ಆದಾರ್‌ ಲಿಂಕ್ಡ್‌ ಜಾತಿ ಗಣತಿ ನಡೆಯಲಿ -ವಿರೋಧದ ನಡುವೆಯೂ ಸರ್ಕಾರ ವರದಿ ಅನುಷ್ಠಾನಕ್ಕೆ ಮುಂದಾದರೆ ಪರಿಣಾಮ

| Published : Oct 10 2024, 11:41 AM IST

CN Balakrishna

ಸಾರಾಂಶ

ಮುಡಾ, ವಾಲ್ಮೀಕಿ ಬೇಗೆಯಲ್ಲಿ ಬೇಯುತ್ತಿದ್ದ ರಾಜ್ಯ ರಾಜಕಾರಣದಲ್ಲಿ ಇದೀಗ ಹಠಾತ್ ಜಾತಿ ಗಣತಿ ವಿಚಾರ ಮುನ್ನೆಲೆಗೆ ಬಂದಿದೆ. ಜಾತಿ ಗಣತಿ ಜಾರಿ ಇಂಗಿತ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಜಾತಿ ಗಣತಿ ವರದಿಯನ್ನು ಮಂಡಿಸಿ ಚರ್ಚೆಗೆ ಸಜ್ಜಾಗಿದೆ.

ಸಿ.ಎನ್‌.ಬಾಲಕೃಷ್ಣ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ

==========

ಸಿದ್ದು ಚಿಕ್ಕಬಳ್ಳೇಕೆರೆ

=====

ಮುಡಾ, ವಾಲ್ಮೀಕಿ ಬೇಗೆಯಲ್ಲಿ ಬೇಯುತ್ತಿದ್ದ ರಾಜ್ಯ ರಾಜಕಾರಣದಲ್ಲಿ ಇದೀಗ ಹಠಾತ್ ಜಾತಿ ಗಣತಿ ವಿಚಾರ ಮುನ್ನೆಲೆಗೆ ಬಂದಿದೆ. ಜಾತಿ ಗಣತಿ ಜಾರಿ ಇಂಗಿತ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಜಾತಿ ಗಣತಿ ವರದಿಯನ್ನು ಮಂಡಿಸಿ ಚರ್ಚೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೆ ಜಾತಿ ಗಣತಿ ಪರ ಹಾಗೂ ವಿರೋಧ ಅಭಿಪ್ರಾಯಗಳು ಮುನ್ನೆಲೆಗೆ ಬಂದಿವೆ. ಹಿಂದುಳಿದ ಹಾಗೂ ದಲಿತ ಸಮುದಾಯಗಳ ನಾಯಕರು ಜಾತಿ ಗಣತಿ ಜಾರಿಗೊಳಿಸುವ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದರೆ ಮುಂದುವರೆದ ಜಾತಿಗಳು ಜಾತಿ ಗಣತಿ ನಡೆದ ವಿಧಾನವನ್ನೇ ಪ್ರಶ್ನಿಸಿವೆ. ವಿರೋಧ ವ್ಯಕ್ತಪಡಿಸುವವರ ಪೈಕಿ ರಾಜ್ಯ ಒಕ್ಕಲಿಗ ಸಂಘ ಮುಂಚೂಣಿಯಲ್ಲಿದೆ. ಇಷ್ಟಕ್ಕೂ ಒಕ್ಕಲಿಗ ಸಂಘ ಜಾತಿಗಣತಿಯನ್ನು ವಿರೋಧಿಸುತ್ತಿರುವುದು ಏಕೆ? ಜಾತಿ ಗಣತಿ ಸರಿಯಿಲ್ಲ, ಎಂದರೆ ಇದಕ್ಕೆ ಪರ್ಯಾಯವಾಗಿ ಸರ್ಕಾರ ಏನು ಮಾಡಬೇಕು? ಜಾತಿ ಗಣತಿ ಜಾರಿ ಮುಂದಾದರೆ ಸಂಘ ಏನು ಮಾಡುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್‌.ಬಾಲಕೃಷ್ಣ.

*ಜಾತಿ ಗಣತಿಗೆ ನಿಮ್ಮ ವಿರೋಧವೇಕೆ?

-ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ವೈಜ್ಞಾನಿಕವಾಗಿ ವರದಿ ತಯಾರಿಸಿಲ್ಲ. ಹಾಗಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಕಾಂತರಾಜು ಅವರ ನೇತೃತ್ವದಲ್ಲಿ ಕೈಗೊಂಡ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿಗೆ ಹಲವು ಸಮುದಾಯಗಳಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿವೆ. ನಮ್ಮ ಮನೆಗೆ ಬಂದು ಸಮೀಕ್ಷೆ ನಡೆಸಿಲ್ಲ ಎಂದು ಸಾವಿರಾರು ದೂರವಾಣಿ ಕರೆ, ಪತ್ರಗಳು ರಾಜ್ಯ ಒಕ್ಕಲಿಗರ ಸಂಘಕ್ಕೆ ಬಂದಿವೆ. ಇದನ್ನು ಹಲವು ಬಾರಿ ಸರ್ಕಾರದ ಗಮನಕ್ಕೂ ತಂದು ಮನವಿ ಸಲ್ಲಿಸಲಾಗಿದೆ. ಹೀಗಿದ್ದರೂ ಸರ್ಕಾರ ವರದಿ ಅನುಷ್ಠಾನಗೊಳಿಸಲು ಮುಂದಾಗಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

*ವರದಿಯಲ್ಲಿ ಸಮಗ್ರ ಮಾಹಿತಿಗಳಿವೆ ಎಂದು ಸರ್ಕಾರ ಹೇಳುತ್ತಿದೆಯಲ್ಲಾ?

-ರಾಜ್ಯದಲ್ಲಿ ಪ್ರಸ್ತುತ ಆಧಾರ್‌ ಲಿಂಕ್ಡ್‌ ಮಾಹಿತಿ ಪ್ರಕಾರ 7 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಆದರೆ ಆಯೋಗವು 5.98 ಕೋಟಿ ಜನರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿಕೆ ನೀಡಿದೆ. ಹಾಗಾದರೆ ಉಳಿದವರ ಕಥೆ ಏನು? ಅವರ ಮಾಹಿತಿಯನ್ನೂ ಕ್ರೋಢೀಕರಿಸುವುದು ಬೇಡವೇ? ಒಂದು ಕೋಟಿಗೂ ಅಧಿಕ ಜನರ ಮಾಹಿತಿಯಿಲ್ಲದೇ ಇದು ಸಮಗ್ರ ವರದಿ ಹೇಗಾಗುತ್ತದೆ? ಈ ಒಂದು ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ ಎಲ್ಲ ಸಮುದಾಯದವರೂ ಬರುವುದಿಲ್ಲವೇ? ಈ ವರದಿಯನ್ನು ಅನುಷ್ಠಾನಗೊಳಿಸಿದರೆ ಇಷ್ಟೊಂದು ಪ್ರಮಾಣದ ಜನರ ಹಕ್ಕುಗಳಿಗೆ ಧಕ್ಕೆ ಉಂಟಾಗುವುದಿಲ್ಲವೇ? ಯಾವ ಮಾನದಂಡದಲ್ಲಿ ಈ ವರದಿಯನ್ನು ಒಪ್ಪಬೇಕು? ಈ ವರದಿ ಸಂದೇಹಾಸ್ಪದವಲ್ಲವೇ?

*ವರದಿ ತಯಾರಿಸುವಾಗಿನ ಮಾನದಂಡಕ್ಕೆ ನಿಮ್ಮ ಆಕ್ಷೇಪಣೆಯೇ?

