ಸಾರಾಂಶ
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳಕ್ಕೆ ಬ್ರೇಕ್ ಹಾಕುವ ಸುಗ್ರೀವಾಜ್ಞೆಯ ಪ್ರಸ್ತಾವನೆಯು ಸೋಮವಾರ ರಾಜ್ಯಪಾಲರ ಕಚೇರಿಗೆ ತಲುಪಿದೆ.
ಬೆಂಗಳೂರು : ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳಕ್ಕೆ ಬ್ರೇಕ್ ಹಾಕುವ ಸುಗ್ರೀವಾಜ್ಞೆಯ ಪ್ರಸ್ತಾವನೆಯು ಸೋಮವಾರ ರಾಜ್ಯಪಾಲರ ಕಚೇರಿಗೆ ತಲುಪಿದೆ. ಅಂತಿಮ ಸುಗ್ರೀವಾಜ್ಞೆ ನಿರ್ಣಯದಲ್ಲಿ ಕಿರುಕುಳ ನೀಡುವವರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
ಫೆ.1 ರಂದು ಅಂತಿಮಗೊಳಿಸಿದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ -2025ರ 8ನೇ ಕರಡಿನಲ್ಲಿ ಕಿರುಕುಳ ನೀಡುವವರ ವಿರುದ್ಧ ಪೊಲೀಸರು ತಕ್ಷಣ ದೂರು ದಾಖಲಿಸಿಕೊಳ್ಳಬೇಕು. ಕಿರುಕುಳ ನೀಡಿರುವುದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರು.ವರೆಗೆ ಗರಿಷ್ಠ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು.
ಸೋಮವಾರ ರಾಜ್ಯಪಾಲರ ಕಚೇರಿಗೆ ಕಳುಹಿಸಿರುವ ಅಂತಿಮ ಸುಗ್ರೀವಾಜ್ಞೆ ಆದೇಶದಲ್ಲಿ ಗರಿಷ್ಠ ಶಿಕ್ಷೆ ಪ್ರಮಾಣವನ್ನು 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ತನ್ಮೂಲಕ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ರಾಜ್ಯಪಾಲರು ಸೋಮವಾರ ನಗರದಲ್ಲಿ ಉಪಸ್ಥಿತರಿರಲಿಲ್ಲ. ಮಂಗಳವಾರ ನಗರಕ್ಕೆ ವಾಪಸಾಗಲಿದ್ದು, ಬಹುತೇಕ ಮಂಗಳವಾರ ಅಥವಾ ಬುಧವಾರ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಬೀಳುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಪಾಲರು ಯಾವುದೇ ಸ್ಪಷ್ಟನೆ ಕೇಳದಿದ್ದರೆ ಶೀಘ್ರ ಸುಗ್ರೀವಾಜ್ಞೆ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ರಾಜ್ಯದಲ್ಲಿ ವ್ಯವಹಾರ ನಡೆಸುವ ಯಾವುದೇ ಫೈನಾನ್ಸ್ ಕಂಪೆನಿ ಕಡ್ಡಾಯವಾಗಿ ನೋಂದಣಿ ಪ್ರಾಧಿಕಾರದ ಬಳಿ ನೋಂದಣಿ ಮಾಡಿಸಿಕೊಂಡು ಪರವಾನಗಿ ಪಡೆದಿರಬೇಕು. ನಿಯಮ ಬಾಹಿರವಾಗಿ ನಡೆದುಕೊಂಡರೆ ಪರವಾನಗಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಬಹುದು. ಸಾಲಗಾರರ ದೂರು ಆಧರಿಸಿ ಅಥವಾ ಸ್ವಯಂಪ್ರೇರಿತವಾಗಿ ಮೈಕ್ರೋ ಫೈನಾನ್ಸ್ ಅಥವಾ ಸಂಸ್ಥೆಯ ನೋಂದಣಿ ರದ್ದು ಮಾಡಲು ಸಾಕಷ್ಟು ಕಾರಣಗಳು ಲಿಖಿತವಾಗಿ ಸಲ್ಲಿಕೆಯಾದಲ್ಲಿ ಸಂಸ್ಥೆಗೆ ನೋಟಿಸ್ ನೀಡಿ ಅವರ ಅಹವಾಲು ಆಲಿಸಿ ನೋಂದಣಿ ರದ್ದು ಮಾಡಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ಮೈಕ್ರೋ ಫೈನಾನ್ಸ್ ಸಂಸ್ಥೆಗೆ ರಾಜ್ಯದಲ್ಲಿನ ವಹಿವಾಟು ನಡೆಸಲು ಅವಕಾಶವೇ ನೀಡಬಾರದು ಎಂದಾದರೆ ಆರ್‌ಬಿಐಗೆ ಶಿಫಾರಸು ಮಾಡಲು ಸಹ ಅಧಿಕಾರ ನೀಡಲಾಗಿದೆ.
ನೋಂದಣಿಗೆ 30 ದಿನಗಳ ಗಡುವು:
ಸುಗ್ರೀವಾಜ್ಞೆ ಜಾರಿಗೊಂಡ 30 ದಿನದೊಳಗೆ ರಾಜ್ಯದಲ್ಲಿರುವ ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು ಆಯಾ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಆಗಬೇಕು. ಕಡ್ಡಾಯವಾಗಿ ಸ್ಥಳೀಯ ಕಚೇರಿ ಹೊಂದಬೇಕು. ಬಡ್ಡಿದರವನ್ನು ಫಲಕದಲ್ಲಿ ನಮೂದಿಸಬೇಕು. ಸಾಲಗಾರರಿಂದ ಯಾವುದೇ ಅಡಮಾನ ಇಟ್ಟುಕೊಳ್ಳುವಂತಿಲ್ಲ. ಹೆದರಿಸಿ, ಬೆದರಿಸಿ ಜಪ್ತಿ ಮಾಡುವಂತಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರಾಧಿಕಾರವಾಗಿ ಜಿಲ್ಲಾಧಿಕಾರಿಯವರನ್ನು ನೇಮಿಸಲಾಗುತ್ತದೆ. ಕಿರುಕುಳ ನೀಡಿದಾಗ ಪೊಲೀಸರು ದೂರು ಸ್ವೀಕರಿಸಬೇಕು. ಅಲ್ಲದೇ, ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿಗಳು ಸ್ವಯಂಪ್ರೇರಿತ ಕೇಸ್ ಕೂಡ ದಾಖಲಿಸಿಕೊಳ್ಳಬಹುದೆಂದು ಕರಡು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.
ಪ್ರಮುಖಾಂಶಗಳು
- ಸಾಲ ವಸೂಲಿಗಾಗಿ ಸಾಲಗಾರರಿಗೆ ಅವಮಾನ, ಹಿಂಸೆ, ಹಲ್ಲೆ, ಬಲವಂತವಾಗಿ ಆಸ್ತಿ, ದಾಖಲೆಗಳನ್ನು ಕಿತ್ತುಕೊಂಡರೆ ಶಿಕ್ಷೆ, ದಂಡಕ್ಕೆ ಅವಕಾಶ
- ದಬ್ಬಾಳಿಕೆ, ದೌರ್ಜನ್ಯ, ಗೂಂಡಾಗಳು, ಬಾಡಿಗೆ ವ್ಯಕ್ತಿಗಳ ಬಳಕೆ, ಮನೆಗೆ ಭೇಟಿ ನೀಡುವುದು, ದೈನಂದಿನ ಕೆಲಸಕ್ಕೆ ಕಿರುಕುಳ ನೀಡಿದ್ರೆ ಲೈಸನ್ಸ್ ರದ್ದು
- ನೋಂದಣಿ ಆಗದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿಗೆ ಯಾವುದೇ ರೀತಿಯಲ್ಲೂ ಸಾಲಗಾರರ ಮೇಲೆ ಒತ್ತಡ ಹಾಕುವಂತಿಲ್ಲ
- ಸಾಲಗಾರರು ಮತ್ತು ಸಾಲ ನೀಡಿದವರ ನಡುವಿನ ವ್ಯಾಜ್ಯಗಳನ್ನು ಪರಿಹರಿಸಲು ಓಂಬುಡ್ಸ್‌ಪರ್ಸನ್ ನೇಮಿಸಲು ಸರ್ಕಾರಕ್ಕೆ ಅವಕಾಶ
- ಮೈಕ್ರೋ ಫೈನಾನ್ಸ್ ಸ್ಥಳೀಯವಾಗಿ ಕಚೇರಿ ಹೊಂದಿರಬೇಕು. ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಸಹಿ ಮಾಡಿದ ರಸೀದಿ ನೀಡುವುದು ಕಡ್ಡಾಯ
