ಸಾರಾಂಶ
‘ವೈದ್ಯರು ಹೇಳಿದ ಹಾಗೆ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಪ್ರತಿ ಕಾಯಿಲೆಯನ್ನೂ ನಿಯಂತ್ರಣಕ್ಕೆ ತರಬಹುದು. ನಾನು ಕಳೆದ 30 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದು, ಈವರೆಗೂ ವೈದ್ಯರು ಹೇಳಿದಂತೆ ಮ್ಯಾನೇಜ್ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು : ‘ವೈದ್ಯರು ಹೇಳಿದ ಹಾಗೆ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಪ್ರತಿ ಕಾಯಿಲೆಯನ್ನೂ ನಿಯಂತ್ರಣಕ್ಕೆ ತರಬಹುದು. ನಾನು ಕಳೆದ 30 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದು, ಈವರೆಗೂ ವೈದ್ಯರು ಹೇಳಿದಂತೆ ಮ್ಯಾನೇಜ್ ಮಾಡುತ್ತಿದ್ದೇನೆ. ಇನ್ನು ಎಷ್ಟು ದಿನ ಹೀಗೆ ಮ್ಯಾನೇಜ್ ಮಾಡುತ್ತೇನೋ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಆರೋಗ್ಯ ಇಲಾಖೆಯಿಂದ ಜಾರಿಗೊಳಿಸಲಾಗಿರುವ ‘ಗೃಹ ಆರೋಗ್ಯ’ ಯೋಜನೆಗೆ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಜೀವನ ಶೈಲಿಯಲ್ಲಿನ ಬದಲಾವಣೆ, ಆಹಾರ ಪದ್ಧತಿಯಲ್ಲಿ ಸುಧಾರಣೆ ತರದಿದ್ದರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳನ್ನು ಆರಂಭಿಕ ದಿನಗಳಲ್ಲೇ ನಿಯಂತ್ರಿಸಬೇಕು. ಇಲ್ಲದಿದ್ದರೆ ಮುಂದೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡುತ್ತವೆ. ವೈದ್ಯರು ನೀಡುವ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿದಾಗ ಮಾತ್ರ ಆರೋಗ್ಯದಲ್ಲಿ ಸುಧಾರಣೆ ತರಲು ಸಾಧ್ಯ ಎಂದರು.
ಮಾತ್ರೆ ತಗೋತಿದ್ದೆ, ಈಗ ಇನ್ಸುಲಿನ್ ತಗೋತೀನಿ:
1994ರಿಂದ ನಾನು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದೇನೆ. ಮೊದಲು ಮಾತ್ರೆಗಳನ್ನು ತೆಗೆದುಕೊಂಡು ಮಧುಮೇಹ ನಿಯಂತ್ರಣದಲ್ಲಿಟ್ಟಿದ್ದೆ. ಕೊರೋನಾ ನಂತರ ಬೆಳಗ್ಗೆ ಮತ್ತು ರಾತ್ರಿ ಇನ್ಸುಲಿನ್ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿದರು. ಅದನ್ನೂ ಪಾಲಿಸುತ್ತಿದ್ದೇನೆ. ಇನ್ನು ಎಷ್ಟು ದಿನ ಅದನ್ನು ಮಾಡುತ್ತೇನೋ ತಿಳಿಯದು. ಹಾಗೆಯೇ, 2000ರಲ್ಲಿ ಹೃದಯಾಘಾತಕ್ಕೊಳಗಾಗಿದ್ದೆ. ಆಗ ನನಗೆ ಸ್ಟೆಂಟ್ ಅಳವಡಿಸಲಾಗಿತ್ತು. ಅದಾದ ನಂತರದಿಂದಲೂ ಎಲ್ಲ ಕೆಲಸ ಮಾಡುತ್ತಿದ್ದೇನೆ. ಯಾವುದೆ ಸಮಸ್ಯೆಯಾಗಿಲ್ಲ. ವೈದ್ಯರು ಹೇಳಿದ್ದನ್ನೂ ಚಾಚೂ ತಪ್ಪದೆ ಪಾಲಿಸುತ್ತಿದ್ದೇನೆ. ವೈದ್ಯರು ಹೇಳುವ ಕ್ರಮಗಳನ್ನು ಪಾಲಿಸಿ, ಜೀವನ ಶೈಲಿಯಲ್ಲಿ ಸುಧಾರಣೆ ತರದಿದ್ದರೆ ಆರೋಗ್ಯ ಕಾಪಾಡುವುದು ಬಹಳ ಕಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮನೆ ಬಾಗಿಲಿಗೆ ಆರೋಗ್ಯ:
ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಪ್ರತಿಯೊಬ್ಬರಿಗೂ ಉಚಿತ ಔಷಧ ನೀಡಲು ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರಾರಂಭಿಕವಾಗಿ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಯೋಜನೆಯಂತೆ ಆರೋಗ್ಯ ಸಿಬ್ಬಂದಿ ಪ್ರತಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ತಮ್ಮ ವ್ಯಾಪ್ತಿಯಲ್ಲಿನ 15 ಮನೆಗಳಿಗೆ ತೆರಳಿ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಒಂದು ವೇಳೆ ಮಧುಮೇಹ ಮತ್ತು ರಕ್ತದೊತ್ತಡ ಕಂಡು ಬಂದರೆ ಅವರಿಗೆ ತಿಂಗಳಿಗಾಗುವಷ್ಟು ಔಷಧವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
3 ಕೋಟಿ ಜನರ ತಪಾಸಣೆ ಗುರಿ:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಗೃಹ ಆರೋಗ್ಯ ಯೋಜನೆ ಮೂಲಕ ರಾಜ್ಯದ 3 ಕೋಟಿ ಜನರ ಆರೋಗ್ಯ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಯಿಂದ ಹಣ ಖರ್ಚಾಗುತ್ತದೆ. ಅದರೆ, ಜನರ ಆರೋಗ್ಯ ಕಾಪಾಡುವುದು ನಮ್ಮ ಉದ್ದೇಶವಾಗಿದೆ. ಗೃಹ ಆರೋಗ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಲಾಗುವುದು ಎಂದರು.
ಸಚಿವ ರಾಮಲಿಂಗಾರೆಡ್ಡಿ, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಎಂಎಲ್ಸಿ ಸುಧಾಮ್‌ದಾಸ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಇತರರಿದ್ದರು.
5 ಕಿಮೀ ವಾಕಿಂಗ್ ಮಾಡಯ್ಯ!
ಗೃಹ ಆರೋಗ್ಯ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾದರೂ, ಕೋಲಾರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಔಷಧ ವಿತರಿಸಲಾಯಿತು. ಈ ವೇಳೆ ವರ್ಚುವಲ್ ಮೂಲಕ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಸಿಎಂ ಸಿದ್ದರಾಮಯ್ಯ, ಥೇಟ್ ವೈದ್ಯರ ರೀತಿಯಲ್ಲಿ ಅವರಿಗೆ ಪ್ರಶ್ನೆ ಕೇಳಿದರು. ಏನು ಸಮಸ್ಯೆಯಪ್ಪ ನಿನಗೆ? ಎಷ್ಟು ವರ್ಷದಿಂದ ಬಿಪಿ-ಶುಗರ್ ಇದೆ? ಅದಕ್ಕೆ ಚಿಕಿತ್ಸೆ ಪಡೆಯಲು ತಿಂಗಳಿಗೆ ಎಷ್ಟು ಖರ್ಚಾಗುತ್ತದೆ? ಇನ್ನು ಮುಂದೆ ಔಷಧಿ ಖರೀದಿಸಬೇಡ, ನಾವೇ ಕೊಡುತ್ತೇವೆ ಎಂದರು.
ಈ ವೇಳೆ ಗೋವಿಂದಪ್ಪ ಅವರೊಂದಿಗೆ ಮಾತನಾಡುವಾಗ, ‘ನಿನಗೆ ಬಿಪಿ-ಶುಗರ್ ಇದೆ ಎಂದು ಹೇಳುತ್ತೀಯಾ. ಆಹಾರ ಪದ್ಧತಿಯನ್ನು ಬದಲಿಸಿಕೋ. ಬೆಳಗ್ಗೆ ಎಷ್ಟು ಗಂಟೆ ವಾಕಿಂಗ್ ಮಾಡ್ತೀಯಾ’ ಎಂದು ಪ್ರಶ್ನಿಸಿದರು. ಅದಕ್ಕೆ ಗೋವಿಂದಪ್ಪ, ‘ಅರ್ಧ ಗಂಟೆ ಮಾಡ್ತೀನಿ’ ಎಂದುತ್ತರಿಸಿದರು. ಆಗ ಸಿದ್ದರಾಮಯ್ಯ, ದಿನಕ್ಕೆ 5 ಕಿ.ಮೀ. ವಾಕಿಂಗ್ ಮಾಡಬೇಕು ಕಣಯ್ಯ. 1 ರಿಂದ 1.30 ಗಂಟೆ ವಾಕಿಂಗ್ ಮಾಡು. ಹಂಗೇ ಸ್ವಲ್ಪ ವ್ಯಾಯಾಮ ಮಾಡು’ ಎಂದು ವೈದ್ಯರ ರೀತಿಯಲ್ಲೇ ಸಲಹೆ ನೀಡಿದರು.