ಕುಂಭಮೇಳ ಕಾಲ್ತುಳಿತ - ಇಬ್ಬರ ಮೃತದೇಹ ಆಗಮನ - ಬೆಳಗಾವಿಯ ಸಾಂಬ್ರಾ ನಿಲ್ದಾಣಕ್ಕೆ ಆಗಮನ

| N/A | Published : Jan 31 2025, 09:22 AM IST / Updated: Jan 31 2025, 09:52 AM IST

Kumbhamela

ಸಾರಾಂಶ

ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ಪುಣ್ಯಸ್ನಾನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾದ ಬೆಳಗಾವಿಯ ನಾಲ್ವರ ಪೈಕಿ ಇಬ್ಬರ ಮೃತದೇಹಗಳನ್ನು ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ‌ ನಿಲ್ದಾಣಕ್ಕೆ ಗುರುವಾರ ಸಂಜೆ 6.20ಕ್ಕೆ ತೆಗೆದುಕೊಂಡು ಬರಲಾಯಿತು.

 ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ಪುಣ್ಯಸ್ನಾನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾದ ಬೆಳಗಾವಿಯ ನಾಲ್ವರ ಪೈಕಿ ಇಬ್ಬರ ಮೃತದೇಹಗಳನ್ನು ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ‌ ನಿಲ್ದಾಣಕ್ಕೆ ಗುರುವಾರ ಸಂಜೆ 6.20ಕ್ಕೆ ತೆಗೆದುಕೊಂಡು ಬರಲಾಯಿತು. ಇನ್ನಿಬ್ಬರ ಮೃತದೇಹಗಳು ದೆಹಲಿಯಿಂದ ಗೋವಾ ಮೂಲಕ ನಗರಕ್ಕೆ ತಡರಾತ್ರಿ ಆಗಮಿಸಿದವು.

ಬೆಳಗಾವಿಗೆ ಆಗಮಿಸಿದ ಶಿವಾಜಿ ನಗರದ ಮಹಾದೇವಿ ಬಾವನೂರ (48) ಹಾಗೂ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ (61) ಅವರ ಮೃತದೇಹಗಳನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯಿತು. ಮಹಾದೇವಿ ಹಾಗೂ ಅರುಣ ಕೋಪರ್ಡೆ ಅವರ ಶವಗಳು ಸರಿಯಾದ ಸಮಯಕ್ಕೆ ದೆಹಲಿಗೆ ತಲುಪಿದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವಿಮಾ‌ನದಲ್ಲಿ ‌ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತೆಗೆದುಕೊಂಡು ಬರಲಾಯಿತು. ಆದರೆ, ವಡಗಾವಿ ಜ್ಯೋತಿ ಹತ್ತರವಾಠ ಹಾಗೂ ಅವರ ಪುತ್ರಿ ಮೇಘಾ ಅವರ ಶವಗಳು ತಡವಾಗಿ ದೆಹಲಿ ತಲುಪಿದ್ದರಿಂದ ದೆಹಲಿಯಿಂದ ಗೋವಾಗೆ‌, ಅಲ್ಲಿಂದ ಬೆಳಗಾವಿಗೆ ತಲುಪಿದವು.

ಬಳಿಕ, ಜಿಲ್ಲಾಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷಾ ಪ್ರಕ್ರಿಯೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಈ ವೇಳೆ, ಸಂಸದರಾದ ಜಗದೀಶ ಶೆಟ್ಟರ್‌, ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಮಹಾದೇವಿ ಬಾವನೂರು ಮೃತ ದೇಹಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಬೆಳಗಾವಿ ಶಿವಾಜಿನಗರದಲ್ಲಿ ಮಹಾದೇವಿ ಅವರ ನಿವಾಸವಿದೆ. ಅಲ್ಲಿ ಪೂಜೆ ಸಲ್ಲಿಸಿ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ತಲಾ ₹ 2 ಲಕ್ಷ ಪರಿಹಾರ:

ಮೃತರ ಕುಟುಂಬದ ಅವಲಂಬಿತರಿಗೆ ತಂದೆ, ಸಚಿವ ಸತೀಶ ಜಾರಕಿಹೊಳಿ ಅವರು ವೈಯಕ್ತಿಕವಾಗಿ ತಲಾ ₹2 ಲಕ್ಷ ಪರಿಹಾರ ನೀಡಲಿದ್ದಾರೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಇದೆ ವೇಳೆ ಹೇಳಿದರು.

