ಸಾರಾಂಶ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಇಷ್ಟಾದರೂ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾರಿಗೆ ನಿಗಮದ ಪ್ರಯಾಣ ದರಕ್ಕಿಂತ ನಮ್ಮ ದರ ಕಡಿಮೆಯಿದೆ.
ಗಿರೀಶ್ ಗರಗ
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಇಷ್ಟಾದರೂ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಾರಿಗೆ ನಿಗಮದ ಪ್ರಯಾಣ ದರಕ್ಕಿಂತ ನಮ್ಮ ದರ ಕಡಿಮೆಯಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದೇಶದಲ್ಲಿ ಅತಿಹೆಚ್ಚಿನ ಬಸ್‌ಗಳನ್ನು ಹೊಂದಿದೆ. ನಿತ್ಯ 1 ಕೋಟಿಗೂ ಹೆಚ್ಚಿನ ಜನರಿಗೆ ಬಸ್ ಸೇವೆ ನೀಡುತ್ತಿರುವ ಸಂಸ್ಥೆ ಇದಾಗಿದೆ. ಒಟ್ಟು ನಾಲ್ಕು ನಿಗಮಗಳ ಮೂಲಕ ಬಸ್ ಸೇವೆ ನೀಡಲಾಗುತ್ತಿದ್ದು, ಸಾಮಾನ್ಯ ಸೇವೆಯಿಂದ ಮಲ್ಟಿ ಆ್ಯಕ್ಸೆಲ್ ಎಸಿ ಬಸ್‌ಗಳವರೆಗೆ ಬಸ್‌ಗಳನ್ನು ಹೊಂದಿರುವ ಸಂಸ್ಥೆ ಪ್ರತಿನಿತ್ಯ 1.16 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಅದೇ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಈ ಸಂಖ್ಯೆ ದೊಡ್ಡದು. ಆದರೆ, ಪ್ರಯಾಣ ದರ ವಿಚಾರದಲ್ಲಿ ಮಾತ್ರ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಗಿಂತ ನಮ್ಮ ದರ ಕಡಿಮೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3 ರಾಜ್ಯಗಳಿಗಿಂತ ಬಸ್‌ಗಳ ಸಂಖ್ಯೆ ಹೆಚ್ಚು: ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿದೆ. ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 14,123 ಬಸ್‌ಗಳಿದ್ದು ಪ್ರತಿನಿತ್ಯ 39 ಲಕ್ಷ ಜನರಿಗೆ ಬಸ್ ಸೇವೆ ನೀಡಲಾಗುತ್ತಿದೆ. ಅದೇ ರೀತಿ ತೆಲಂಗಾಣ ಸಾರಿಗೆ ನಿಗಮದಲ್ಲಿ 9,384 ಬಸ್‌ಗಳಿದ್ದು ಸುಮಾರು 90 ಲಕ್ಷ ಜನರಿಗೆ ಸಾರಿಗೆ ಸೇವೆ ಕೊಡಲಾಗುತ್ತಿದೆ. ಮಹಾರಾಷ್ಟ್ರ ಸಾರಿಗೆ ನಿಗಮದಲ್ಲಿ 18,449 ಬಸ್‌ಗಳಿದ್ದು, ನಿತ್ಯ 54 ಲಕ್ಷ ಜನರಿಗೆ ಸೇವೆ ನೀಡಲಾಗುತ್ತಿದೆ. ಅದೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಒಟ್ಟು 25,337 ಬಸ್‌ಗಳಿದ್ದು 1.16 ಕೋಟಿ ಜನರಿಗೆ ಸಾರಿಗೆ ಸೇವೆ ಒದಗಿಸುತ್ತಿದೆ. ಅಲ್ಲದೆ ಬೇರೆ ರಾಜ್ಯಗಳಲ್ಲಿ ಹವಾನಿಯಂತ್ರಿತ ಬಸ್‌ಗಳ ಸಂಖ್ಯೆ 1 ಸಾವಿರಕ್ಕಿಂತ ಕಡಿಮೆಯಿದೆ. ಅದೇ ರಾಜ್ಯದಲ್ಲಿ ಎಸಿ ಬಸ್‌ಗಳು, ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆ 2 ಸಾವಿರದ ವರೆಗೆ ಇದೆ.
ಪ್ರಯಾಣ ದರ ಕಡಿಮೆ: ಹವಾನಿಯಂತ್ರಿತ ಮತ್ತು ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ನಗರ ಸಾರಿಗೆ, ಸಾಮಾನ್ಯ, ವೇಗಧೂತ, ರಾಜಹಂಸ ಮತ್ತು ಡಿಲಕ್ಸ್ ಬಸ್ ಸೇವೆಗಳ ಪ್ರಯಾಣ ದರ ಉಳಿದ ಮೂರು ರಾಜ್ಯಗಳಿಗಿಂತ ಸಾಕಷ್ಟು ಕಡಿಮೆಯಿದೆ. ಅದರಂತೆ ನಗರ ಸಾರಿಗೆಯಲ್ಲಿ ಪ್ರತಿ ಕಿಮೀಗೆ ಕರ್ನಾಟಕದಲ್ಲಿ ಸುಮಾರು 93 ಪೈಸೆಯಷ್ಟು ಪ್ರಯಾಣ ದರ ನಿಗದಿ ಮಾಡಿದ್ದರೆ, ಆಂಧ್ರಪ್ರದೇಶದಲ್ಲಿ 1.23 ರು., ತೆಲಂಗಾಣ 1.31 ರು. ಹಾಗೂ ಮಹಾರಾಷ್ಟ್ರದಲ್ಲಿ 1.45 ರು. ಪ್ರಯಾಣ ದರವಿದೆ. ಅದೇ ರಾಜ್ಯದಲ್ಲಿ ಶೇ.15ರಷ್ಟು ಪ್ರಯಾಣ ದರ ಹೆಚ್ಚಳಕ್ಕಿಂತ ಮುನ್ನ ನಗರ ಸಾರಿಗೆ ಪ್ರಯಾಣ ದರ ಪ್ರತಿ ಕಿ.ಮೀ.ಗೆ 81.47 ಪೈಸೆಯಷ್ಟಿತ್ತು. ಈಗ ಸುಮಾರು 12 ಪೈಸೆಯಷ್ಟು ಹೆಚ್ಚಳವಾದಂತಾಗಿದೆ.
ಪ್ರಯಾಣ ದರ ಹೋಲಿಕೆ (ಪ್ರತಿ ಕಿಮೀ) (ಪ್ರಯಾಣ ದರ ಹೆಚ್ಚಳದ ನಂತರ)
ರಾಜ್ಯ ನಗರ ಸಾರಿಗೆ ಸಾಮಾನ್ಯ ಸಾರಿಗೆ ವೇಗಧೂತ ರಾಜಹಂಸ/ಡೀಲಕ್ಸ್
ಕರ್ನಾಟಕ 93 ಪೈಸೆ 75 ಪೈಸೆ 1.15 ರು. 1.47 ರು.
ಆಂಧ್ರಪ್ರದೇಶ 1.23 ರು. 1.02 ರು. 1.25 ರು. 1.62 ರು.
ತೆಲಂಗಾಣ 1.31 ರು. 1.04 ರು. 1.26 ರು. 1.64 ರು.
ಮಹಾರಾಷ್ಟ್ರ 1.45 ರು. 1.45 ರು. 1.45 ರು. 1.97 ರು.