ಕುಂಭಮೇಳ ಟೂರ್‌ ಹೆಸರಲ್ಲಿ ಹಣ ಪಡೆದು ವಂಚಿಸಿ ಬೆಟ್ಟಿಂಗ್ ಆಡಿದ - ನೂರಕ್ಕೂ ಅಧಿಕ ಮಂದಿಗೆ ₹70 ಲಕ್ಷ ವಂಚನೆ

| N/A | Published : Mar 11 2025, 10:07 AM IST

Kumbamela

ಸಾರಾಂಶ

ಮಹಾಕುಂಭಮೇಳವನ್ನೇ ಬಂಡವಾಳ ಮಾಡಿಕೊಂಡು ಪ್ಯಾಕೇಜ್‌ ಟೂರ್‌ ಹೆಸರಿನಲ್ಲಿ ಜಾಹೀರಾತು ನೀಡಿ ನೂರಕ್ಕೂ ಅಧಿಕ ಮಂದಿಯಿಂದ ಲಕ್ಷಾಂತರ ರುಪಾಯಿ ಪಡೆದು ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಮಹಾಕುಂಭಮೇಳವನ್ನೇ ಬಂಡವಾಳ ಮಾಡಿಕೊಂಡು ಪ್ಯಾಕೇಜ್‌ ಟೂರ್‌ ಹೆಸರಿನಲ್ಲಿ ಜಾಹೀರಾತು ನೀಡಿ ನೂರಕ್ಕೂ ಅಧಿಕ ಮಂದಿಯಿಂದ ಲಕ್ಷಾಂತರ ರುಪಾಯಿ ಪಡೆದು ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಿಕೆಡಬ್ಲ್ಯೂ ಲೇಔಟ್ ನಿವಾಸಿ ರಾಘವೇಂದ್ರರಾವ್ (38) ಬಂಧಿತ. ವಂಚನೆಗೆ ಒಳಗಾದ 20ಕ್ಕೂ ಅಧಿಕ ಮಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಪ್ರವಾಸದ ಹೆಸರಿನಲ್ಲಿ ನೂರಕ್ಕೂ ಅಧಿಕ ಮಂದಿಯಿಂದ ಸುಮಾರು ₹70 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಲತಾಣದಲ್ಲಿ ಪ್ರವಾಸದ ಜಾಹೀರಾತು:

ಇತ್ತೀಚೆಗೆ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳವನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿ ರಾಘವೇಂದ್ರ, ಪಾಂಚಜನ್ಯ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌(ಪಾಂಚಜನ್ಯ ಯಾತ್ರೆ) ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ. ಅಯೋಧ್ಯೆ, ವಾರಣಾಸಿ, ಪ್ರಯಾಗ್ ರಾಜ್, ಚಿತ್ರಕೂಟ, ಬುದ್ದ ಗಯಾ, ಗಯಾ ಸೇರಿದಂತೆ ಸುತ್ತಮುತ್ತಲ ಸ್ಥಳಗಳಿಗೆ ಏಳು ಮತ್ತು ಹದಿನಾಲ್ಕು ದಿನಗಳ ಕಾಲ ವಿಮಾನ, ರೈಲು, ಬಸ್‌ನಲ್ಲಿ ಕಡಿಮೆ ದರಕ್ಕೆ ಪ್ರವಾಸಕ್ಕೆ ಕಳುಹಿಸುವುದಾಗಿ ಜಾಹಿರಾತು ನೀಡಿದ್ದ. ಈ ಪ್ರವಾಸಕ್ಕೆ ಒಬ್ಬರಿಗೆ 25 ಸಾವಿರ ರು.ನಿಂದ 40 ಸಾವಿರ ದರ ನಿಗದಿ ಮಾಡಿದ್ದ. ಪ್ರಯಾಣ, ಊಟ, ವಸತಿ ಎಲ್ಲಾ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದ. ಈ ಜಾಹೀರಾತು ನೋಡಿ ಸಂಪರ್ಕಿಸಿದವರ ಬಳಿ ಹಣ ಪಡೆದು ವಂಚನೆ ಮಾಡಿದ್ದಾನೆ.

ನಾನಾ ರೀತಿ ವಂಚನೆ:

ಆರೋಪಿ ರಾಘವೇಂದ್ರ ಕೆಲವರಿಂದ ಹಣ ಪಡೆದು ವಿಮಾನ ಟಿಕೆಟ್‌ ಬುಕ್‌ ಮಾಡಿ ಬಳಿಕ ರದ್ದುಗೊಳಿಸಿದ್ದಾನೆ. ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಸಬೂಬು ಕೇಳಿ ದಿನ ದೂಡಿದ್ದಾನೆ. ಇನ್ನು ಕೆಲವರನ್ನು ಪ್ರಯಾಗರಾಜ್‌ ಕಳುಹಿಸಿ, ರಾಜ್ಯಕ್ಕೆ ಮರಳಿ ಬರಲು ಟಿಕೆಟ್‌ ಬುಕ್‌ ಮಾಡದೆ ವಂಚಿಸಿದ್ದಾನೆ. ಹೀಗೆ ಆರೋಪಿಯು ಸುಮಾರು ನೂರಕ್ಕೂ ಅಧಿಕ ಮಂದಿಯಿಂದ ಹಣ ಪಡೆದು ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಹೂಡಿಕೆ

ಆರೋಪಿ ರಾಘವೇಂದ್ರ ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ಬಿದ್ದಿದ್ದ. ಪ್ರವಾಸದ ನೆಪದಲ್ಲಿ ಅಮಾಯಕರಿಂದ ಪಡೆದಿದ್ದ ಹಣದ ಪೈಕಿ ಸುಮಾರು 30 ಲಕ್ಷ ರು. ಈ ಬೆಟ್ಟಿಂಗ್‌ನಲ್ಲಿ ಹೂಡಿಕೆ ಮಾಡಿ ಸೋತಿರುವುದು ತನಿಖೆಯಿಂದ ಗೊತ್ತಾಗಿದೆ. ಉಳಿದ ಹಣ ಏನು ಮಾಡಿದ ಎಂಬುದರ ಬಗ್ಗೆ ಹೆಚ್ಚಿನ ತನಿಖೆಯಲ್ಲಿ ಬೆಳಕಿಗೆ ಬರಲಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಚಿತ್ರ: ರಾಘವೇಂದ್ರ ರಾವ್‌.