ಸಾರಾಂಶ
ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸಂಯುಕ್ತ ಖಾಜಿಗಳು, ಧರ್ಮಗುರುಗಳ ನೇತೃತ್ವದಲ್ಲಿ ಕರಾವಳಿಯ ಮುಸ್ಲಿಂ ಸಮುದಾಯ ಶುಕ್ರವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಮಂಗಳೂರು : ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸಂಯುಕ್ತ ಖಾಜಿಗಳು, ಧರ್ಮಗುರುಗಳ ನೇತೃತ್ವದಲ್ಲಿ ಕರಾವಳಿಯ ಮುಸ್ಲಿಂ ಸಮುದಾಯ ಶುಕ್ರವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಿಡುವುದಿಲ್ಲ ಎಂದು ಧರ್ಮಗುರುಗಳು ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡದಂತೆ ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿದ್ದರೂ, ಹೆದ್ದಾರಿಯಲ್ಲಿ ಕಿಕ್ಕಿರಿದು ಸೇರಿದ್ದ ಜನಸಮೂಹದಿಂದಾಗಿ ಸುಮಾರು ಎರಡೂವರೆ ಗಂಟೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಕ್ಷರಶಃ ಬಂದ್ ಆಗಿತ್ತು.
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇರುವ ಅಡ್ಯಾರ್ ಷಾ ಗಾರ್ಡನ್‌ನಲ್ಲಿ ಸಾಗರೋಪಾದಿಯಲ್ಲಿ ಜನ ಸೇರಿದ್ದು, ಮೈದಾನದಲ್ಲಿ ಜಾಗವಿಲ್ಲದೆ ಹೆದ್ದಾರಿಯಲ್ಲೂ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಯಿಸಿದ್ದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಧರ್ಮಗುರುಗಳು, ಉಲಮಾಗಳ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆ ಹೋರಾಟದ ರಣಕಹಳೆ ಮೊಳಗಿಸಿತು. ವೇದಿಕೆಯಲ್ಲಿ ಧರ್ಮಗುರುಗಳನ್ನು ಹೊರತುಪಡಿಸಿ ಯಾವುದೇ ರಾಜಕೀಯ ನಾಯಕರಿಗೆ ಸ್ಥಾನ ಇರಲಿಲ್ಲ. ಪ್ರತಿಭಟನಾ ಸಮಾವೇಶದಲ್ಲಿ 150 ಧರ್ಮಗುರುಗಳು ಜತೆಯಾಗಿ ಭಾಗವಹಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.
ಕಾಯ್ದೆ ಜಾರಿಗೆ ಬಿಡಲ್ಲ:
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ದೇಶದ ಮುಸ್ಲಿಂ ಸಮುದಾಯದ ಹಕ್ಕನ್ನು ಕೇವಲ ಮುಸಲ್ಮಾನ ಎಂಬ ಕಾರಣಕ್ಕೆ ಫ್ಯಾಸಿಸ್ಟ್ ಶಕ್ತಿಗಳು ಕಸಿದುಕೊಳ್ಳಲು ಮುಂದಾಗಿವೆ. ಆದರೆ ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲು ಬಿಡುವುದಿಲ್ಲ. ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯ ಈ ನೆಲದಲ್ಲಿ ಬದುಕುತ್ತಿದೆ, ಇನ್ನೂ ಕೂಡ ಬದುಕಲಿದೆ ಎಂದು ಹೇಳಿದರು.
ಬುಲ್ಡೋಜ್ ಮಾಡುವ ತಂತ್ರ:
ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಮಾತನಾಡಿ, ನಮ್ಮ ಹೋರಾಟ ಯಾವುದೇ ಪಕ್ಷ, ಜಾತಿ, ಧರ್ಮದ ವಿರುದ್ಧ ಅಲ್ಲ. ಇಂಥ ಕರಾಳ ಕಾನೂನನ್ನು ಜಾರಿಗೊಳಿಸಿದ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ. ದೇಶದ ಲಕ್ಷಾಂತರ ಎಕರೆ ವಕ್ಫ್ ಜಾಗವನ್ನು ಕಬಳಿಸುವ ತಂತ್ರಗಾರಿಕೆ ಈ ತಿದ್ದುಪಡಿಯಲ್ಲಿದೆ. ಮುಸಲ್ಮಾನರನ್ನು ಛಿದ್ರಗೊಳಿಸುವ, ಮಸೀದಿಗಳನ್ನು ಬುಲ್ಡೋಜ್ ಮಾಡಲು ಮಾಡಿದ ತಂತ್ರಗಾರಿಕೆ ಇದು. ಇಂಥ ಅವೈಜ್ಞಾನಿಕ ಕಾನೂನು ಕಾರ್ಯರೂಪಕ್ಕೆ ತರಲು ಕೊನೆ ಉಸಿರಿರೋತನಕ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಮೇ 5ರವರೆಗೆ ವಕ್ಫ್ ಕುರಿತು ಸುಪ್ರೀಂ ಕೋರ್ಟ್ ಆದೇಶ ಬರುವವರೆಗೆ ನಮ್ಮ ಘೋಷಣೆ ನಿಲ್ಲೋದಿಲ್ಲ. ದೇಶದ ಜಾತ್ಯತೀತ ಸೌಧವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುತ್ತದೆ ಎಂಬ ಬಲವಾದ ವಿಶ್ವಾಸ ನಮ್ಮಲ್ಲಿದೆ. ವಕ್ಫ್ ಆಸ್ತಿಯಲ್ಲಿ ಯಾವುದೇ ಹಿಂದೂಗಳ, ರೈತರ ಭೂಮಿ ಇಲ್ಲ. ರಾಜ್ಯ ವಕ್ಫ್ ಮಂಡಳಿ ಎಂದೂ ಇತರ ಧರ್ಮೀಯರ ಜಾಗವನ್ನು ಮುಟ್ಟಲ್ಲ. ಗಾಂಧೀಜಿ, ಅಂಬೇಡ್ಕರ್ ಅವರ ಭಾರತದಲ್ಲಿ ವಕ್ಫ್ ಆಸ್ತಿ ಕಬಳಿಸಲು ಬಿಡುವ ಮಾತೇ ಇಲ್ಲ ಎಂದು ಗುಡುಗಿದರು.
ಮುಸ್ಲಿಮರನ್ನು ಇಲ್ಲವಾಗಿಸಲು ಅಸಾಧ್ಯ:
ಧರ್ಮಗುರು ಅಬ್ದುಲ್ ರಶೀದ್ ಝೈನಿ ಮಾತನಾಡಿ, ದೇಶ ಗಂಡಾಂತರ ಎದುರಿಸಿದಾಗೆಲ್ಲ ಉಲೆಮಾಗಳು ಹೋರಾಟ ಮಾಡಿದ್ದಾರೆ, ಸ್ವಾತಂತ್ರ್ಯ ಹೋರಾಟದಲ್ಲೂ ಉಲೆಮಾಗಳು ಸಮರ ಸಾರಿದ್ದರು. ಇದೀಗ ಮತ್ತೆ ಅಂಥ ಕಾಲ ಬಂದಿದೆ. ಎಲ್ಲೆಡೆ ಮುಸ್ಲಿಂ ಫೋಬಿಯಾ ಹರಡಲಾಗುತ್ತಿದೆ. ಮುಸಲ್ಮಾನರನ್ನು ಈ ದೇಶದಿಂದ ಇಲ್ಲವಾಗಿಸಲು ನಿಮಗೆ ಎಂದೂ ಸಾಧ್ಯವಿಲ್ಲ. ಎಲ್ಲ ಜಾತ್ಯತೀತರು ಒಗ್ಗಟ್ಟಾಗಿ ನಿಮ್ಮನ್ನು ಸಮುದ್ರಕ್ಕೆ ಎಸೆಯುವ ದಿನ ದೂರವಿಲ್ಲ ಎಂದು ಹೇಳಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ನಮ್ಮ ಈ ಹೋರಾಟವನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ಕಾಯ್ದೆಯನ್ನು ಹಿಂಪಡೆಯುವವರೆಗೆ ಹೋರಾಟ ಸಾಗಲಿದೆ. ಅವರ ಸಂಚನ್ನು ಸೋಲಿಸಲು ನಮಗೆ ತಾಕತ್ತಿದೆ. ಮುಸಲ್ಮಾನರನ್ನು 2ನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ನಿಮ್ಮ ಕನಸು ನನಸಾಗಲ್ಲ. ಸಂವಿಧಾನವನ್ನು ದುರ್ಬಲಗೊಳಿಸಲು ಈ ಮಣ್ಣಲ್ಲಿ ಯಾರೂ ಹುಟ್ಟಿಲ್ಲ. ಸಂವಿಧಾನ ಇರೋತನಕ ನಾವು ಈ ಮಣ್ಣಲ್ಲಿ ಎದ್ದು ನಿಲ್ಲುತ್ತೇವೆ ಎಂದು ಹೇಳಿದರು.
