ರೈಲುಗಳ ಡಿಕ್ಕಿ ತಪ್ಪಿಸಲು ರಾಜ್ಯದಲ್ಲೂ ‘ಕವಚ್‌’ - 1ನೇ ಹಂತದಲ್ಲಿ ನೈಋತ್ಯ ರೈಲ್ವೆಯ 1585 ಕಿ.ಮೀ. ವ್ಯಾಪ್ತೀಲಿ ಅಳವಡಿಕೆ

| N/A | Published : Feb 06 2025, 09:33 AM IST

Cancer Special Train
ರೈಲುಗಳ ಡಿಕ್ಕಿ ತಪ್ಪಿಸಲು ರಾಜ್ಯದಲ್ಲೂ ‘ಕವಚ್‌’ - 1ನೇ ಹಂತದಲ್ಲಿ ನೈಋತ್ಯ ರೈಲ್ವೆಯ 1585 ಕಿ.ಮೀ. ವ್ಯಾಪ್ತೀಲಿ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ರೈಲುಗಳ ಡಿಕ್ಕಿ ತಪ್ಪಿಸಲು ‘ಕಚವ’ ಸಿಸ್ಟಂ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ. ವಲಯದ ವ್ಯಾಪ್ತಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 3 ತಿಂಗಳಲ್ಲಿ ಕೆಲಸ ಶುರುವಾಗಲಿದೆ.

 ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ರೈಲುಗಳ ಡಿಕ್ಕಿ ತಪ್ಪಿಸಲು ‘ಕಚವ’ ಸಿಸ್ಟಂ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ. ವಲಯದ ವ್ಯಾಪ್ತಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇನ್ನು 3 ತಿಂಗಳಲ್ಲಿ ಕೆಲಸ ಶುರುವಾಗಲಿದೆ.

ಕೇಂದ್ರ ಸರ್ಕಾರ ಕಳೆದ ಏಳೆಂಟು ವರ್ಷದ ಹಿಂದೆಯೇ ಕವಚವನ್ನು ಪರಿಚಯಿಸಿತ್ತು. ಇದನ್ನು ಈಗಾಗಲೆ ಉತ್ತರದ ರಾಜ್ಯಗಳ ಕೆಲ ವಲಯಗಳಲ್ಲಿ ಅಳವಡಿಸಿದ್ದು ಆಗಿದೆ. ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಮಾತ್ರ ಇದನ್ನು ಪರಿಚಯಿಸಿರಲಿಲ್ಲ. 2023ರಲ್ಲಿ ಒಡಿಶಾದಲ್ಲಿ ರೈಲು ಅಪಘಾತವಾದ ಬಳಿಕ ಎಲ್ಲೆಡೆ ಅಳವಡಿಸಲು ನಿರ್ಧರಿಸಿತ್ತು. 2026ರೊಳಗೆ ದೇಶಾದ್ಯಂತ ಕವಚ ಅಳವಡಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಅದರ ಭಾಗವಾಗಿ ನೈಋತ್ಯ ವಲಯದ ವ್ಯಾಪ್ತಿಯಲ್ಲೂ ಇದೀಗ ಕೆಲಸ ಶುರುವಾಗಲಿದೆ.

ಎಷ್ಟೆಷ್ಟು ಯಾವಾಗ?:

