ಸಾರಾಂಶ
ಒಂದು ಬಾರಿ ಇಡೀ ಜಮೀನು, ಪ್ರದೇಶ ಮಾರಾಟದ ಕುರಿತು ಕ್ರಯಪತ್ರ ಮಾಡಿಕೊಂಡ ಮೇಲೆ ಭೂ ಮಾಲೀಕರು ಅದರಲ್ಲಿ ಯಾವುದೇ ಭಾಗ ಉಳಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು : ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ನಿರ್ಮಾಣ ಉದ್ದೇಶಕ್ಕೆ ಒಂದು ಬಾರಿ ಇಡೀ ಜಮೀನು, ಪ್ರದೇಶ ಮಾರಾಟದ ಕುರಿತು ಕ್ರಯಪತ್ರ ಮಾಡಿಕೊಂಡ ಮೇಲೆ ಭೂ ಮಾಲೀಕರು ಅದರಲ್ಲಿ ಯಾವುದೇ ಭಾಗ ಉಳಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.
ನಗರದ ಕೀರ್ತಿ ಹಾರ್ಮೋನಿ ಅಪಾರ್ಟ್‌ಮೆಂಟ್ ಮಾಲೀಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಮಳೆ ನೀರು ಕೊಯ್ಲು ಮತ್ತು ಎಸ್‌ಟಿಪಿ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್ ನಿರ್ಮಿಸಲು ಹನುಮಂತರೆಡ್ಡಿ ಎಂಬುವರಿಗೆ ಬಿಬಿಎಂಪಿ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದೆ. ಹೊಸ ಅಪಾರ್ಟ್‌ಮೆಂಟ್ ಸಂಕೀರ್ಣ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಬಿಬಿಎಂಪಿಯ ಕ್ರಮ ಸಂಪೂರ್ಣ ಕಾನೂನು ಬಾಹಿರ ಎಂದಿದೆ.
ರಾಮಮೂರ್ತಿ ನಗರದಲ್ಲಿ ಕೀರ್ತಿ ಎಸ್ಟೇಟ್ಸ್ ಮತ್ತು ಭೂ ಮಾಲೀಕರು ಜಂಟಿ ಒಪ್ಪಂದ ಮಾಡಿಕೊಂಡು ಅಪಾರ್ಟ್‌ಮೆಂಟ್ ನಿರ್ಮಿಸಿ ಫ್ಲ್ಯಾಟ್‌ಗಳನ್ನು ಮಾರಿದ್ದರು. ಖರೀದಿಗಾರರಿಗೆ ಜಮೀನಿನ ಮೇಲೆ ಹಕ್ಕು (ಯುಡಿಎಸ್) ನೀಡಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಭೂಮಾಲೀಕ ಹನುಮಂತರೆಡ್ಡಿ, ಉಳಿಕೆ ಜಾಗದಲ್ಲಿ ಮತ್ತೊಂದು ಹೊಸ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಅನುಮೋದನೆ ಪಡೆದಿದ್ದರು. ಆದರೆ, ಇಡೀ ಜಾಗ ಈಗಾಗಲೇ ನಿರ್ಮಿಸಿರುವ ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ಸೇರಿದ್ದರಿಂದ ಹೊಸ ಕಟ್ಟಡಕ್ಕೆ ಬಿಬಿಎಂಪಿ ಅನುಮೋದನೆ ನೀಡಿರುವುದನ್ನು ರದ್ದುಪಡಿಸುವಂತೆ ಕೋರಿ ಫ್ಲ್ಯಾಟ್ ನಿವಾಸಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಮಳೆ ನೀರು ಕೊಯ್ಲು ಮತ್ತು ಎಸ್‌ಟಿಪಿ ನಿರ್ಮಿಸಲು ಅನುಮೋದನೆ ಪಡೆದಿದ್ದ ಭೂ ಮಾಲೀಕರು, ಈಗ ಆ ಜಾಗದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಾನೂನುಬಾಹಿರ ಎಂದು ದೂರಿದ್ದರು.
‘ಹೊಸ ಅಭಿವೃದ್ಧಿ ಕೆಲಸಗಳನ್ನು ಮಾಡುವ ಷರತ್ತುಗಳಿಗೆ ಒಳಪಟ್ಟು ಫ್ಲ್ಯಾಟ್‌ಗಳನ್ನು ಮಾರಲಾಗಿದೆ. ಫ್ಲ್ಯಾಟ್ ಮಾಲೀಕರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಭೂಮಾಲೀಕರು ವಾದಿಸಿದ್ದರು. ಆದರೂ, ಅಪಾರ್ಟ್‌ಮೆಂಟ್ ಖರೀದಿದಾರರ ಸಹಮತಿ ಇಲ್ಲದೇ ಏಕಪಕ್ಷೀಯವಾಗಿ ಯಾವುದೇ ಕೆಲಸಗಳನ್ನು ಮಾಡಲಾಗದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.