ನ.20ರ ಮದ್ಯ ಬಂದ್‌ : ಬಾರ್‌ ಮಾಲಿಕರ ಮಧ್ಯೆಯೇ ಒಡಕು? - ಬೆಂಬಲವಿಲ್ಲ ಎಂದವರು ನಮ್ಮ ಒಕ್ಕೂಟದವರಲ್ಲ: ಹೆಗ್ಡೆ

| Published : Nov 09 2024, 08:50 AM IST

illicit liquor

ಸಾರಾಂಶ

 ನ.20ರಂದು ರಾಜ್ಯಾದ್ಯಂತ ಕರೆ ನೀಡಿರುವ ಮದ್ಯ ಮಾರಾಟ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದವರು ನಮ್ಮ ಒಕ್ಕೂಟದ ಸದಸ್ಯರಲ್ಲ. ಅವರಿಗೂ ನಮಗೂ ಸಂಬಂಧವಿಲ್ಲ. ಬಂದ್‌ ನಡೆಸುವುದು ನಿಶ್ಚಿತ ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕ ಸ್ಪಷ್ಟಪಡಿಸಿದೆ.

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ ವಿರೋಧಿಸಿ ನ.20ರಂದು ರಾಜ್ಯಾದ್ಯಂತ ಕರೆ ನೀಡಿರುವ ಮದ್ಯ ಮಾರಾಟ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದವರು ನಮ್ಮ ಒಕ್ಕೂಟದ ಸದಸ್ಯರಲ್ಲ. ಅವರಿಗೂ ನಮಗೂ ಸಂಬಂಧವಿಲ್ಲ. ಬಂದ್‌ ನಡೆಸುವುದು ನಿಶ್ಚಿತ ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕ ಸ್ಪಷ್ಟಪಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್‌ ಹೆಗ್ಡೆ, ‘ಮೂರು ಸಾವಿರಕ್ಕೂ ಅಧಿಕ ಸನ್ನದುದಾರರು ನ.20ರಂದು ಮದ್ಯ ಮಾರಾಟ ಬಂದ್‌ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಬಂದ್‌ಗೆ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದವರು ನಮ್ಮ ಒಕ್ಕೂಟದ ಸದಸ್ಯರಲ್ಲ, ನಮ್ಮ ಹೋರಾಟಗಳಲ್ಲಿ ಪಾಲ್ಗೊಂಡವರೂ ಅಲ್ಲ. ನಮ್ಮ ಹೋರಾಟಕ್ಕೆ ಯಶಸ್ಸು ಸಿಗುತ್ತಿರುವುದನ್ನು ಅರಗಿಸಿಕೊಳ್ಳಲಾರದೇ ಈ ರೀತಿಯ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಎಲ್ಲ ವರ್ಗದ ಸನ್ನದುದಾರರ ಬೇಡಿಕೆಗೆ ಸಂಬಂಧಿಸಿದಂತೆ ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ಕೆಲವರು ‘ಬಂದ್‌ಗೆ ನಮ್ಮ ಬೆಂಬಲವಿಲ್ಲ’ ಎಂದು ನ.7ರಂದು ಹೇಳಿಕೆ ನೀಡಿದ್ದಾರೆ. ಹೀಗೆ ಹೇಳಿಕೆ ನೀಡಿದವರು ನ.8ರಂದು ಬೆಳಿಗ್ಗೆ ಮೈಸೂರಿನಲ್ಲಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ್‌ ಅವರೊಂದಿಗೆ ಉಪಾಹಾರ ಸೇವಿಸಿದ್ದಾರೆ. ಇದಕ್ಕೆ ಫೊಟೋ ಸಾಕ್ಷಿ ಇದೆ’ ಎಂದು ಮಾಧ್ಯಮಗಳಿಗೆ ಫೋಟೋ ಹಂಚಿಕೊಂಡಿದ್ದಾರೆ.

ಮದ್ಯ ಮಾರಾಟ ಬಂದ್‌ಗೆ ವಿರೋಧ ವ್ಯಕ್ತಪಡಿಸುವವರ ಹಿಂದೆ ಇರುವ ವ್ಯಕ್ತಿಗಳ ಕುರಿತು ನಮಗೆ ತಿಳಿದಿದೆ. ಜೊತೆಗೆ ಅಬಕಾರಿ ಸಚಿವರಿಗೆ ಸಂಬಂಧಿಸಿದ ವಿವರಗಳನ್ನೂ ನ.20ರ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಗೊಳಿಸುತ್ತೇವೆ ಎಂದು ಅವರು ವಿವರಿಸಿದ್ದಾರೆ.