-ಸರ್ಕಾರವು ಕೋಟ್ಯಂತರ ರುಪಾಯಿ ಜನರ ತೆರಿಗೆಯ ಹಣ ವೆಚ್ಚ ಮಾಡಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಣತಿ ನಡೆಸಲು ಹೊರಟಾಗ 8 ರಿಂದ 9 ಸಮುದಾಯದವರಿಗಾದರೂ ಆಯೋಗದಲ್ಲಿ ಪ್ರಾತಿನಿಧ್ಯ ನೀಡಬೇಕಿತ್ತು. ವರದಿ ಸಿದ್ಧಪಡಿಸುವ ಮುನ್ನ ಆಯೋಗದಲ್ಲಿ ಪ್ರಾತಿನಿಧ್ಯ ನೀಡಿದ್ದವರೊಂದಿಗೆ ಸಮಾಲೋಚಿಸಿ, ಕ್ರೋಢೀಕರಿಸಿ ವರದಿ ಸಿದ್ಧಪಡಿಸಿದ್ದರೆ ಈ ರೀತಿ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ವರದಿಯ ಸಿದ್ಧಪಡಿಸಿದ ರೀತಿಯೇ ಸರಿ ಇಲ್ಲ. ಆದ್ದರಿಂದ ಹಲವು ಸಂದೇಹ ಉಂಟಾಗಿವೆ.

*ವರದಿ ಅನುಷ್ಠಾನಕ್ಕೆ ಇದು ಸಕಾಲವಲ್ಲವೇ?

-ನಿಜವಾಗಿಯೂ ಇದು ಸರಿಯಾದ ಸಮಯವಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಕಾಂತರಾಜು ನೇತೃತ್ವದಲ್ಲಿ ಆಯೋಗ ರಚನೆಯಾದ 10 ವರ್ಷದ ಬಳಿಕ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು ಯಾವ ಕಾರಣಕ್ಕೆ ಎಂಬುದು ಬಹಿರಂಗ ಆಗಬೇಕು. ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾದಾಗ ವರದಿಗೆ ಸದಸ್ಯ ಕಾರ್ಯದರ್ಶಿಯು ಸಹಿಯನ್ನೇ ಹಾಕಿರಲಿಲ್ಲ. ಕಳೆದ 10 ವರ್ಷದ ಅವಧಿಯಲ್ಲಿ ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಹೀಗಿರುವಾಗ ಪ್ರಸ್ತುತ ಸ್ಥಿತಿಗತಿ ಒಳಗೊಂಡಿರದ ಹಳೆಯ ವರದಿಯ ಅಗತ್ಯವಿದೆಯೇ?

*ರಾಜ್ಯ ಒಕ್ಕಲಿಗರ ಸಂಘ ಹೊರತುಪಡಿಸಿದರೆ ಉಳಿದವರ್ಯಾರೂ ವರದಿಗೆ ಅಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿಲ್ಲವಲ್ಲ?

-ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರೂ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಹಲವು ಸಮುದಾಯಗಳೂ, ಸಂಘ-ಸಂಸ್ಥೆಗಳೂ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಜನಪ್ರತಿನಿಧಿಗಳಿಂದ ಪಕ್ಷಾತೀತವಾಗಿ ಆಕ್ಷೇಪ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ನ ಕೆಲವು ಸಚಿವರು, ಶಾಸಕರೂ ಸಹಮತ ವ್ಯಕ್ತಪಡಿಸುತ್ತಿಲ್ಲ. ಸರ್ಕಾರ ಇದನ್ನೆಲ್ಲಾ ಗಣನೆಗೆ ತೆಗೆದುಕೊಳ್ಳಬೇಕು. ಇನ್ನೂ ಆರು ತಿಂಗಳು ಅಥವಾ ಒಂದು ವರ್ಷ ಕಾಲಾವಕಾಶ ತೆಗೆದುಕೊಂಡು ಹೊಸದಾಗಿ ಪೂರ್ಣ ಪ್ರಮಾಣದ ವೈಜ್ಞಾನಿಕ ವರದಿ ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು. ಇದಕ್ಕೆ ನಮ್ಮ ತಕರಾರಿಲ್ಲ. ಸರ್ವರಿಗೂ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು, ಮೀಸಲಾತಿ ಸಿಗಬೇಕೆಂಬುದು ನಮ್ಮ ಕಳಕಳಿಯಾಗಿದೆ.

*ವರದಿ ಜಾರಿಯಾದರೆ ಒಕ್ಕಲಿಗೆ ಸಮುದಾಯಕ್ಕೇನು ಕಷ್ಟ?

-ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಯಾರಿಗೂ ಅನ್ಯಾಯವಾಗಬಾರದು. ನಾವು ಯಾವ ಜಾತಿಯ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಎಲ್ಲ ಸಮುದಾಯದವರ ಸಾಮಾಜಿಕ, ಆರ್ಥಿಕ, ಶೈಕ್ಷಣಿ ಸ್ಥಿತಿ ಪರಿಗಣಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಸೌಲಭ್ಯಗಳು ಸಿಗಬೇಕು. ಆದರೆ ಸರಿಯಾಗಿ ಸಮೀಕ್ಷೆಯನ್ನೇ ನಡೆಸಿಲ್ಲ. ಇನ್ನೆಲ್ಲಿ ಸರಿಯಾಗಿ ಸೌಲಭ್ಯ ನೀಡುತ್ತಾರೆ. ಆದ್ದರಿಂದ ವೈಜ್ಞಾನಿಕ ಸಮೀಕ್ಷೆಗೆ ನಾವು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದೇವೆ. ಆದರೆ ಸರ್ಕಾರವು ತರಾತುರಿಯಲ್ಲಿ ವರದಿ ಮಂಡನೆಗೆ ಮುಂದಾಗಿ ಸಂದೇಹಕ್ಕೆ ಅವಕಾಶ ಮಾಡಿಕೊಡಬಾರದು.

*ನಿಮ್ಮ ಸಮುದಾಯದ ಜನಪ್ರತಿನಿಧಿಗಳು ನಿಮ್ಮಷ್ಟು ವಿರೋಧ ಮಾಡುತ್ತಿಲ್ಲ?

-ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ। ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಈ ಬಗ್ಗೆ ಶೀಘ್ರದಲ್ಲೇ ಸಮುದಾಯಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಸ್ವಾಮೀಜಿಗಳಿಗೆ ಈ ಬಗ್ಗೆ ಮನವಿ ಮಾಡಲಿದ್ದು, ಸಲಹೆ ನಿಡುವ ವಿಶ್ವಾಸವಿದೆ. ಸಮುದಾಯದ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಶಾಸಕರು, ಸಂಘಟನೆಗಳ ಅಧ್ಯಕ್ಷರು ಸೇರಿದಂತೆ ಶ್ರೀಗಳ ಸಾನ್ನಿಧ್ನದಲ್ಲಿ ಗಣ್ಯರ ಸಭೆಯನ್ನು ಈ ಸಂಬಂಧ ಶೀಘ್ರ ಕರೆದು ಚರ್ಚೆ ನಡೆಸಲಾಗುವುದು.

*ವರದಿ ಸರಿಯಿಲ್ಲ ಅಂತೀರಲ್ಲ. ಹಾಗಿದ್ದರೆ ಇದಕ್ಕೆ ಪರ್ಯಾಯವೇನು?

-ಇಂದು ಬಹುತೇಕ ಸರ್ಕಾರಿ ಸೇವೆಗಳಿಗೂ ಆಧಾರ್‌ ಸಂಖ್ಯೆ ಕಡ್ಡಾಯ ಮಾಡಲಾಗಿದೆ. ಯಾವ ಊರಿನಲ್ಲಿ ಎಷ್ಟು ಜನಸಂಖ್ಯೆ ಇದೆ ಎನ್ನುವುದಂತೂ ತಿಳಿಯಲಿದೆ. ಆಧಾರ್‌ ಕಾರ್ಡ್‌ ಆಧರಿಸಿ ಜಾತಿ ಗಣತಿ ನಡೆಸಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಯಾವ ಗ್ರಾಮದಲ್ಲಿ ಎಷ್ಟು ಆಧಾರ್‌ ಕಾರ್ಡ್‌ಗಳಿವೆ, ಇವರು ಎಷ್ಟು ಜನರ ಮಾಹಿತಿ ಸಂಗ್ರಹಿಸಿದ್ದಾರೆ ಎಂಬುದು ಆಗ ಸ್ಪಷ್ಟವಾಗಿ ತಿಳಿಯಲಿದೆ. ಆದ್ದರಿಂದ ಆಧಾರ್‌ ಕಾರ್ಡ್‌ಗಳನ್ನು ಆಧರಿಸಿ ಸಮೀಕ್ಷೆ ನಡೆಸಿದರೆ ಪಕ್ಕಾ ಮಾಹಿತಿ ದೊರೆಯಲಿದೆ. ವಿರೋಧ ಉಂಟಾಗುವುದಿಲ್ಲ.

