಿಧಿಸುವ ತೆರಿಗೆಯಿಂದ ಸುಮಾರು 3,000 ಕೋಟಿ ರು. ರಾಜಸ್ವ ಸಂಗ್ರಹವಾಗುವ ನಿರೀಕ್ಷೆ ಹೊಂದಿದೆ. ಇದಲ್ಲದೇ ಇ-ವೇ ಬಿಲ್ ಕಡ್ಡಾಯಗೊಳಿಸಲು ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ರಾಜಸ್ವ ಮತ್ತು ಜಿಎಸ್‌ಟಿ ತಪ್ಪಿಸಲು ಮುಂದಾಗಿದೆ. ಹೀಗಾಗಿ ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಇಲಾಖೆಯಿಂದ 9,000 ಕೋಟಿ ರುಗಳ ತೆರಿಗೆಯೇತರ ರಾಜಸ್ವ ಅಂದಾಜು ಮಾಡಲಾಗಿದೆ.