- ಸಾಲ ಪಡೆದವರು ಬಡ್ಡಿ, ಕಂತು ಪಾವತಿ ಸೇರಿದಂತೆ ಇನ್ನಿತರ ಯಾವುದೇ ವಿವರಗಳನ್ನು ಕೇಳಿದಾಗ ಕಂಪನಿಗಳು ಒದಗಿಸುವುದು ಕಡ್ಡಾಯ
- ಜಿಲ್ಲಾಧಿಕಾರಿಗಳು ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲ್ವಿಚಾರಣೆ ಪ್ರಾಧಿಕಾರ ಆಗಿರ್ತಾರೆ. ಬೇರೆ ಅಧಿಕಾರಿಗಳನ್ನೂ ನೇಮಿಸಲು ಅವಕಾಶ
- ಸಕಾರಣಗಳಿದ್ದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಲೈಸನ್ಸ್ ರದ್ದುಗೊಳಿಸುವಂತೆ ಆರ್‌ಬಿಐಗೆ ಶಿಫಾರಸ್ಸು ಮಾಡಲು ಪ್ರಾಧಿಕಾರಕ್ಕೆ ಅವಕಾಶ
- ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ಕಚೇರಿ ಫಲಕದಲ್ಲಿ ಪ್ರದರ್ಶಿಸಬೇಕು. ಗ್ರಾಹಕರೊಂದಿಗೆ ಪತ್ರ, ಮೌಖಿಕವಾಗಿ ಕನ್ನಡದಲ್ಲಿ ವ್ಯವಹರಿಸಬೇಕು.
- ಲೈಸನ್ಸ್ ರಹಿತ ಸಂಸ್ಥೆಗಳು ಸಾಲ ವಸೂಲಿಗೆ ಕಿರುಕುಳ ನೀಡಿದ್ರೆ ಪರಿಹಾರ ಪಡೆಯಬಹುದು. ಸಾಲದಿಂದ ಸಂಪೂರ್ಣ ಬಿಡುಗಡೆಯನ್ನೂ ಕೋರಬಹುದು.
- ಪ್ರತಿ 3 ತಿಂಗಳಿಗೊಮ್ಮೆ ಸಾಲ ಪಡೆದವರು, ಸಾಲ ವಿತರಣೆ ಮೊತ್ತ ಮತ್ತು ಬಡ್ಡಿ ಕುರಿತ ವಿವರಗಳನ್ನು ಪ್ರಾಧಿಕಾರಕ್ಕೆ ಮೈಕ್ರೋ ಫೈನಾನ್ಸ್‌ಗಳು ಒದಗಿಸಬೇಕು
- ಈ ನಿಯಮವನ್ನು ಪಾಲಿಸದಿದ್ದರೆ ಸಂಸ್ಥೆಯವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ
- ಸಾಲ ವಿಚಾರದ ವ್ಯಾಜ್ಯಗಳು, ಮೇಲ್ಮನವಿಗಳು ಬಾಕಿ ಇದ್ದಲ್ಲಿ ಸಿವಿಲ್ ಕೋರ್ಟ್‌ಗಳು ಸಾಲಗಾರರಿಂದ ಬಡ್ಡಿ, ಸಾಲ ವಸೂಲಿ ಅರ್ಜಿಗಳನ್ನು ಪರಿಗಣಿಸಬಾರದು.
ಫೈನಾನ್ಸ್ ದೌರ್ಜನ್ಯಕ್ಕೆಮತ್ತೆ 4 ಜನ ಆತ್ಮಹತ್ಯೆ
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮತ್ತೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ, ಗೌರಿಬಿದನೂರು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
)
)
)
;Resize=(128,128))
;Resize=(128,128))
;Resize=(128,128))
;Resize=(128,128))