ಬಿಮ್ಸ್‌ನಲ್ಲೇ ಏಕೆ ಮರಣೋತ್ತರ ಪರೀಕ್ಷೆ?:

ಪ್ರಯಾಗರಾಜ್‌ನಲ್ಲಿ ನಡೆದ ಕಾಲ್ತುಳಿತದಿಂದ ಮೃತಪಟ್ಟಿರುವ ಒಟ್ಟು 30 ಜನರಲ್ಲಿ ನಾಲ್ವರು ಬೆಳಗಾವಿಯವರೇ ಇದ್ದಾರೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ದೆಹಲಿಯ ಆಸ್ಪತ್ರೆಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅಲ್ಲಿ ವಿಮಾನಗಳ ಸಮಯ ಹೊಂದಾಣಿಕೆ ಆಗದ ಹಿನ್ನೆಲೆ ಉತ್ತರಪ್ರದೇಶ ಮತ್ತು ದೆಹಲಿ ಪೊಲೀಸರು ನೀಡಿದ ಪ್ರಮಾಣಪತ್ರ ಆಧಾರದ ಮೇಲೆ ಏರ್‌ ಲಿಫ್ಟ್‌ ಮಾಡಲಾಗಿದೆ ಎಂದು ಡಿಸಿ ಮೊಹಮ್ಮದ ರೋಷನ್‌ ತಿಳಿಸಿದರು. ಹೀಗಾಗಿ ನಾಲ್ವರ ಮರಣೋತ್ತರ ಪರೀಕ್ಷೆಗಳನ್ನು ಬೆಳಗಾವಿ ಬಿಮ್ಸ್‌ನಲ್ಲಿಯೇ ನಿರ್ಧರಿಸಲಾಯಿತು ಎಂದು ತಿಳಿಸಿದರು.

ಪುಣ್ಯಸ್ನಾನದ ಹರಕೆ ಕೊನೆಗೂ ಈಡೇರಲಿಲ್ಲ

ಪ್ರಯಾಗರಾಜ್‌ನ ಮಹಾಕುಂಭಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಯಾತ್ರಾರ್ಥಿಗಳು ಗಂಗಾ, ಯಮುನಾ, ಸರಸ್ವತಿ ಸೇರುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಹರಕೆ ಕೊನೆಗೂ ಈಡೇರಲಿಲ್ಲ. ಇನ್ನೇನು ಪುಣ್ಯಸ್ನಾನ ಮಾಡುವ ಗಳಿಗೆ ಬರುತ್ತದೆ ಎಂದುಕೊಂಡಿದ್ದವರಿಗೆ ಕ್ಷಣಾರ್ಧದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಉಸಿರು ನಿಲ್ಲಿಸಿದರು. ಅವರ ಜೀವನದ ಹರಕೆ ಮೌನಿ ಅಮಾವಾಸ್ಯೆಯಂದು ಇನ್ನೇನು ಈಡೇರಿತೆಂದು ಅಂದುಕೊಳ್ಳುತ್ತಿರುವಾಗಲೇ ಕಮರಿ ಹೋಯಿತು.

ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಸಾವಿಗೀಡಾಗಿರುವ ಬೆಳಗಾವಿ ನಗರದ ವಡಗಾವಿಯ ತಾಯಿ, ಮಗಳಾದ ಜ್ಯೋತಿ ಹತ್ತರವಾಠ್ (50), ಮೇಘಾ ಹತ್ತರವಾಠ್ (24) ಹಾಗೂ ಶೆಟ್ಟಿಗಲ್ಲಿ ನಿವಾಸಿ ಅರುಣ ಕೋಪರ್ಡೆ ಹಾಗೂ ಶಿವಾಜಿ ನಗರದ ಮಾಹಾದೇವಿ ಭವನೂರ (50) ಅವರು ಶವವಾಗಿ ಬಂದಿದ್ದಾರೆ. ಸಾವಿನ ಸುದ್ದಿ ಕೇಳಿ ಈ ನಾಲ್ವರ ಮನೆಯಲ್ಲಿ ಸೂತಕ ಆವರಿಸಿದೆ.

ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಸ್ಥರ ಮನೆಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿ ಶಿವಾಜಿ ನಗರದ ಮಹಾದೇವಿ ಬಾವನೂರ ಅವರನ್ನು ನೆನೆದು ಪತಿ, ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆ ನಡೆಯುವ ಎರಡು ಗಂಟೆ ಮೊದಲೇ ತಮ್ಮ ಮನೆಯವರ ಜತೆಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಜನರನ್ನು ತೋರಿಸಿದ್ದರು. ಜಾಸ್ತಿ ಜನ ಇದ್ದಾರೆ. ಜೋಪಾನವಾಗಿರುವಂತೆ ನಾವು ಸಲಹೆ ನೀಡಿದೆವು. ರಾತ್ರಿ 2 ಗಂಟೆಗೆ ಕಾಣೆಯಾದ ಮಾಹಿತಿ ಬಂತು. ಬಳಿಕ ಸಾವಿನ ಸುದ್ದಿಯೂ ಬಂತು ಎಂದು ಮೃತರ ಪೋಷಕರು ಕಣ್ಣೂರು ಹಾಕುತ್ತಿದ್ದಾರೆ.