ನಕ್ಸಲ್‌ ಚಳವಳಿಯ ಕೊನೆಯ ಕೊಂಡಿ ಲಕ್ಷ್ಮೀ ತೊಂಬಟ್ಟು ಉಡುಪಿ ಜಿಲ್ಲಾಡಳಿತದ ಮುಂದೆ ಶರಣು

| N/A | Published : Feb 03 2025, 07:41 AM IST

बीजापुर जिले में नक्सलियों ने दो आदिवासियों पर मुखबिरी का आरोप लगाकर भरी सभा में उनकी हत्या कर दी

ಸಾರಾಂಶ

ನಕ್ಸಲ್‌ ಚಳವಳಿಯ ಕೊನೆಯ ಕೊಂಡಿ ಎನ್ನಲಾದ ಲಕ್ಷ್ಮೀ ತೊಂಬಟ್ಟು ಭಾನುವಾರ ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ.

ಉಡುಪಿ : ನಕ್ಸಲ್‌ ಚಳವಳಿಯ ಕೊನೆಯ ಕೊಂಡಿ ಎನ್ನಲಾದ ಲಕ್ಷ್ಮೀ ತೊಂಬಟ್ಟು ಭಾನುವಾರ ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ.

ನಕ್ಸಲ್‌ ಚಟುವಟಿಕೆಯಿಂದ ನಿಷ್ಕ್ರಿಯಳಾಗಿ, ನಂತರ ರಾಜ್ಯದಿಂದ ತಲೆ ಮರೆಸಿಕೊಂಡಿದ್ದ ಲಕ್ಷ್ಮೀ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೊಂಬಟ್ಟುನವರು. ಲಕ್ಷ್ಮೀ ತಮ್ಮ ನಕ್ಸಲ್ ಸಂಗಾತಿ ಸಲೀಂ ಯಾನೆ ಸಂಜೀವ್‌ ಅವರನ್ನು ಚಳವಳಿಯಲ್ಲಿರುವಾಗಲೇ ಮದುವೆಯಾಗಿದ್ದರು. ಸಂಜೀವ್ ಆಂಧ್ರದಲ್ಲಿ ಶರಣಾಗಿ ಸಾಮಾನ್ಯ ಜೀವನ ನಡೆಸುತಿದ್ದಾರೆ. ಲಕ್ಷ್ಮೀ ಮೇಲೆ ಆಂಧ್ರದಲ್ಲಿ ಯಾವುದೇ ಪ್ರಕರಣಗಳಿಲ್ಲ. ಆದ್ದರಿಂದ ಆಕೆ ಕರ್ನಾಟಕದಿಂದ ತಲೆಮರೆಸಿಕೊಂಡು ಪತಿಯೊಂದಿಗೆ ಆಂಧ್ರದಲ್ಲಿ ನೆಲೆಸಿದ್ದಳು.

ಲಕ್ಷ್ಮೀ ಭಾನುವಾರ ಬೆಳಗ್ಗೆ 11ಕ್ಕೆ ರಾಜ್ಯ ನಕ್ಸಲ್ ಶರಣಾಗತಿ ಸಮಿತಿ ಸದಸ್ಯ ಶ್ರೀಪಾಲ್ ಅವರೊಂದಿಗೆ ನಗರದ ಬ್ರಹ್ಮಗಿರಿಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದರು. ಎಸ್ಪಿ ಡಾ। ಅರುಣ್ ಹಾಗೂ ಎಎನ್ಎಫ್ ಇನ್‌ಸ್ಪೆಕ್ಟರ್ ಸತೀಶ್ ಅಗತ್ಯ ಕಾನೂನು ಪ್ರಕ್ರಿಯೆ ನಡೆಸಿದರು. ನಂತರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಲಾಯಿತು. ಡಿಸಿ ಡಾ। ವಿದ್ಯಾಕುಮಾರಿ ನೇತೃತ್ವದ ಜಿಲ್ಲಾಮಟ್ಟದ ನಕ್ಸಲ್ ಶರಣಾಗ ಸಮಿತಿ ಮುಂದೆ ಲಕ್ಷ್ಮೀ ಶರಣಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ। ವಿದ್ಯಾಕುಮಾರಿ, ಲಕ್ಷ್ಮೀ ಮೂಲತಃ ಕರ್ನಾಟಕದವರೇ ಆಗಿರುವುದರಿಂದ, ಸರ್ಕಾರದ ಶರಣಾಗತಿ ಪ್ಯಾಕೇಜ್ ನಿಯಮದಂತೆ ಅವರನ್ನು ‘ಎ’ ವರ್ಗಕ್ಕೆ ಸೇರಿಸಲಾಗಿದೆ. ಅವರಿಗೆ ₹7.50 ಲಕ್ಷ ಶರಣಾಗತಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದರು.

ರಾಜ್ಯ ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ ಶ್ರೀಪಾಲ್, ಜಿಲ್ಲಾ ಶರಣಾಗತಿ ಸಮಿತಿಯ ಸದಸ್ಯರಾದ ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾರಾಯಣ ಸ್ವಾಮಿ, ಎಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಇದ್ದರು.

ನ್ಯಾಯಾಂಗ ಬಂಧನ:

ಶರಣಾಗತಿಯ ಕಚೇರಿ ಪ್ರಕ್ರಿಯೆಗಳ ಬಳಿಕ ಕುಂದಾಪುರ ಡಿವೈಎಸ್ಪಿ ಕುಲಕರ್ಣಿ ನೇತೃತ್ವದ ಪೊಲೀಸ್‌ ತಂಡವು, ಲಕ್ಷ್ಮೀಯನ್ನು ವಶಕ್ಕೆ ಪಡೆಯಿತು, ನಂತರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಭಾನುವಾರ ರಜಾದಿನವಾದ್ದರಿಂದ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಿದರು.

ನಾನಾಗಿಯೇ ಶರಣಾಗಿದ್ದೇನೆ

ನನ್ನ ಮೇಲೆ ಯಾರ ಒತ್ತಡವೂ ಇಲ್ಲದೆ ಶರಣಾಗಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ ನಕ್ಸಲ್ ಶರಣಾಗತಿ ಪ್ಯಾಕೇಜ್‌ಗಳನ್ನು ಮಾಧ್ಯಮದಲ್ಲಿ ನೋಡಿದೆ. ಅದರಂತೆ ರಾಜ್ಯದಲ್ಲಿ ಶರಣಾಗುವುದಕ್ಕೆ ತೀರ್ಮಾನಿಸಿ ಬಂದಿದ್ದೇನೆ. ನಮ್ಮ ಊರಿಗೆ ರಸ್ತೆ, ಆಸ್ಪತ್ರೆ, ಶಾಲೆ ಇಲ್ಲ. ಊರಿನ ಅಭಿವೃದ್ಧಿ ಆಗಬೇಕು ಎಂದು ಷರತ್ತುಗಳನ್ನು ವಿಧಿಸಿದ್ದೇನೆ.

- ತೊಂಬಟ್ಟು ಲಕ್ಷ್ಮೀ, ಶರಣಾದ ನಕ್ಸಲ್

ಒಟ್ಟು 3 ಪ್ರಕರಣಗಳಿವೆ

ಉಡುಪಿ ಜಿಲ್ಲೆಯಲ್ಲಿ ಶಂಕರನಾರಾಯಣ ಠಾಣೆಯಲ್ಲಿ ಕರಪತ್ರ ಅಂಟಿಸಿದ, ಬೆದರಿಕೆ ಒಡ್ಡಿದ ಒಟ್ಟು 3 ಪ್ರಕರಣ ಲಕ್ಮೀ ವಿರುದ್ಧ ದಾಖಲಾಗಿವೆ. ಈ 3 ಪ್ರಕರಣ ಸಂಬಂಧ ಪೊಲೀಸ್‌ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸುತ್ತೇವೆ.

-ಡಾ। ಅರುಣ್‌, ಉಡುಪಿ ಎಸ್‌ಪಿ.

ರಾಜ್ಯವೀಗ ನಕ್ಸಲ್‌ಮುಕ್ತ

ರಾಜ್ಯದಲ್ಲಿ ಈವರೆಗೆ ಒಟ್ಟು 22 ನಕ್ಸಲರು ಶರಣಾಗಿದ್ದು, ನಮ್ಮ ರಾಜ್ಯದ ಬೇರೆ ಯಾರೂ ಈಗ ನಕ್ಸಲ್‌ ಚಳವಳಿಯಲ್ಲಿ ಇಲ್ಲ. ಆದ್ದರಿಂದ ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯ ಎಂದು ಸರ್ಕಾರ ಘೋಷಿಸಬಹುದು. ಶರಣಾದ ನಕ್ಸಲರ ಪ್ರಕರಣಗಳು ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಅಥವಾ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಗಳಲ್ಲಿದ್ದು ತ್ವರಿತವಾಗಿ ವಿಚಾರಣೆ ನಡೆಸುವಂತೆ ವಿನಂತಿಸಲಾಗಿದೆ.

-ಶ್ರೀಪಾಲ್, ರಾಜ್ಯ ನಕ್ಸಲ್ ಶರಣಾಗತಿ ಸಮಿತಿ ಸದಸ್ಯ