ಸಾರಾಂಶ
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ‘ಆರ್‌ಸಿಬಿ ಹಿಂದಿ’ ಖಾತೆ ತೆರೆದಿರುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಶುಕ್ರವಾರ ಈ ಕುರಿತು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿಕೆ ನೀಡಿದ್ದು, ಆರ್‌ಸಿಬಿ ಫ್ರಾಂಚೈಸಿ ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ಹಿಂದಿಯಲ್ಲಿ ಖಾತೆ ತೆರೆದಿದೆ. ಇದು ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿ ಹೇರುವ ಉದ್ದೇಶವಾಗಿದ್ದರೆ ಕೂಡಲೇ ಕರ್ನಾಟಕ ಬಿಟ್ಟು ತೊಲಗಲಿ ಎಂದು ಕಿಡಿಕಾರಿದ್ದಾರೆ.
ಆರ್‌ಸಿಬಿ ಹಿಂದಿಯಲ್ಲಿ ಖಾತೆ ತೆರೆಯುವ ಮೂಲಕ ಕನ್ನಡಿಗರನ್ನು ಅಪಮಾನಿಸುತ್ತಿದೆ. ತಂಡದಲ್ಲಿ ಇತರೆ ರಾಜ್ಯದ ಆಟಗಾರರು ಇದ್ದಾರೆ. ಹೊರ ರಾಜ್ಯಗಳಲ್ಲೂ ಅಭಿಮಾನಿಗಳು ಇದ್ದಾರೆ ಎಂಬ ಕಾರಣಕ್ಕೆ ಹಿಂದಿಯಲ್ಲಿ ಖಾತೆ ತೆರೆದಿರುವುದಾದರೆ, ದೇಶದ ಎಲ್ಲ ಭಾಷೆಗಳಲ್ಲೂ ಖಾತೆ ತೆರೆಯಬೇಕಿತ್ತು. ಹಿಂದಿಯಲ್ಲಿ ಮಾತ್ರ ಯಾಕೆ ಖಾತೆ ತೆರೆಯಲಾಗಿದೆ ಎಂದು ಪ್ರಶ್ನಿಸಿದ್ದಾರೆ.ಆರ್‌ಸಿಬಿ ಫ್ರಾಂಚೈಸಿ ನಡೆಸುತ್ತಿರುವವರಿಗೆ ಹಿಂದಿಯೇ ಅತಿ ಪ್ರಿಯವಾಗಿದ್ದರೆ ಹಿಂದಿ ರಾಜ್ಯಗಳಿಗೆ ವಲಸೆ ಹೋಗಲಿ, ಬೆಂಗಳೂರು ಎಂಬ ಹೆಸರನ್ನು ಕೈಬಿಡಲಿ. ಕನ್ನಡಿಗರ ಆದರ, ಆತಿಥ್ಯ, ಅಭಿಮಾನಗಳಿಸಿ ಕನ್ನಡಿಗರ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಲಾಗುತ್ತಿದೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ಐದಾರು ಕನ್ನಡಿಗರನ್ನು ಖರೀದಿಸುವ ನಿರೀಕ್ಷೆ ಅಭಿಮಾನಿಗಳಿಗಿತ್ತು. ಆದರೆ ಎಲ್ಲ ಅವಕಾಶಗಳನ್ನು ಕೈಬಿಡಲಾಗಿದೆ. ಕರ್ನಾಟಕ ಪರವಾಗಿ ಆಡುತ್ತಿರುವ ಹಲವಾರು ಪ್ರತಿಭಾವಂತ ಆಟಗಾರರನ್ನು ಆರ್‌ಸಿಬಿ ಮೊದಲಿನಿಂದಲೂ ನಿರ್ಲಕ್ಷಿಸುತ್ತ ಬಂದಿದೆ. ದೇವದತ್ ಪಡಿಕ್ಕಲ್, ಮನೋಜ್ ಬಾಂಡಗೆ ಹೊರತುಪಡಿಸಿ ಯಾವ ಕನ್ನಡಿಗರನ್ನೂ ಖರೀದಿಸುವ ಮನಸು ಮಾಡಿಲ್ಲ.
ಕನ್ನಡಿಗರ ಪ್ರೀತಿ, ಅಭಿಮಾನಗಳಿಂದ ಆರ್‌ಸಿಬಿ ಬೆಳೆದಿದೆ. ಆದರೆ ಅದು ಮಾಡಿರುವ ವಿಶ್ವಾಸಘಾತಕತನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ತನ್ನ ತಪ್ಪುಗಳನ್ನು ಈ ಕೂಡಲೇ ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ಸ್ವರೂಪದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))