ಧರ್ಮಗುರುಗಳಾದ ಬಂಬ್ರಾಣ ಉಸ್ತಾದ್ ಅಬ್ದುಲ್ ಮುಸ್ಲಿಯಾರ್, ರಫೀಕ್ ಹುದವಿ ಕೋಲಾರ್, ಅನ್ವರ್ ಅಸ್ಗರಿ ಚಿತ್ರದುರ್ಗ, ಕೆ.ಎಂ. ಅಬೂಬಕ್ಕರ್ ಸಿದ್ದೀಕ್, ಡಾ.ಫಾಝಿಲ್ ರಝ್ವಿ ಕಾವಳಕಟ್ಟೆ ಮತ್ತಿತರರಿದ್ದರು. ಉಜಿರೆ ತಂಙಳ್ ಸಯ್ಯದ್ ಇಸ್ಮಾಯಿಲ್ ದುಆ ಮಾಡಿದರು. ಉಲಮಾ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಉಸ್ಮಾನುಲ್ ಫೈಝಿ ತೋಡಾರ್ ಸ್ವಾಗತಿಸಿದರು. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಾಸ್ತಾವಿಕ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧ
ಪ್ರತಿಭಟನಾ ಸಮಾವೇಶಕ್ಕಾಗಿ ದ.ಕ. ಮಾತ್ರವಲ್ಲದೆ ಚಿಕ್ಕಮಗಳೂರು, ಉಡುಪಿ ಮತ್ತಿತರ ಜಿಲ್ಲೆಗಳಿಂದ ಸಹಸ್ರಾರು ಜನರು ಸುಮಾರು 500ಕ್ಕೂ ಅಧಿಕ ಬಸ್ಸುಗಳಲ್ಲಿ ಬಂದಿದ್ದರು. ಪ್ರತಿಭಟನೆಗೆ ಆಗಮಿಸಿದ ಜನರ ವಾಹನಗಳು ಮತ್ತು ಇತರ ವಾಹನಗಳಿಂದಾಗಿ ಮಧ್ಯಾಹ್ನ 3 ಗಂಟೆಯ ವೇಳೆಗಾಗಲೇ ರಾ.ಹೆದ್ದಾರಿ 73ರ ಸಂಚಾರ ಹದಗೆಡಲು ಆರಂಭವಾಗಿತ್ತು. 2 ಕಿಮೀ ದೂರ ವಾಹನ ನಿಲ್ಲಿಸಿ ಪ್ರವಾಹೋಪಾದಿಯಲ್ಲಿ ಜನರು ಷಾ ಗಾರ್ಡನ್‌ನತ್ತ ತೆರಳುತ್ತಿದ್ದರು. 4 ಗಂಟೆ ವೇಳೆಗೆ ಹೆದ್ದಾರಿಯಲ್ಲಿ ಜನಸಾಗರವೇ ತುಂಬಿಕೊಂಡು ಸಂಪೂರ್ಣ ಸಂಚಾರ ಸ್ತಬ್ಧಗೊಂಡಿತ್ತು. ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಾತ್ರಿ 7.30ರವರೆಗೂ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬಿಗಿ ಪೊಲೀಸ್ ಸರ್ಪಗಾವಲು
ಪ್ರತಿಭಟನೆ ಹಿನ್ನೆಲೆಯಲ್ಲಿ 2 ಸಾವಿರಕ್ಕೂ ಅಧಿಕ ಪೊಲೀಸ್, ಅರೆಸೇನಾಪಡೆಯ ಸರ್ಪಗಾವಲು ಹಾಕಲಾಗಿತ್ತು. 20 ಕೆಎಸ್ಸಾರ್ಪಿ ತುಕಡಿ, 20 ಶಸ್ತ್ರಾಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ಪ್ರದೇಶದಲ್ಲೇ ಸಾವಿರಕ್ಕೂ ಅಧಿಕ ಪೊಲೀಸರಿದ್ದರು. ಪ್ರತಿಭಟನಾ ಸ್ಥಳ ಮಾತ್ರವಲ್ಲದೆ, ಆಸುಪಾಸಿನ ಆಯಕಟ್ಟಿನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಬೆಳಗ್ಗಿನಿಂದಲೇ ನಗರದ ಆಯಕಟ್ಟಿನ ಜಾಗಗಳಲ್ಲಿ ಚೆಕ್ ಪೋಸ್ಟ್ ಅಳವಡಿಸಿ ತಪಾಸಣೆ ಬಿಗಿಗೊಳಿಸಲಾಗಿತ್ತು. ಐವರು ಎಸ್ಪಿ, ಮತ್ತು ಅಡಿಶನಲ್ ಎಸ್ಪಿಗಳು, 20 ಡಿವೈಎಸ್ಪಿಗಳು, 230 ಇನ್‌ಸ್ಪೆಕ್ಟರ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು