ಸಾರಾಂಶ
‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಸೋಮವಾರ ಯೋಜನೆಯ ವಿಶಿಷ್ಟ ಟಿಕೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆ.
ಬೆಂಗಳೂರು : ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿರುವ ಹಿನ್ನೆಲೆಯಲ್ಲಿ ಸೋಮವಾರ ಯೋಜನೆಯ ವಿಶಿಷ್ಟ ಟಿಕೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆ.
ಬೆಂಗಳೂರಿನ ಕುಮಾರಪಾರ್ಕ್ ಈಸ್ಟ್ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು 500ನೇ ಕೋಟಿ ಟಿಕೆಟ್ ಅನ್ನು ಸಾಂಕೇತಿಕವಾಗಿ ವಿತರಣೆ ಮಾಡುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾಗಲಿದ್ದಾರೆ.
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ 2023ರ ಜೂನ್ 11ರಂದು ಆರಂಭವಾಗಿದ್ದು, ಮಹಿಳೆಯರು ಪ್ರಯಾಣಿಸಿರುವ ಟಿಕೆಟ್ ಮೊತ್ತ 12,500 ಕೋಟಿ ರು.ಗಿಂತ ಹೆಚ್ಚಾಗಿದೆ. ಮಹಿಳೆಯರ ಮನ ಗೆದ್ದಿರುವ ಈ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟುತ್ತಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಅವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳು ಸೋಮವಾರದಂದು ಪ್ರತಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಬೇಕೆಂದು ಸೂಚನೆ ನೀಡಿದ್ದಾರೆ.
ರಾಜ್ಯದ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರತಿನಿತ್ಯ ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 80 ಲಕ್ಷದವರೆಗೆ ತಲುಪಿದ್ದು, ‘ಶಕ್ತಿ ಯೋಜನೆಯಡಿ ಪ್ರತಿನಿತ್ಯ ₹20 ಕೋಟಿಗಳಷ್ಟು ಉಚಿತ ಟಿಕೆಟ್ ಅನ್ನು ಮಹಿಳೆಯರಿಗೆ ವಿತರಿಸಲಾಗುತ್ತಿದೆ.
ಕಾಂಗ್ರೆಸ್‌ನ ಚುನಾವಣಾ ಭರವಸೆಗಳ ಪೈಕಿ ಒಂದಾದ ಶಕ್ತಿ ಉಚಿತ ಪ್ರಯಾಣ ಸ್ಕೀಮ್‌ಗೆ 2023ರ ಜೂ.11ರಂದು ಚಾಲನೆ ನೀಡಲಾಗಿತ್ತು
ಸರ್ಕಾರಿ ಬಸ್‌ಗಳಲ್ಲಿ ನಿತ್ಯ ಪ್ರಯಾಣಿಸುವ 1 ಕೋಟಿಗೂ ಹೆಚ್ಚಿನ ಪ್ರಯಾಣಿಕರ ಪೈಕಿ 80 ಲಕ್ಷ ಮಹಿಳೆಯರು. ಇವರಿಗೆ 20 ಲಕ್ಷ ಟಿಕೆಟ್ ವಿತರಣೆ
ಯೋಜನೆ ಆರಂಭವಾದ 2 ವರ್ಷದಲ್ಲೇ 500 ಕೋಟಿ ಟಿಕೆಟ್ ವಿತರಣೆ ದಾಖಲೆ ನಿರ್ಮಾಣ. ಇದಕ್ಕಾಗಿ ಸರ್ಕಾರದಿಂದ 12500 ಕೋಟಿ ರು.ವೆಚ್ಚ
ಹೊಸ ಮೈಲುಗಲ್ಲು ಸ್ಥಾಪನೆ ಹಿನ್ನೆಲೆ ಮಂಗಳವಾರ ರಾಜ್ಯದ ಜಿಲ್ಲಾ ಮತ್ತು ಎಲ್ಲಾ ತಾಲೂಕುಗಳಲ್ಲೂ ಸಿಂಹಿ ಹಂಚಿ ಸಂಭ್ರಮಾಚರಣೆಗೆ ನಿರ್ಧಾರ
ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 500 ಕೋಟಿಯ ಟಿಕೆಟ್ ಅನ್ನು ಸಾಂಕೇತಿಕವಾಗಿ ವಿತರಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