*ಒಂದೊಮ್ಮೆ ಸರ್ಕಾರ ವರದಿ ಅನುಷ್ಠಾನ ಮಾಡಿದರೆ?

-ತರಾತುರಿಯಾಗಿ, ದುರುದ್ದೇಶದಿಂದ ಸರ್ಕಾರ ವರದಿ ಅನುಷ್ಠಾನಕ್ಕೆ ಮುಂದಾಗಬಾರದು. ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಬೇಕಾಗಿದ್ದು ಸರ್ಕಾರದ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸಮುದಾಯಕ್ಕೂ ಅನ್ಯಾಯ ಆಗಬಾರದು. ವರದಿಯನ್ನು ಸಾರ್ವಜನಿಕ ಚರ್ಚೆ ನಡೆಸಲು ಅನುವಾಗುವಂತೆ ಬಹಿರಂಗಗೊಳಿಸಬೇಕು. ಗಣತಿಗೆ ಏಕೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿದೆ ಎಂಬುದನ್ನು ಪರಾಮರ್ಶಿಸಬೇಕು. ಆದರೆ, ಇಷ್ಟೆಲ್ಲಾ ತೀವ್ರ ವಿರೋಧದ ನಡುವೆಯೂ ಜಾತಿ ಗಣತಿ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾದರೆ ಅದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ.

*ಜಾತಿ ಗಣತಿ ವಿರುದ್ಧ ಹೋರಾಟ ಅಂತೀರಿ. ಆದರೆ, ಸಂಘದಲ್ಲೇ ಒಗ್ಗಟ್ಟು ಇಲ್ಲ. ಆಗಾಗ ಅವಿಶ್ವಾಸ ನಿರ್ಣಯ ಮಂಡನೆಯಾಗತ್ತೆ?

-ಕನಿಷ್ಠ ಒಂದು ವರ್ಷದವರೆಗೂ ಒಕ್ಕಲಿಗರ ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಾರದು ಎಂಬುದು ನಮ್ಮ ಅಭಿಪ್ರಾಯ. ಇದು ಸಂಘ ಮತ್ತು ಸಮುದಾಯದ ಹಿತದೃಷ್ಟಿಯಿಂದ ಒಳ್ಳೆಯದು. ಇಲ್ಲದಿದ್ದರೆ ಅವಿಶ್ವಾಸ ನಿರ್ಣಯದಲ್ಲೇ ಕಾಲಹರಣವಾಗಿ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತದೆ. ಈ ಸಂಬಂಧ ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡಲಾಗಿದೆ. ಈ ಸಂಬಂಧ ಸಂಘದ ಬೈಲಾಗೆ ತಿದ್ದುಪಡಿ ಮಾಡಲಾಗುವುದು. ಅ.18ರಂದು ಸಂಘದ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದ್ದು, ಕಾನೂನು ಚೌಕಟ್ಟಿನಲ್ಲಿ ನಾವು ಮುಂದುವರೆಯುತ್ತೇವೆ.

*ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ನಡೆಯುತ್ತಿದೆ. ಒಕ್ಕಲಿಗ, ದಲಿತ ಮುಖ್ಯಮಂತ್ರಿ ಕೂಗು ಕೇಳಿಸುತ್ತಿದೆಯಲ್ಲಾ?

-ಇದು ಆ ಪಕ್ಷದ ಆಂತರಿಕ ವಿಚಾರವಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ.

*ಒಳ ಮೀಸಲಾತಿ ಬಗ್ಗೆ ಸಂಘದ ನಿಲುವೇನು?

-ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಸೇರಿದಂತೆ ನ್ಯಾಯಾಲಯಗಳು ನೀಡುವ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು.