ಸಾರಾಂಶ
ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಮತ್ತು ಮರಣ ಹೊಂದಿದವರಿಗೆ ಸೇವಾವಧಿಗೆ ಅನುಗುಣವಾಗಿ ಗರಿಷ್ಠ 5 ಲಕ್ಷ ರು. ವರೆಗೆ ಇಡುಗಂಟು ನೀಡುವ ಸೌಲಭ್ಯ ಜಾರಿಗೆ ಸರ್ಕಾರ ಮಾರ್ಗಸೂಚಿ ಸಹಿತ ಅಧಿಕೃತ ಆದೇಶ ಹೊರಡಿಸಿದೆ.
ಬೆಂಗಳೂರು : ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಮತ್ತು ಮರಣ ಹೊಂದಿದವರಿಗೆ ಸೇವಾವಧಿಗೆ ಅನುಗುಣವಾಗಿ ಗರಿಷ್ಠ 5 ಲಕ್ಷ ರು. ವರೆಗೆ ಇಡುಗಂಟು ನೀಡುವ ಸೌಲಭ್ಯ ಜಾರಿಗೆ ಸರ್ಕಾರ ಮಾರ್ಗಸೂಚಿ ಸಹಿತ ಅಧಿಕೃತ ಆದೇಶ ಹೊರಡಿಸಿದೆ.
ಇಡುಗಂಟು ಯೋಜನೆಯು ಪ್ರತಿ ವರ್ಷಕ್ಕೆ 50 ಸಾವಿರ ರು. ದರದಲ್ಲಿದ್ದು, ಅತಿಥಿ ಉಪನ್ಯಾಸಕರ ಸೇವೆಯ ವರ್ಷಗಳ ಸಂಖ್ಯೆಗೆ ಅನುಗುಣವಾಗಿ ಗರಿಷ್ಠ ಮೌಲ್ಯ 5 ಲಕ್ಷ ರು. ಆಗಿರುತ್ತದೆ. ಇದು 2024ರ ಜನವರಿ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಯೋಜನೆ ಜಾರಿಯಾದ 2024ಕ್ಕೆ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿದ್ದವರು, ಆದೇಶ ಜಾರಿಯಾದ ದಿನಾಂಕದಂದು ಅಥವಾ ನಂತರದಲ್ಲಿ 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ಅತಿಥಿ ಉಪನ್ಯಾಸಕಗಿಗೂ ಇದು ಅನ್ವಯಿಸುತ್ತದೆ. ಆದರೆ, 60 ವರ್ಷ ವಯೋಮಿತಿ ಪೂರೈಸಿದ ಅಥವಾ ಮರಣ ಹೊಂದಿದ ದಿನಾಂದಕದಿಂದ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ 1 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಬೇಕು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.
ಈ ಸೌಲಭ್ಯ ಕೋರಿ ಪ್ರಸ್ತಾವನೆ ಸಲ್ಲಿಸುವವರು ಅತಿಥಿ ಉಪನ್ಯಾಸಕರಾಗಿ ತಾವು ಕಾರ್ಯನಿರ್ವಹಿಸಿದ ಕಾಲೇಜಿನ ಪ್ರಾಂಶುಪಾಲರ ಮೂಲಕ ಕಾಲೇಜು ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಕಾಲೇಜಿನ ಪ್ರಾಂಶುಪಾಲರು ನೀಡಿದ ಸೇವಾ ಪ್ರಮಾಣ ಪತ್ರಗಳನ್ನು ಆಧಾರವಾಗಿ ಪರಿಗಣಿಸಲಾಗುವುದು. ಮರಣ ಹೊಂದಿರುವವರ ಇಡುಗಂಡನ್ನು ಅವರಿಂದ ನಾಮನಿರ್ದೇಶನಗೊಂಡಿರುವವರಿಗೆ ಅಥವಾ ಅವರ ಕುಟುಂಬದ ಅರ್ಹ ವಾರಸುದಾರರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.