ಹುಬ್ಬಳ್ಳಿ, ಬೆಂಗಳೂರು, ಮೈಸೂರು 3 ವಿಭಾಗಗಳಲ್ಲಿ ಒಟ್ಟು 3692 ಕಿ.ಮೀ ವ್ಯಾಪ್ತಿ ಹೊಂದಿರುವ ವಲಯದಲ್ಲಿ 2 ಹಂತಗಳಲ್ಲಿ ಕವಚ ಅಳವಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ₹600 ಕೋಟಿ ವೆಚ್ಚದಲ್ಲಿ 1585 ಕಿ.ಮೀ ಅಳವಡಿಸಲು ಇಲಾಖೆ ಯೋಚಿಸಿದೆ. ಹುಬ್ಬಳ್ಳಿ 564 ಕಿ.ಮೀ (ಸ್ಟೇಷನ್‌- 66), ಬೆಂಗಳೂರು 689 ಕಿ.ಮೀ (74 ಸ್ಟೇಷನ್‌), ಮೈಸೂರು- 332 ಕಿ.ಮೀ (36 ಸ್ಟೇಷನ್‌) ಸೇರಿ 1585 ಕಿ.ಮೀ (176 ಸ್ಟೇಷನ್) ಮಾರ್ಗದಲ್ಲಿ ಕವಚ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಇದೀಗ ಡಿಪಿಆರ್‌ ಸಿದ್ಧಪಡಿಸುವಿಕೆ ನಡೆಯುತ್ತಿದ್ದು, ಟೆಂಡರ್‌ ಹಂತಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ರೈಲು ಹಳಿಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕವಚ ತಂತ್ರಜ್ಞಾನ ಅಳವಡಿಕೆಯ ಜತೆಗೆ ಪ್ರತಿ ನಿಲ್ದಾಣದಲ್ಲಿ 40 ಮೀ. ಎತ್ತರದ ಟವರ್ ಅಳವಡಿಕೆಗೆ ಮೊದಲ ಹಂತದ ಟೆಂಡರ್ ಕರೆಯಲಾಗಿದೆ. ರೈಲುಗಳು ಡಿಕ್ಕಿ ಆಗುವುದನ್ನು ತಪ್ಪಿಸಲು ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಕವಚ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. 2026ರ ಒಳಗೆ ನೈಋತ್ಯ ರೈಲ್ವೆ ವಲಯದಲ್ಲಿ 2 ಹಂತಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾಗಲಿದೆ. ನಂತರ 2ನೇ ಹಂತದಲ್ಲಿ ಉಳಿದ 2112 ಕಿ.ಮೀ ಮಾರ್ಗಗಳಲ್ಲಿ ₹1144.65 ಕೋಟಿ ವೆಚ್ಚದಲ್ಲಿ ಅಳವಡಿಸಲಾಗುವುದು.

ಏನಿದು ತಂತ್ರಜ್ಞಾನ:

ರೈಲುಗಳು ಒಂದೇ ಮಾರ್ಗದಲ್ಲಿ ಮುಖಾಮುಖಿಯಾಗಿ ಅಥವಾ ಒಂದೇ ಹಳಿಯಲ್ಲಿ ನಿಂತಿದ್ದ ರೈಲಿಗೆ ಹಿಂದಿನಿಂದ ಬಂದ ಮತ್ತೊಂದು ರೈಲು ಡಿಕ್ಕಿ ಹೊಡೆಯುವುದನ್ನು ತಡೆಹಿಡಿಯಲಿದೆ. ಇದಕ್ಕಾಗಿ ರೈಲು‌‌ ನಿಲ್ದಾಣ, ಲೋಕೋಗಳಲ್ಲಿ ಆರ್​ಎಫ್​ಐಡಿ ಅಳವಡಿಸಲಾಗುತ್ತದೆ. ನಿಲ್ದಾಣ, ಟ್ರ್ಯಾಕ್, ಲೋಕೋದಲ್ಲಿ ಅಳವಡಿಕೆ ಮಾಡಲಾಗುತ್ತದೆ. ರೈಲು ಮಾರ್ಗದ ಪ್ರತಿ ಕಿ.ಮೀ.ನ ಆರಂಭದಲ್ಲಿ 2 ರೇಡಿಯೋ ಫ್ರೀಕ್ವೆನ್ಸಿ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಒಂದು ಆರ್‌ಎಫ್‌ಐಡಿ ವಿಫಲವಾದರೂ ಮತ್ತೊಂದು ಕೆಲಸ ಮಾಡುತ್ತದೆ. ಎರಡೂ ಆರ್‌ಎಫ್​ಐಡಿ ವಿಫಲವಾದರೆ ರೈಲು ಮುಂದೆ ಸಂಚರಿಸುವುದಿಲ್ಲ.

