ಸಾರಾಂಶ
ಅಪರ ಜಿಲ್ಲಾಧಿಕಾರಿ ಡಾ। ಎಚ್.ಎಲ್.ನಾಗರಾಜು ಮತ್ತೆ ಸನ್ಯಾಸ ದೀಕ್ಷೆ ಪಡೆದು ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ.
ಮಂಡ್ಯ : ಅಪರ ಜಿಲ್ಲಾಧಿಕಾರಿ ಡಾ। ಎಚ್.ಎಲ್.ನಾಗರಾಜು ಮತ್ತೆ ಸನ್ಯಾಸ ದೀಕ್ಷೆ ಪಡೆದು ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ.
2011ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದಾಗ ಡಾ। ನಾಗರಾಜು ಆದಿ ಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದು ನಿಶ್ಚಲಾನಂದನಾಥ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ನಂತರ ಕುಟುಂಬ, ಸಾರ್ವಜನಿಕರ ಒತ್ತಡಕ್ಕೆ ಮಣಿದು ಸನ್ಯಾಸ ದೀಕ್ಷೆ ತ್ಯಜಿಸಿ ಮತ್ತೆ ಸರ್ಕಾರಿ ಅಧಿಕಾರಿಯಾಗಿದ್ದರು.
ಅವಿವಾಹಿತರಾಗಿರುವ ಡಾ। ನಾಗರಾಜು ಹದಿಮೂರು ವರ್ಷ ಬಳಿಕ ಮತ್ತೆ ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ. ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅನಾರೋಗ್ಯ ಕಾರಣ ಪೀಠ ತ್ಯಜಿಸುತ್ತಿದ್ದು, ಆ ಸ್ಥಾನಕ್ಕೆ ಡಾ। ನಾಗರಾಜು ಪೀಠಾಧಿಪತಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ಡಾ। ನಾಗರಾಜು ಫೋನ್ ಸ್ವಿಚ್ ಆಫ್ ಆಗಿತ್ತು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಡಾ। ನಾಗರಾಜು ಸನ್ಯಾಸ ದೀಕ್ಷೆ ಪಡೆಯುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಅದು ಅವರ ವೈಯಕ್ತಿಕ ವಿಚಾರ. ಎರಡು-ಮೂರು ದಿನ ರಜೆ ಕೇಳಿದ್ದಾರೆ. ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ.