ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ಗಿಡ್ಡನಹಳ್ಳಿ ಅಂಗನವಾಡಿ ಶಿಕ್ಷಕಿ ಮಂಜುಳ(55) ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ
ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ಗಿಡ್ಡನಹಳ್ಳಿ ಅಂಗನವಾಡಿ ಶಿಕ್ಷಕಿ ಮಂಜುಳ(55) ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮೃತ ಅಂಗನವಾಡಿ ಶಿಕ್ಷಕಿ ಮಂಜುಳ ನಂದಗುಡಿ ನಿವಾಸಿಯಾಗಿದ್ದು, ಕಳೆದ 35 ವರ್ಷಗಳಿಂದ ಗಿಡ್ಡನಹಳ್ಳಿ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿದ್ದರು. ಫೆ.1ರಂದು ಭಾನುವಾರ ತನ್ನ ಮಗನೊಂದಿಗೆ ಸ್ಕೂಟಿಯಲ್ಲಿ ಚಿಂತಾಮಣಿ ಸಮೀಪದ ಕೈಲಾಸಗಿರಿ ಕ್ಷೇತ್ರ ದರ್ಶನ ಮಾಡಿಕೊಂಡು ವಾಪಸ್ಸು ಬರುವಾಗ ಸಂತೆಕಲ್ಲಹಳ್ಳಿಯ ಬಳಿ ಕಾರು ಸ್ಕೂಟಿ ನಡುವೆ ಡಿಕ್ಕಿ ಸಂಭಿವಿಸಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿತ್ತು.ಬೆಂಗಳೂರಿನ ಮಾರತ್ತಹಳ್ಳಿಯ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಫೆ.೪ರಂದು ಬುಧವಾರ ಮಂಜುಳ ಮೆದುಳು ನಿಷ್ಕ್ರಿಯೆಗೊಂಡಿದೆ ಎಂದು ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದರು.
ಪತ್ನಿಯ ಅಂಗಾಂಗದಿಂದ ಹಲವರಿಗೆ ಜೀವದಾನದ ಬಗ್ಗೆ ಕುಟುಂಬದವರಿಗೆ ವೈದ್ಯರು ಮಾಹಿತಿ ನೀಡಿದರು. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ ಬಳಿಕ ಮೃತ ಮಂಜುಳ ಅವರ ಹೃದಯ, ಕಿಡ್ನಿ, ಲಿವರ್ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಿ ನೋವಿನಲ್ಲೂ ಸಾರ್ಥಕತೆ ಮೆರೆದು ಐವರ ಬಾಳಿಗೆ ಬೆಳಕಾಗಿದ್ದಾರೆ.ಅಂಗಾಂಗ ದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತ ಮಂಜುಳ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಂದಗುಡಿಯ ಕೆಪಿಎಸ್ ಶಾಲಾ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಹೊಸಕೋಟೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಗ್ರಾಮಸ್ಥರು ಅಂತಿಮ ವಿದಾಯ ಸಲ್ಲಿಸಿದರು.