ಸಾರಾಂಶ
ಕೆಎಎಸ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ವೇದಿಕೆ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಬೆಂಗಳೂರು : ಕೆಎಎಸ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ವೇದಿಕೆ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಭಾನುವಾರ ನಗರದ ತಮ್ಮ ಕಚೇರಿಯಲ್ಲಿ ‘ಕನ್ನಡದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿ, ಇಲ್ಲವೇ ನಮ್ಮ ರಕ್ತ ತೆಗೆದುಕೊಳ್ಳಿ’ ಎಂದು ಪತ್ರ ಬರೆದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ ಅವರು, ಪೂರ್ವಭಾವಿ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯ ಕನ್ನಡ ಭಾಷಾ ಪತ್ರಿಕೆಯಲ್ಲಿ ಮಾಡಿರುವ ತಪ್ಪುಗಳಿಂದ ಕನ್ನಡದ 76 ಸಾವಿರ ಮಕ್ಕಳಿಗೆ ಅನ್ಯಾಯವಾಗಿದೆ. ಭ್ರಷ್ಟ ಕೆಪಿಎಸ್‌ಸಿಯವರು ಮುಖ್ಯ ಪರೀಕ್ಷೆಯಿಂದ ಕನ್ನಡ ಅಭ್ಯರ್ಥಿಗಳನ್ನು ಹೊರಗೆ ಇಟ್ಟಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಕೆಪಿಎಸ್‌ಸಿ ಅಧ್ವಾನದ ಬಗ್ಗೆ ಎರಡು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಸಾವಿರಾರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಅನೇಕ ಸಾಹಿತಿಗಳು, ಕನ್ನಡದ ಸಂಘ-ಸಂಸ್ಥೆಗಳ ಮುಖ್ಯಸ್ಥರು ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಯಾರ ಮನವಿಗೂ ಮುಖ್ಯಮಂತ್ರಿಯವರಾಗಲಿ, ಸರ್ಕಾರವಾಗಿ, ಕೆಪಿಎಸ್‌ಸಿಯಾಗಲಿ ಪರಿಗಣಿಸುತ್ತಿಲ್ಲ ಎಂದು ನಾರಾಯಣಗೌಡ ಬೇಸರ ವ್ಯಕ್ತಪಡಿಸಿದರು.
ಮೂರು ದಿನಗಳಲ್ಲಿ ಎಲ್ಲವನ್ನು ಸರಿ ಮಾಡುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದರು. ಆದರೆ, ಯಾವುದೇ ಬದಲಾವಣೆ ಆಗಿಲ್ಲ. ಅವರನ್ನು ಯಾರು ದಾರಿ ತಪ್ಪಿಸುತ್ತಿದ್ದಾರೆ ಗೊತ್ತಿಲ್ಲ. ಅನ್ಯಾಯ ಸಹಿಸಬಾರದು ಎನ್ನುವ ಸಂದರ್ಭದಲ್ಲೇ ಮುಖ್ಯಮಂತ್ರಿಯವರು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಸಹಿಸುತ್ತಿರುವುದು ನೋಡಿದರೆ ನಮಗೆ ಅನುಮಾನ ಕಾಡುತ್ತಿದೆ. ಕೆಪಿಎಸ್‌ಸಿ ಭ್ರಷ್ಟಾಚಾರದಲ್ಲಿ ಸರ್ಕಾರ ಭಾಗವಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ ಎಂದು ನಾರಾಯಣಗೌಡ ಹೇಳಿದರು.
ರಾಜ್ಯದ ಮೂಲೆ ಮೂಲೆಯಿಂದ ಮುಖ್ಯಮಂತ್ರಿಯವರಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದಾರೆ. ನನ್ನ ರಕ್ತದಲ್ಲಿ ಪತ್ರ ಬರೆದಿದ್ದೇನೆ. ಅನ್ಯಾಯವಾದವರ ಸಾಲಿನಲ್ಲಿ ಸರ್ಕಾರದ ಸಚಿವರ ಮಕ್ಕಳು, ಅಧಿಕಾರಿಗಳ ಮಕ್ಕಳು ಇದ್ದರೆ ಅದನ್ನು ನೆನೆಸಿಕೊಳ್ಳಬೇಕು. ಅನ್ಯಾಯ ಸರಿಪಡಿಸದಿದ್ದರೆ. ಕೆಪಿಎಸ್‌ಸಿ ಭ್ರಷ್ಟಾಚಾರದ ಕೊಳೆ ಸಿದ್ದರಾಮಯ್ಯನವರಿಗೂ ಅಂಟಿಕೊಳ್ಳುತ್ತದೆ. ಹೀಗಾಗಿ, ನೈಜ ಕನ್ನಡ ಕಾಳಜಿ ತೋರಿಸಬೇಕು ಎಂದು ಅವರು ಆಗ್ರಹಿಸಿದರು.
ಮಾ.3ರಿಂದ ನಡೆಯುವ ಅಧಿವೇಶನ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕುಟುಂಬದವರು ವಿಷದ ಬಾಟಲಿಯೊಂದಿಗೆ ವಿಧಾನಸೌಧ ಎದುರು ಬರಲು ಯೋಚಿಸಿದ್ದಾರೆ. ವಿರೋಧ ಪಕ್ಷಗಳು ಕನ್ನಡ ಅಭ್ಯರ್ಥಿಗಳ ಪರವಾಗಿ ಮಾತನಾಡಬೇಕು. ನ್ಯಾಯ ಕೊಡಿಸಬೇಕು ಅಧಿವೇಶನದ ವೇಳೆ ಆಗುವ ಹೋಗುಗಳಿಗೆ ಸರ್ಕಾರವೇ ಹೊಣೆ ಎಂದು ನಾರಾಯಣಗೌಡ ಎಚ್ಚರಿಸಿದರು.
;Resize=(690,390))
)
)

;Resize=(128,128))
;Resize=(128,128))
;Resize=(128,128))
;Resize=(128,128))