ಸಾರಾಂಶ
ಮುಂಗಾರು ಮಳೆ ಪದಾರ್ಪಣೆಯಾಗಿ ಒಂದೇ ದಿನಕ್ಕೆ ಕರಾವಳಿ, ಮಲೆನಾಡು ಸೇರಿ ಒಳನಾಡಿನ ವಿವಿಧ ಜಿಲ್ಲೆಗಳನ್ನು ಪ್ರವೇಶಿಸಿದ್ದು, ಉತ್ತಮ ಮಳೆಯಾಗುತ್ತಿದೆ
ಬೆಂಗಳೂರು: ಮುಂಗಾರು ಮಳೆ ಪದಾರ್ಪಣೆಯಾಗಿ ಒಂದೇ ದಿನಕ್ಕೆ ಕರಾವಳಿ, ಮಲೆನಾಡು ಸೇರಿ ಒಳನಾಡಿನ ವಿವಿಧ ಜಿಲ್ಲೆಗಳನ್ನು ಪ್ರವೇಶಿಸಿದ್ದು, ಉತ್ತಮ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೇ 24ಕ್ಕೆ ಅಧಿಕೃತವಾಗಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದ್ದು, ಮೇ 25ರ ಭಾನುವಾರ ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಸೇರಿ ಮೊದಲಾದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ.
ಮುಂಗಾರು ಮಾರುತಗಳು ಪ್ರಬಲವಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್, ಮೈಸೂರು, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.
ಕೊಟ್ಟಿಗೆಹಾರದಲ್ಲಿ 21 ಸೆಂ.ಮೀ. ಮಳೆ:
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ಹವಾಮಾನ ಇಲಾಖೆ ವರದಿ ಪ್ರಕಾರ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಅತಿ ಹೆಚ್ಚು 21 ಸೆಂ.ಮೀ ಮಳೆಯಾಗಿದೆ. ಆಗುಂಬೆ 19, ಭಾಗಮಂಡಲ 17, ಉಡುಪಿ 14, ಪುತ್ತೂರು 13, ಸಿದ್ದಾಪುರ 11, ಬೆಳ್ತಂಗಡಿ, ಕುಂದಾಪುರ, ಶೃಂಗೇರಿಯಲ್ಲಿ ತಲಾ 10, ಪೊನ್ನಂಪೇಟೆ, ಧರ್ಮಸ್ಥಳ, ಕಾರ್ಕಳ, ಉಪ್ಪಿನಂಗಡಿಯಲ್ಲಿ ತಲಾ 9, ಗೇರುಸೊಪ್ಪ, ಕೋಟಾದಲ್ಲಿ ತಲಾ 8, ಮಾಣಿ, ಕೊಪ್ಪ, ಕಳಸ, ಹುಂಚದಕಟ್ಟೆಯಲ್ಲಿ ತಲಾ 7, ಯಲ್ಲಾಪುರ, ಜಯಪುರ ತಲಾ 6, ಕ್ಯಾಸಲ್ ರಾಕ್, ಮಂಗಳೂರು, ಕಾರವಾರ, ಕದ್ರಾದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.