ಕರ್ನಾಟಕ ಈಗ ನಕ್ಸಲ್‌ ಮುಕ್ತ ರಾಜ್ಯ - ರಾಜ್ಯದ ಕೊನೆಯ ನಕ್ಸಲ್‌ ರವೀಂದ್ರ ಶರಣಾಗತಿ

| N/A | Published : Feb 02 2025, 05:26 AM IST

naxals

ಸಾರಾಂಶ

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ನಕ್ಸಲ್‌ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಜಿಲ್ಲೆಯ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ ಶನಿವಾರ ಜಿಲ್ಲಾ ನಕ್ಸಲ್‌ ಶರಣಾಗತಿ ಸಮಿತಿ ಮುಂದೆ ಹಾಜರಾಗಿದ್ದಾರೆ

 ಚಿಕ್ಕಮಗಳೂರು : ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ನಕ್ಸಲ್‌ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಜಿಲ್ಲೆಯ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ ಶನಿವಾರ ಜಿಲ್ಲಾ ನಕ್ಸಲ್‌ ಶರಣಾಗತಿ ಸಮಿತಿ ಮುಂದೆ ಹಾಜರಾಗಿದ್ದಾರೆ. ಬಳಿಕ, ಅವರನ್ನು ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

2007ರಲ್ಲಿ ಭೂಗತರಾಗಿದ್ದ ರವೀಂದ್ರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 13, ರಾಜ್ಯದ ಇತರೆಡೆ 4 ಹಾಗೂ ಕೇರಳ ರಾಜ್ಯದಲ್ಲಿ 9 ಕೇಸುಗಳಿವೆ. ರವೀಂದ್ರ ಅವರು ಸಮಾಜದ ಮುಖ್ಯವಾಹಿನಿಗೆ ಬಂದ ಬಳಿಕ ರಾಜ್ಯದಲ್ಲಿ ನಕ್ಸಲ್‌ ಸಂಘಟನೆ ಯುಗಾಂತ್ಯವಾಗಿದೆ.

ನಕ್ಸಲೀಯರ ಶರಣಾಗತಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಕ್ಸಲ್‌ ಶರಣಾಗತಿಯ ಜಿಲ್ಲಾ ಸಂಚಾಲಕ, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲೆಯಲ್ಲಿ 2002ರಲ್ಲಿ ನಕ್ಸಲ್‌ ಚಟುವಟಿಕೆ ಆರಂಭಗೊಂಡಿತ್ತು. ಶರಣಾಗತಿ ಪ್ರಕ್ರಿಯೆ 2010ರಲ್ಲಿ ಆರಂಭಗೊಂಡಿದ್ದು, ರವೀಂದ್ರ ಸೇರಿದಂತೆ ಈವರೆಗೆ ರಾಜ್ಯದಲ್ಲಿ 21 ಮಂದಿ ನಕ್ಸಲೀಯರು ಶರಣಾಗಿದ್ದಾರೆ ಎಂದರು.

ಸಮಾಜದ ಮುಖ್ಯವಾಹಿನಿಗೆ ಬಂದಿರುವ ರವೀಂದ್ರ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ತ್ರಿಸಂಧಿ ಪ್ರದೇಶಗಳಲ್ಲಿ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ್ದರು. ಅವರು ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ಅಡಿ ವರ್ಗ- ಎ ಅಡಿ ಬರುವುದರಿಂದ ಅವರಿಗೆ ₹7.5 ಲಕ್ಷ ಸಹಾಯಧನ ನೀಡಲಾಗುವುದು. ಮೊದಲ ಕಂತಿನಲ್ಲಿ ₹3 ಲಕ್ಷ ನೀಡಿ ಉಳಿದ ಹಣವನ್ನು ಮುಂದಿನ ವರ್ಷಗಳಲ್ಲಿ ಕೊಡಲಾಗುವುದು. ರವೀಂದ್ರ ಮುಖ್ಯವಾಹಿನಿಗೆ ಬಂದಿದ್ದರಿಂದ ಕರ್ನಾಟಕ ನಕ್ಸಲ್‌ ಮುಕ್ತ ರಾಜ್ಯವಾಗಿದೆ ಎಂದರು.

ನಾನು ಸ್ವಇಚ್ಛೆಯಿಂದ ಶರಣಾಗಿದ್ದೇನೆ. ನಮ್ಮೂರ ಕಡೆಗಳಲ್ಲಿ ಹಾಳಾಗಿರುವ ರಸ್ತೆ ದುರಸ್ತಿಪಡಿಸಬೇಕು, ಬಡವರಿಗೆ ಭೂಮಿ ನೀಡಬೇಕೆಂಬುದು ಸೇರಿ ಹಲವು ಬೇಡಿಕೆಗಳನ್ನು ಶರಣಾಗತಿ ಸಂದರ್ಭದಲ್ಲಿ ಜಿಲ್ಲಾಡಳಿತದ ಮುಂದೆ ಇಟ್ಟಿದ್ದೇನೆ.

- ರವೀಂದ್ರ, ಶರಣಾಗತ ನಕ್ಸಲ್‌.

ಶರಣಾಗತಿ ಆಗಿದ್ದು ಹೇಗೆ ?:

ಕಳೆದ ಮೂರು ತಿಂಗಳಿಂದ ರವೀಂದ್ರ ಶರಣಾಗತಿಗೆ ಪ್ರಯತ್ನ ನಡೆದಿತ್ತು. ಶುಕ್ರವಾರ ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ರವೀಂದ್ರ, ತನ್ನ ದೊಡ್ಡಪ್ಪನ ಮಗನಾದ ರಮೇಶ್‌ ವಾಸವಾಗಿದ್ದ ಸಂಪನೆ ಗ್ರಾಮಕ್ಕೆ ಬಂದಿದ್ದರು. ಮನೆಯವರು ಮನವೊಲಿಸಿ ಕೂಡಲೇ ಸಮಿತಿ ಸದಸ್ಯ ಶ್ರೀಪಾಲ್ ಅವರನ್ನು ಸಂಪರ್ಕಿಸಿದ್ದು, ಮಾತುಕತೆ ಬಳಿಕ ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಶರಣಾಗತರಾಗಿದ್ದಾರೆ.