ಸಾರಾಂಶ
ರಾಜ್ಯದಲ್ಲಿ ಅಪಾರ ಪ್ರಮಾಣದ ರಾಗಿ ಬೆಳೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯನ್ನು ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಪಡೆದುಕೊಳ್ಳಲು ನಾಡಿನ ರೈತರಿಗೆ ಸಾಧ್ಯವಾಗುತ್ತಿಲ್ಲ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ರಾಜ್ಯದಲ್ಲಿ ಅಪಾರ ಪ್ರಮಾಣದ ರಾಗಿ ಬೆಳೆ ಹಾನಿಗೊಳಗಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ) ಯೋಜನೆಯನ್ನು ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಪಡೆದುಕೊಳ್ಳಲು ನಾಡಿನ ರೈತರಿಗೆ ಸಾಧ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರವು ಎಂಎಸ್‌ಪಿ ಅಡಿ 43 ಲಕ್ಷ ಟನ್ ರಾಗಿ ಖರೀದಿಸಲು ರಾಜ್ಯಕ್ಕೆ ಅವಕಾಶ ಕಲ್ಪಿಸಿದ್ದು, ಪ್ರತಿ ಕ್ವಿಂಟಲ್‌ಗೆ ₹4290 ದರ ನಿಗದಿ ಮಾಡಿದೆ. ಅದರಂತೆ ರಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿ ತಿಂಗಳುಗಳಾಗಿದ್ದರೂ 2,30,222 ರೈತರು 35,12,329 ಕ್ವಿಂಟಲ್(ಶೇ.79.58) ರಾಗಿ ಮಾರಾಟಕ್ಕೆ ಮಾತ್ರ ಹೆಸರು ನೋಂದಣಿ ಮಾಡಿಸಿದ್ದಾರೆ.
ಬಿತ್ತನೆ ಸಮಯದಲ್ಲಿ ಸರಿಯಾಗಿ ಮಳೆ ಬಾರದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬಿತ್ತನೆಯಾಗಲಿಲ್ಲ. ನಂತರ ಕಾಳು ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟು ರೈತರು ಸಂಕಷ್ಟ ಅನುಭವಿಸಬೇಕಾಯಿತು. ಇನ್ನೇನು ಪೈರು ಕೈಗೆ ಬಂತು ಎನ್ನುವಾಗ ಧಾರಾಕಾರ ಮಳೆ ಸುರಿದು ಒಂದಷ್ಟು ಫಸಲಿಗೆ ಹಾನಿ ಉಂಟಾಯಿತು. ಇದೆಲ್ಲದರ ಪರಿಣಾಮವಾಗಿ ಇಳುವರಿ ಕುಂಠಿತವಾಗಿ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಉತ್ಪಾದನೆ ಆಗಲಿಲ್ಲ.
20 ಕ್ವಿಂಟಲ್ ಮಿತಿ: ಹೆಕ್ಟೇರ್‌ಗೆ 10 ಕ್ವಿಂಟಲ್‌ನಂತೆ ರೈತರು ಗರಿಷ್ಠ 20 ಕ್ವಿಂಟಲ್ ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಬಹುದಾಗಿದ್ದು, ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿ ತಿಂಗಳಾಗಿದೆ. ಈಗಾಗಲೇ ಬಹುತೇಕ ರೈತರು ನೋಂದಣಿ ಮಾಡಿಸಿರುವುದರಿಂದ ಮುಂದಿನ ದಿನಗಳಲ್ಲಿ ನೋಂದಣಿ ಅಧಿಕವಾಗಿ ನಿರೀಕ್ಷಿತ ಗುರಿ ಮುಟ್ಟುವುದು ಸಾಧ್ಯವೇ ಇಲ್ಲ.
ಇಳುವರಿ ಕುಂಠಿತವಾಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಂಎಸ್‌ಪಿ ಅಡಿ ಮಾರಾಟ ಮಾಡಲು ಸಾಧ್ಯವಾಗಿಲ್ಲ, ಮತ್ತೊಂದೆಡೆ ಸಿರಿಧಾನ್ಯಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳ ವ್ಯಾಪಾರಿಗಳು ರಾಗಿಯನ್ನು ಉತ್ತಮ ಬೆಲೆಗೆ ಖರೀದಿಸುತ್ತಿರುವುದೂ ಹಿನ್ನಡೆ ಉಂಟಾಗಲು ಕಾರಣ.
ಪಿಡಿಎಸ್ ವಿತರಣೆಗೆ ಸಂಕಷ್ಟ?
ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಅಡಿ ರಾಗಿಯನ್ನೇ ಹಲವು ತಿಂಗಳು ವಿತರಿಸುತ್ತಾ ಬರುವುದು ಸಾಮಾನ್ಯವಾಗಿದ್ದು, ಈ ಬಾರಿ ಎಂಎಸ್‌ಪಿ ಅಡಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಖರೀದಿ ಆಗದಿದ್ದರೆ ಒಂದಷ್ಟು ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಮಸ್ಯೆಯಾಗುತ್ತೆ, ಇಂದೇ
ಸಭೆ ಕರೆಯುತ್ತೇನೆ: ಮುನಿಯಪ್ಪ
‘ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕಡಿಮೆ ಪ್ರಮಾಣದಲ್ಲಿ ರಾಗಿ ನೋಂದಣಿ ಪ್ರಕ್ರಿಯೆ ಆಗಿರುವುದು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ರಾಗಿ ವಿತರಿಸಲು ಸ್ವಲ್ಪ ಸಮಸ್ಯೆ ಉಂಟಾಗಲಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ರಾಗಿ ನೋಂದಣಿ ಪ್ರಕ್ರಿಯೆ, ಪಿಡಿಎಸ್ ಅಡಿ ರಾಗಿ ವಿತರಣೆಗೆ ಸಂಭಂಧಿಸಿ ಫೆ.6ರಂದೇ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ರಾಗಿಯ ಅಭಾವ ನಿವಾರಣೆಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.
ಫೆ.3 ರವರೆಗಿನ ಅಂಕಿ ಅಂಶ
ಜಿಲ್ಲೆ ರೈತರ ನೋಂದಣಿ ರಾಗಿ ಪ್ರಮಾಣ(ಕ್ವಿಂಟಲ್)
ಬೆಂಗಳೂರು ಗ್ರಾ. 24,299 3,45,076
ಬೆಂಗಳೂರು ನಗರ 3,072 43,589
ಚಿತ್ರದುರ್ಗ 9,317 1,48,576
ದಾವಣಗೆರೆ 2,653 46,205
ಕೋಲಾರ 5,980 90,533
ರಾಮನಗರ 16,804 2,56,365
ತುಮಕೂರು 50,617 7,49,973
ಮೈಸೂರು 31,792 4,77,298
ವಿಜಯನಗರ 6207 1,12,463
ಬಳ್ಳಾರಿ 25 455
ಕೊಡಗು 7 93
ಚಾಮರಾಜನಗರ 175 2,724
ಚಿಕ್ಕಬಳ್ಳಾಪುರ 6,990 1,04,825
ಚಿಕ್ಕಮಗಳೂರು 17,700 2,92,687
ಹಾಸನ 38,675 6,02,560
ಮಂಡ್ಯ 15,909 2,38,904
ಒಟ್ಟಾರೆ 2,30,222 35,12,329