ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರ ನಿರ್ಧಾರಕ್ಕೆ ಘಟನೋತ್ತರ ಅನುಮೋದನೆ ನೀಡಲು ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರ ನಿರ್ಧಾರಕ್ಕೆ ಘಟನೋತ್ತರ ಅನುಮೋದನೆ ನೀಡಲು ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ತಮ್ಮ ಇಬ್ಬರು ಪುತ್ರಿಯರ ಆಯ್ಕೆಯನ್ನು ಕಾನೂನು ಬಾಹಿರವಾಗಿ ನಡೆಸಲು ಸಹಕರಿಸಿದ ಆರೋಪ ಕೇಳಿಬಂದಿತ್ತು. ಇದನ್ನು ‘ಕನ್ನಡಪ್ರಭ’ ಬಯಲಿಗೆ ಎಳೆದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು, ಕೆಪಿಎಸ್ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ಆದರೆ, ಈ ಅಮಾನತು ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಶಿವಶಂಕರಪ್ಪ ಅವರು ಸಚಿವ ಸಂಪುಟದ ಸಲಹೆ, ಶಿಫಾರಸು ಇಲ್ಲದೆ ರಾಜ್ಯಪಾಲರು ಅಮಾನತು ಮಾಡಿದ್ದಾರೆ. ಇದು ಊರ್ಜಿತ ಆಗಬಾರದು ಎಂದು ವಾದ ಮಂಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಕೈಗೊಂಡ ಕ್ರಮಕ್ಕೆ ಸಚಿವ ಸಂಪುಟದ ಅನುಮೋದನೆ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಂಡಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಭಾನುವಾರ ಒಪ್ಪಿಗೆ ನೀಡಿದೆ.

ಅಮಾನತು ನಿರ್ಧಾರಕ್ಕೆ ಅನುಮೋದನೆ-ಸಿಎಂ:

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಅವರನ್ನು ಅಮಾನತುಗೊಳಿಸಿದ ರಾಜ್ಯಪಾಲರ ನಿರ್ಧಾರಕ್ಕೆ ಅನುಮೋದನೆ ನೀಡಿದ್ದೇವೆ. ರಾಜ್ಯಪಾಲರಿಗೆ ಆ ಅಧಿಕಾರ ಇದೆ. ಹೈಕೋರ್ಟ್‌ ಈ ಬಗ್ಗೆ ಏನೂ ಅಭಿಪ್ರಾಯ ಕೇಳಿಲ್ಲ. ಆದರೂ ರಾಜ್ಯಪಾಲರ ನಿರ್ಧಾರವನ್ನು ಸಂಪೂರ್ಣ ಪರಿಶೀಲನೆ ನಡೆಸಿ ಸರಿ ಇದೆ ಎನಿಸಿದ ಕಾರಣ ಅವರ ನಿರ್ಧಾರಕ್ಕೆ ಅನುಮೋದನೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

- ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಪ್ರಯತ್ನ

- ಕನ್ನಡಪ್ರಭ ಬಯಲಿಗೆ ಎಳೆದಿದ್ದ ಭಾರಿ ಹಗರಣ

- ಸಾಹುಕಾರ್‌ ಸಸ್ಪೆಂಡ್‌ ಮಾಡಿ ಗವರ್ನರ್‌ ನಿರ್ಧಾರ

- ಇದಕ್ಕೆ ಸಚಿವ ಸಂಪುಟದಿಂದ ಘಟನೋತ್ತರ ಒಪ್ಪಿಗೆ