ತಿರುಪತಿ ತುಪ್ಪದ ಲಾರಿಗೆ ಕೆಎಂಎಫ್‌ ಡಿಜಿಟಲ್‌ ಲಾಕ್‌! - ಜಿಪಿಎಸ್‌, ಲೊಕೇಷನ್‌ ಡಿವೈಸ್‌ಗಳೂ ಅಳವಡಿಕೆ

| Published : Sep 23 2024, 09:13 AM IST

KMF

ಸಾರಾಂಶ

ತಿರುಪತಿ ತಿರುಮಲ ದೇಗುಲದ ಲಡ್ಡು ಪ್ರಸಾದಕ್ಕೆ ತಮಿಳುನಾಡಿನ ಖಾಸಗಿ ಡೈರಿಯಿಂದ ಕಲಬೆರಕೆಯ ತುಪ್ಪ ಪೂರೈಕೆಯಾದ ವಿಚಾರ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಇದೀಗ ತುಪ್ಪ ಪೂರೈಕೆಯ ಟೆಂಡರ್‌ ಪಡೆದಿರುವ ಕೆಎಂಎಫ್‌ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದೆ.

ಹೊಸಪೇಟೆ :  ತಿರುಪತಿ ತಿರುಮಲ ದೇಗುಲದ ಲಡ್ಡು ಪ್ರಸಾದಕ್ಕೆ ತಮಿಳುನಾಡಿನ ಖಾಸಗಿ ಡೈರಿಯಿಂದ ಕಲಬೆರಕೆಯ ತುಪ್ಪ ಪೂರೈಕೆಯಾದ ವಿಚಾರ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಇದೀಗ ತುಪ್ಪ ಪೂರೈಕೆಯ ಟೆಂಡರ್‌ ಪಡೆದಿರುವ ಕೆಎಂಎಫ್‌ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದೆ. ತುಪ್ಪ ಪೂರೈಸುವ ಲಾರಿಗಳಿಗೆ ಜಿಪಿಎಸ್‌ ಮತ್ತು ಡಿಜಿಟಲ್‌ ಲಾಕ್‌ ಅಳವಡಿಸುವ ಮೂಲಕ ಎಲ್ಲೂ ತಿರುಪತಿಗೆ ಪೂರೈಕೆಯಾಗುವ ನಂದಿನಿ ತುಪ್ಪ ಕಲಬೆರಕೆಯಾಗದಂತೆ ಡಿಜಿಟಲ್‌ ಕಣ್ಗಾವಲು ಇಟ್ಟಿದೆ. ಜಗನ್‌ ಮೋಹನ್‌ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಲಡ್ಡುಪ್ರಸಾದಕ್ಕೆ ತಮಿಳುನಾಡಿನ ಖಾಸಗಿ ಸಂಸ್ಥೆ ಪೂರೈಸುತ್ತಿದ್ದ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬು(ದನ, ಹಂದಿ ಕೊಬ್ಬು) ಪತ್ತೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಹಿಂದೂಗಳ ಶ್ರದ್ಧಾಕೇಂದ್ರವಾದ ತಿರುಪತಿಗೆ ತುಪ್ಪ ಪೂರೈಸುವ ಟೆಂಡರ್‌ ಅನ್ನು ಗುಣಮಟ್ಟಕ್ಕೆ ಹೆಸರಾದ ಕರ್ನಾಟಕದ ಕೆಎಂಎಫ್‌ ಸಂಸ್ಥೆ ನೀಡಲಾಗಿದೆ.

ತಿರುಪತಿಯ ಲಡ್ಡು ಪ್ರಸಾದಕ್ಕಾಗಿ ಸದ್ಯ 350 ಮೆಟ್ರಿಕ್ ಟನ್‌ ತುಪ್ಪ ಪೂರೈಸುವ ಟೆಂಡರ್ ಕೆಎಂಎಫ್‌ಗೆ ದೊರೆತಿದೆ. ಅದರಂತೆ ಕೆಎಂಎಫ್‌ 15 ದಿನಗಳಿಂದ ಕರ್ನಾಟಕದಿಂದ ತುಪ್ಪ ಪೂರೈಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಿ, ತಿರುಪತಿಗೆ ತುಪ್ಪ ಪೂರೈಸುತ್ತಿದ್ದೇವೆ. ತುಪ್ಪ ಪೂರೈಕೆ ವೇಳೆ ಎಲ್ಲೂ ಕಲಬೆರಕೆ ಆಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತಿದೆ. ತುಪ್ಪ ಪೂರೈಸುವ ಲಾರಿಗಳಿಗೆ ಜಿಪಿಎಸ್‌, ಡಿಜಿಟಲ್‌ ಲಾಕರ್ ಅಳವಡಿಸಲಾಗಿದೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ ಭಾನುವಾರ ತಿಳಿಸಿದ್ದಾರೆ.

