ಪಂಚಾಯತ್‌ ವಿಕೇಂದ್ರೀಕರಣ : ದೇಶಕ್ಕೇ ಕರ್ನಾಟಕ ನಂಬರ್‌ 1 ಒಡಿಶಾ, ಕೇರಳ, ರಾಜಸ್ಥಾನಕ್ಕೆ ನಂತರದ ಸ್ಥಾನ

| N/A | Published : Feb 17 2025, 07:30 AM IST

Vidhan soudha
ಪಂಚಾಯತ್‌ ವಿಕೇಂದ್ರೀಕರಣ : ದೇಶಕ್ಕೇ ಕರ್ನಾಟಕ ನಂಬರ್‌ 1 ಒಡಿಶಾ, ಕೇರಳ, ರಾಜಸ್ಥಾನಕ್ಕೆ ನಂತರದ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಹಳ್ಳಿಗಳ ಸಬಲೀಕರಣಕ್ಕೆ ಜಾರಿಗೆ ತಂದಿರುವ ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿ ಹತ್ತು ಹಲವು ಪ್ರಗತಿಪರ ಯೋಜನೆ, ಕಾರ್ಯಕ್ರಮ ಜಾರಿಗೆ ತರುತ್ತಿರುವ ಕರ್ನಾಟಕ ಪ್ರಸ್ತುತ ಇಡೀ ದೇಶದಲ್ಲಿ ಪಂಚಾಯತ್‌ರಾಜ್‌ ವಿಕೇಂದ್ರೀಕರಣದ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ.

  ಬೆಂಗಳೂರು : ಹಳ್ಳಿಗಳ ಸಬಲೀಕರಣಕ್ಕೆ ಜಾರಿಗೆ ತಂದಿರುವ ಪಂಚಾಯತ್‌ ರಾಜ್ ವ್ಯವಸ್ಥೆಯಲ್ಲಿ ಹತ್ತು ಹಲವು ಪ್ರಗತಿಪರ ಯೋಜನೆ, ಕಾರ್ಯಕ್ರಮ ಜಾರಿಗೆ ತರುತ್ತಿರುವ ಕರ್ನಾಟಕ ಪ್ರಸ್ತುತ ಇಡೀ ದೇಶದಲ್ಲಿ ಪಂಚಾಯತ್‌ರಾಜ್‌ ವಿಕೇಂದ್ರೀಕರಣದ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ.

ಇದಲ್ಲದೆ ಹಣಕಾಸು ಮತ್ತು ಉತ್ತರದಾಯಿತ್ವ, ಪರಿಣಾಮಕಾರಿ ಆರ್ಥಿಕ ವಿಕೇಂದ್ರೀಕರಣ, ಸಕಾಲದಲ್ಲಿ ಅನುದಾನ ಬಿಡುಗಡೆ, ಪರಿಣಾಮಕಾರಿಯಾಗಿ 15ನೇ ಹಣಕಾಸು ಆಯೋಗದ ಅನುದಾನ ಬಳಕೆ, ಬಲಿಷ್ಠ ಗ್ರಾಮಸಭೆ ಮತ್ತು ಸಾಮಾಜಿಕ ಆಡಿಟ್‌ ಕ್ಷೇತ್ರದಲ್ಲೂ ಸಹ ಉತ್ತಮ ಸ್ಥಾನ ಪಡೆದಿದೆ.

ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಮತ್ತು ಪಂಚಾಯತ್‌ ರಾಜ್‌ ಸಚಿವಾಲಯ ನಡೆಸಿರುವ 2023-24ನೇ ಸಾಲಿನ ಅಧ್ಯಯನದ ವರದಿಯಲ್ಲಿ ಕರ್ನಾಟಕದ ಸಾಧನೆ ಉಲ್ಲೇಖಿಸಲಾಗಿದೆ.

ಪಂಚಾಯತ್‌ ರಾಜ್‌ ಸಚಿವಾಲಯ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾದ ಪ್ರೊ.ಎಸ್‌.ಪಿ. ಸಿಂಗ್‌ ಬಘೇಲ್‌ ಅವರು ‘ರಾಜ್ಯಗಳಲ್ಲಿ ಪಂಚಾಯತಿಗಳಿಗೆ ಅಧಿಕಾರ ವಿಕೇಂದ್ರೀಕರಣದ ಸ್ಥಿತಿ-ಸೂಚಕ ಸಾಕ್ಷ್ಯಾಧಾರಿತ ಶ್ರೇಯಾಂಕ’ ಎಂಬ ವರದಿಯನ್ನು ಭಾನುವಾರ ದೆಹಲಿಯಲ್ಲಿ ಬಿಡುಗಡೆ ಮಾಡಿದರು.

ಒಟ್ಟಾರೆ ಪಂಚಾಯತ್‌ ವಿಕೇಂದ್ರೀಕರಣ ಸೂಚ್ಯಂಕ ಮತ್ತು ಚೌಕಟ್ಟು, ಕಾರ್ಯಗಳು, ಹಣಕಾಸು, ಕಾರ್ಯಕರ್ತರು, ಸಾಮರ್ಥ್ಯ‌ ವರ್ಧನೆ ಹಾಗೂ ಉತ್ತರದಾಯಿತ್ವ ಅಂಶಗಳ ಮೇಲೆ ಶ್ರೇಯಾಂಕ ನೀಡಲಾಗಿದೆ. ವಿಕೇಂದ್ರೀಕರಣದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ಕೇರಳ ದ್ವಿತೀಯ, ತಮಿಳುನಾಡು ತೃತೀಯ, ಮಹಾರಾಷ್ಟ್ರ ನಾಲ್ಕನೆ ಹಾಗೂ ಉತ್ತರ ಪ್ರದೇಶ ಐದನೇ ಸ್ಥಾನ ಪಡೆದಿದೆ.

ಕಾರ್ಯನಿರ್ವಹಣೆ ವಿಕೇಂದ್ರೀಕರಣದಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದ್ದರೆ, ಕರ್ನಾಟಕ, ಒಡಿಶಾ, ಕೇರಳ, ರಾಜಸ್ಥಾನ ಹಾಗೂ ಉತ್ತರಪ್ರದೇಶ ಕ್ರಮವಾಗಿ 2, 3, 4 ಮತ್ತು 5ನೇ ಸ್ಥಾನ ಪಡೆದಿದೆ. ಅದೇ ರೀತಿ ಹಣಕಾಸು ನಿರ್ವಹಣೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದರೆ, ಕೇರಳ, ತ್ರಿಪುರ, ತಮಿಳುನಾಡು ಕ್ರಮವಾಗಿ 2,3 ಮತ್ತು 4ನೇ ಸ್ಥಾನ ಪಡೆದಿದೆ.

ಸಿಬ್ಬಂದಿ ನಿರ್ವಹಣೆ ಮತ್ತು ಸಾಮರ್ಥ್ಯ‌ವರ್ಧನೆಯಲ್ಲಿ ಗುಜರಾತ್‌ ಮೊದಲ ಸ್ಥಾನ ಗಳಿಸಿದ್ದರೆ, ತಮಿಳುನಾಡು, ಕೇರಳ ಹಾಗೂ ಕರ್ನಾಟಕ ಕ್ರಮವಾಗಿ 2,3, ಮತ್ತು 4ನೇ ಸ್ಥಾನ ಗಳಿಸಿದೆ. ಆದರೆ ಸಾಂಸ್ಥಿಕ ವರ್ಧನೆಯಲ್ಲಿ ಕರ್ನಾಟಕ 11ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ತೆಲಂಗಾಣ, ತಮಿಳುನಾಡು, ಗುಜರಾತ್‌ ಕ್ರಮವಾಗಿ 1, 2 ಮತ್ತು 3ನೇ ಸ್ಥಾನದಲ್ಲಿದೆ.

 ಉತ್ತರದಾಯಿತ್ವ:   ಕರ್ನಾಟಕವು ಪಾರದರ್ಶಕತೆಯಲ್ಲಿ ಹೊಸ ಮಾನದಂಡಗಳನ್ನು ರೂಪಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ಕ್ರಮವಾಗಿ ಕೇರಳ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಪಡೆದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವಿಕೇಂದ್ರೀಕರಣ ಕಲ್ಪನೆ ಅಲ್ಲ, ನಿಜಕ್ಕೂ ಸಾಕಾರ

ಪಂಚಾಯತ್‌ಗಳ ಅಧಿಕಾರ ವಿಕೇಂದ್ರೀಕರಣದಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಈ ಸಾಧನೆ ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಸಾಧನೆಯಾಗುವಲ್ಲಿ ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರ ಪ್ರಮುಖ ಪಾತ್ರವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಶ್ಲಾಘಿಸಿದ್ದಾರೆ. ವಿಕೇಂದ್ರೀಕರಣ ಕೇವಲ ಕಲ್ಪನೆಯಲ್ಲ, ಕರ್ನಾಟಕದಲ್ಲಿ ನಿಜವಾಗಿ ಸಾಕಾರಗೊಂಡಿದೆ ಎಂದು ಅವರು ತಿಳಿಸಿದ್ದಾರೆ.