ಸಾರಾಂಶ
ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಚರಿಸುವ ಐಷಾರಾಮಿ ‘ಗೋಲ್ಡನ್ ಚಾರಿಯಟ್’ (ಸುವರ್ಣ ರಥ) ಪ್ರವಾಸಿ ರೈಲನ್ನು ಪುನಾರಂಭಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.
ಲಿಂಗರಾಜು ಕೋರಾ
ಬೆಂಗಳೂರು : ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಚರಿಸುವ ಐಷಾರಾಮಿ ‘ಗೋಲ್ಡನ್ ಚಾರಿಯಟ್’ (ಸುವರ್ಣ ರಥ) ಪ್ರವಾಸಿ ರೈಲನ್ನು ಪುನಾರಂಭಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.
ಕರ್ನಾಟಕದ ಹೆಮ್ಮೆಯ ಐಷಾರಾಮಿ ಪ್ರವಾಸಿ ರೈಲು ‘ಸುವರ್ಣ ರಥ’ವನ್ನು ಮತ್ತೆ ಹಳಿಗೆ ಇಳಿಸುವಂತೆ ಶ್ರೀಮಂತ ವರ್ಗದ ಪ್ರವಾಸ ಪ್ರಿಯರಿಂದ ಬೇಡಿಕೆ ಬರುತ್ತಿದೆ. ಅಲ್ಲದೆ, ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲು ಈಗಾಗಲೇ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿರುವ ಸರ್ಕಾರ, ಬಡವರು, ಮಧ್ಯಮ ವರ್ಗ, ವಿದ್ಯಾರ್ಥಿಗಳು ಹಾಗೂ ವಿಲಾಸಿ, ಶ್ರೀಮಂತರ ಪ್ರವಾಸೋದ್ಯಮ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೂಡ ಆದ್ಯತೆ ನೀಡುವ ಇರಾದೆ ಹೊಂದಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಅಧಿಕಾರಿಗಳು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರಲ್ಲಿ ಗೋಲ್ಡನ್ ಚಾರಿಯಟ್ ರೈಲು ಪುನಾರಂಭಿಸುವ ಕುರಿತು ಪ್ರಾಥಮಿಕವಾಗಿ ಪ್ರಸ್ತಾಪಿಸಿದ್ದು, ಸಚಿವರು ಕೂಡ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ದುಬಾರಿ ದರದ ಕಾರಣ ಗೋಲ್ಡನ್ ಚಾರಿಯಟ್ ಕಾರ್ಯಾಚರಣೆಯಿಂದ ಈ ಹಿಂದೆ ಲಾಭಕ್ಕಿಂತ ನಷ್ಟವೇ ಹೆಚ್ಚು ಉಂಟಾಗಿದೆ. ಹಾಗಾಗಿ ಗೋಲ್ಡನ್ ಚಾರಿಯಟ್ ಪ್ರವಾಸದ ದರವನ್ನು ಕಡಿಮೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನೂ ಒತ್ತಾಯಿಸಿದೆ.
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಸಚಿವರುಗಳ ಸಮ್ಮೇಳನದಲ್ಲಿ ಸಚಿವ ಎಚ್.ಕೆ. ಪಾಟೀಲ್ ಅವರು ಗೋಲ್ಡನ್ ಚಾರಿಯಟ್ ರೈಲು ಯೋಜನೆಯನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಭಾರತ್ ಗೌರವ ರೈಲ್ವೆ ನೀತಿಯಂತೆ ಗೋಲ್ಡನ್ ಚಾರಿಯಟ್ ಪ್ರವಾಸ ನೀತಿಯನ್ನು ಬದಲಾವಣೆ ಮಾಡಿ ಪ್ರವಾಸದ ಶುಲ್ಕವನ್ನು ಕಡಿತಗೊಳಿಸಬೇಕು. ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರ, ಪಾರಂಪರಿಕ ಮತ್ತು ಪರಿಸರ ಪ್ರವಾಸೋದ್ಯಮ ತಾಣಗಳನ್ನು ಗೋಲ್ಡನ್ ಚಾರಿಯಟ್ ಯೋಜನೆಯಡಿ ಜೋಡಿಸಲು ಅವಕಾಶ ಕಲ್ಪಿಸುವ ಪ್ರವಾಸ ನೀತಿ ತರುವಂತೆ ಒತ್ತಾಯಿಸಿದ್ದರು.
ಐಷಾರಾಮಿ ಗೋಲ್ಡನ್ ಚಾರಿಯಟ್
ಗೋಲ್ಡನ್ ಚಾರಿಯಟ್ (ಸುವರ್ಣ ರಥ) ವಿಲಾಸಿ ರೈಲು ಸಂಚಾರವನ್ನು ಕೆಎಸ್‌ಟಿಡಿಸಿ ರೈಲ್ವೆ ಇಲಾಖೆ ಸಹಯೋಗದಲ್ಲಿ 2008ರಲ್ಲಿ ಆರಂಭಿಸಿತು. ಈ ಮಧ್ಯೆ ಕೋವಿಡ್ ಕಾರಣದಿಂದ ಸೇವೆ ಸ್ಥಗಿತಗೊಂಡಿತ್ತು. ಪುನಃ ಆರಂಭಿಸಿತಾದರೂ ನಷ್ಟದ ಕಾರಣ ಕಳೆದ ವರ್ಷ ಮತ್ತೆ ಸ್ಥಗಿತಗೊಂಡಿತ್ತು. ಈ ರೈಲು ಬೆಂಗಳೂರಿನಿಂದ ಹೊರಟು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಗೋವಾ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಐತಿಹಾಸಿಕ, ಸಾಂಸ್ಕೃತಿಕ, ವಾಸ್ತುಶಿಲ್ಪ ಮತ್ತು ಇತರೆ ರಮಣೀಯ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ದು ವಾಪಸ್ ಕರೆತರುತ್ತಿತ್ತು. ಆಧುನಿಕ ಸೌಲಭ್ಯಗಳಿರುವ ಈ ರೈಲಿನಲ್ಲಿ ಪ್ರಯಾಣಿಸಲು ಒಬ್ಬರಿಗೆ ಒಂದು ವಾರದ ಪ್ರವಾಸಕ್ಕೆ 1.15-1.30 ಲಕ್ಷ ರು. ಗಿಂತ ಹೆಚ್ಚು ದರ ವಿಧಿಸಲಾಗುತ್ತಿತ್ತು.