ಹಳಿಯಲ್ಲಿರುವ ಆರ್‌ಎಫ್‌ಐಡಿ ತರಂಗ ಆ ಮಾರ್ಗದಲ್ಲಿ ಸಂಚರಿಸುವ ರೈಲ್ವೆ ಎಂಜಿನ್ ಹಾಗೂ ಸಮೀಪದ ನಿಲ್ದಾಣಗಳಿಗೆ ಹೋಗುತ್ತಿರುತ್ತವೆ. ಅದೇ ಹಳಿಯಲ್ಲಿ ಮತ್ತೊಂದು ರೈಲು ಎದುರಿನಿಂದ ಬರುತ್ತಿದ್ದರೆ ಅಥವಾ ನಿಂತಿದ್ದರೆ ತರಂಗ ಆಧರಿಸಿ ಲೋಕೋಪೈಲಟ್ ರೈಲು ನಿಲುಗಡೆಗೊಳಿಸುತ್ತಾರೆ. ಲೋಕೋಪೈಲಟ್ ರೈಲು ನಿಲುಗಡೆಗೊಳಿಸದಿದ್ದರೂ ರೈಲು ತನ್ನಿಂದ ತಾನೇ ವೇಗ ಕಡಿಮೆ ಮಾಡಿಕೊಂಡು ನಿಲ್ಲುತ್ತದೆ.

ಒಂದು ವೇಳೆ ಮಾರ್ಗದಲ್ಲಿ ಇಬ್ಬನಿಯಿಂದ ದಾರಿ ಕಾಣದೇ ಇದ್ದರೂ ರೈಲು ಎಂಜಿನ್‌ನಲ್ಲಿ ಬರುವ ಆರ್‌ಎಫ್​ಐಡಿ ತರಂಗಗಳನ್ನು ಆಧರಿಸಿ ಲೋಕೋಪೈಲಟ್ ರೈಲು ಸಂಚಾರ ಮುಂದುವರಿಸುತ್ತಾನೆ. ರೈಲು ಹಳಿಗಳ ಪಕ್ಕದಲ್ಲಿ ಅಳವಡಿಸುವ ಕವಚ ತಂತ್ರಜ್ಞಾನದಿಂದ ರೈಲುಗಳ ಮಧ್ಯೆ ಸಂಭವಿಸುವ ಡಿಕ್ಕಿ ತಪ್ಪಲಿದೆ. ಇದರಿಂದ ಸಾಕಷ್ಟು ಜೀವಹಾನಿ ತಪ್ಪಲಿದೆ.

ರೈಲುಗಳ ನಡುವೆ ನಡೆಯುವ ಮುಖಾಮುಖಿ ಡಿಕ್ಕಿ ಹಾಗೂ ಹಿಂದಿನಿಂದ ಆಗುವ ಡಿಕ್ಕಿ ತಪ್ಪಿಸಲು ಕವಚ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ. ಭಾರತೀಯ ತಂತ್ರಜ್ಞಾನವುಳ್ಳ ಕವಚ -4.0 ಪರಿಚಯಿಸಲಾಗುತ್ತಿದೆ. 2026ರೊಳಗೆ ಎಲ್ಲೆಡೆ ಅಳವಡಿಸಲಾಗುತ್ತಿದೆ. ನೈಋತ್ಯ ವಲಯದ ವ್ಯಾಪ್ತಿಯಲ್ಲಿ ಮೊದಲ ಹಂತದ ಕೆಲಸಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಮಂಜುನಾಥ ಕನಮಡಿ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೆ ವಲಯ