ತಿರುಪತಿ ದೇವಾಲಯಕ್ಕೆ ಕೆಎಂಎಫ್‌ನಿಂದ 2020 ರಿಂದ 2024ರ ಆರಂಭವರೆಗೆ ಒಂದೇ ಒಂದು ಟನ್‌ ತುಪ್ಪ ಕೂಡ ನಾವು ಸರಬರಾಜು ಮಾಡಿಲ್ಲ. ಇತ್ತೀಚೆಗಷ್ಟೇ ತುಪ್ಪ ಪೂರೈಕೆ ಆರಂಭಿಸಿದ್ದೇವೆ. ತಿರುಪತಿ ಲಡ್ಡು ವಿಚಾರದಲ್ಲಿ ಆರೋಪ ಕೇಳಿ ಬಂದ ನಂತರ ನಂದಿನಿ ತುಪ್ಪಕ್ಕೆ ಬೇಡಿಕೆ ಬಂದಿದೆ. ನಾವು ಬೇರೆ ಬ್ರ್ಯಾಂಡ್‌ ಬಗ್ಗೆ ಮಾತನಾಡುವುದಿಲ್ಲ. ದೇಶದಲ್ಲಿ ನಂದಿನಿ ಬ್ರ್ಯಾಂಡ್‌ನ ವಿಶ್ವಾಸಕ್ಕೆ ಕನ್ನಡಿಗರು ಹೆಮ್ಮೆ ಪಡಬೇಕಿದೆ ಎಂದು ಅವರು ಹೇಳಿದ್ದಾರೆ. 

ಡಿಜಿಟಲ್‌ ಕಣ್ಗಾವಲು:

ತಿರುಪತಿಗೆ ತುಪ್ಪ ಪೂರೈಸುತ್ತಿರುವ ಲಾರಿಗಳಿಗೆ ಕೆಎಂಎಫ್‌ ಜಿಪಿಎಸ್‌, ಜಿಎಲ್‌ಡಿ(ಜಿಯೋ ಲೊಕೇಷನ್‌ ಡಿವೈಸ್‌)ಗಳನ್ನು ಅಳವಡಿಸಲಾಗಿದೆ. ಈ ಮೂಲಕ ರಾಜ್ಯದಿಂದ ನಂದಿನಿ ತುಪ್ಪ ಹೊತ್ತುಕೊಂಡು ಹೊರಟ ಲಾರಿಗಳು ಎಲ್ಲೆಲ್ಲಿ ನಿಲುಗಡೆಯಾಗುತ್ತವೆ ಎಂಬ ಕುರಿತು ಕಣ್ಣಿಡಲಾಗುತ್ತದೆ. ಈ ಮೂಲಕ ತುಪ್ಪ ಕಲಬೆರಕೆ ಆಗುವುದನ್ನು ತಡೆಯಲು ನೋಡಿಕೊಳ್ಳಲಾಗುತ್ತದೆ. ಇದರ ಜತೆಗೆ ಲಾರಿಗಳಿಗೆ ಡಿಜಿಟಲ್‌ ಲಾಕರ್‌ಗಳನ್ನೂ ಅಳವಡಿಸಲಾಗಿದೆ. ಲಾರಿಯು ತಿರುಪತಿ ತಲುಪಿದ ಬಳಿಕ ಒಟಿಪಿ ಮೂಲಕ ಕಂಟೈನರ್‌ನ ಬೀಗ ತೆರೆಯಲಾಗುತ್ತದೆ. ಕೆಎಂಎಫ್‌ನ ಯಾವ ವಿಭಾಗದಿಂದ ತುಪ್ಪ ಪೂರೈಕೆಯಾಗಿದೆಯೋ ಆ ವಿಭಾಗದ ಅಧಿಕಾರಿಯ ಮೊಬೈಲ್‌ಗೆ ತುಪ್ಪ ಅನ್‌ಲೋಡ್‌ಗೂ ಮೊದಲು ಒಟಿಪಿ ಸಂದೇಶ ಬರುತ್ತದೆ. ಆ ಒಟಿಪಿ ಸಂಖ್ಯೆ ನೀಡಿದ ಬಳಿಕವಷ್ಟೇ ಕ್ಯಾಂಟರ್‌ನ ಲಾಕರ್‌ ತೆರೆದು ತುಪ್ಪವನ್ನು ಅನ್‌ಲೋಡ್‌ ಮಾಡಬಹುದಾಗಿದೆ. ಈ ಮೂಲಕ ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರಕ್ಕೆ ಪೂರೈಕೆಯಾಗುವ ತುಪ್ಪದಲ್ಲಿ ಎಲ್ಲೂ ಕಲಬೆರೆಕೆಯಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.