ರಾಜ್ಯದಲ್ಲಿ ಮುಂಗಾರು ಆರ್ಭಟ : 6 ಜಿಲ್ಲೆಗಳಲ್ಲಿ ಭಾರಿ ಮಳೆ ರೆಡ್‌ ಅಲರ್ಟ್‌

| N/A | Published : May 26 2025, 12:19 AM IST / Updated: May 26 2025, 05:18 AM IST

ರಾಜ್ಯದಲ್ಲಿ ಮುಂಗಾರು ಆರ್ಭಟ : 6 ಜಿಲ್ಲೆಗಳಲ್ಲಿ ಭಾರಿ ಮಳೆ ರೆಡ್‌ ಅಲರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

15 ದಿನ ಮೊದಲೇ ರಾಜ್ಯ ಪ್ರವೇಶಿಸಿರುವ ಮುಂಗಾರು ಮಾರುತ ಮಲೆನಾಡು, ಕರಾವಳಿ ಭಾಗದಲ್ಲಿ ಭಾನುವಾರ ಆರ್ಭಟ ಆರಂಭಿಸಿದೆ. ಪರಿಣಾಮವಾಗಿ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

 ಬೆಂಗಳೂರು : 15 ದಿನ ಮೊದಲೇ ರಾಜ್ಯ ಪ್ರವೇಶಿಸಿರುವ ಮುಂಗಾರು ಮಾರುತ ಮಲೆನಾಡು, ಕರಾವಳಿ ಭಾಗದಲ್ಲಿ ಭಾನುವಾರ ಆರ್ಭಟ ಆರಂಭಿಸಿದೆ. ಪರಿಣಾಮವಾಗಿ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 300ಕ್ಕೂ ಅಧಿಕ ವಿದ್ಯುತ್‌ಗಂಬ ಧರೆಗುರುಳಿದ್ದು, ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ನೂರಾರು ಗ್ರಾಮಗಳು ವಿದ್ಯುತ್‌ ಸಂಪರ್ಕ ಕಳೆದುಕೊಂಡಿವೆ. ಮನೆಗಳು ಹಾನಿಗೆ ಒಳಗಾಗಿವೆ. ಕೆಲವೆಡೆ ಬಡಾವಣೆಗಳಿಗೆ ನೀರು ನುಗ್ಗಿದೆ.

ಮಳೆಗೆ ಚಿಕ್ಕಮಗಳೂರು ಹಾಗೂ ಮೈಸೂರಿನ ನಂಜನಗೂಡಿನಲ್ಲಿ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದು, ಮುಂಗಾರಿಗೆ ಸಂಭವಿಸಿದ 3ನೇ ಸಾವು ಇದಾಗಿದೆ. ಮಳೆಯಬ್ಬರದ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಎರಡು ದಿನ ಅಂಗನವಾಡಿ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಸಾಮಾನ್ಯವಾಗಿ ಜೂನ್‌ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಮೈದುಂಬುತ್ತಿದ್ದ ಕಾವೇರಿ, ಹೇಮಾವತಿ, ಶರಾವತಿ, ನೇತ್ರಾವತಿ ನದಿಗಳಲ್ಲಿ ಈಗಲೇ ಹಲವು ಅಡಿಗಳಷ್ಟು ನೀರು ಕಂಡುಬರುತ್ತಿದೆ. ಕೊಡಗಿನಲ್ಲಿ ಧಾರಾಕಾರ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಕಾವೇರಿ ನದಿಯ ನೀರಿನ ಮಟ್ಟ ಒಂದೇ ದಿನ 6 ಅಡಿ ಏರಿಕೆಯಾಗಿದೆ. ಶರಾವತಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಕಳೆಬಂದಿದೆ. ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, 4 ಗೇಟ್‌ಗಳ ಮೂಲಕ 2 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಭಾನುವಾರ ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಬೀದರ್, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ಗಾಳಿ ಸಮೇತ ವರ್ಷಧಾರೆಯಾಗಿದೆ.

ಇಬ್ಬರು ಸಾವು:

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಬಳಿಯ ಹೊಸ್ತೋತದಲ್ಲಿ ಗಾಳಿಯ ರಭಸಕ್ಕೆ ಮರವೊಂದು ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಪರಿಣಾಮ ಚಾಲಕ ಮೃತಪಟ್ಟಿದ್ದಾನೆ. ಶಿಡ್ಲೆಮನೆ ರತ್ನಾಕರ (28) ಮೃತ. ನಂಜನಗೂಡಿನ ಏಚಗಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಂತಿ ತುಳಿದು ಸಿದ್ದರಾಜು (55) ಹಾಗೂ ಎರಡು ಹಸುಗಳು ಸಾವಿಗೀಡಾಗಿವೆ.

ಕೊಡಗು ಜಿಲ್ಲೆ ತತ್ತರ:

ಕೊಡಗು ಜಿಲ್ಲಾದ್ಯಂತ ಭಾರಿ ಗಾಳಿ-ಮಳೆ ಆಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದ್ದು, ಸ್ನಾನಘಟ್ಟ ಮುಳುಗಡೆಯಾಗಿದೆ. ಕಾವೇರಿ ನದಿ ಹರಿಯುವಿಕೆಯಲ್ಲಿ ಒಂದೇ ದಿನ 6 ಅಡಿಯಷ್ಟು ನೀರು ಹೆಚ್ಚಳವಾಗಿದೆ. ನದಿ ಮೈದುಂಬಿ ಹರಿಯುತ್ತಿದ್ದು, ಮಡಿಕೇರಿ ತಾಲೂಕಿನ ಎಡಪಾಲ ಸೇತುವೆ ಮುಳುಗಡೆಯಾಗಿದೆ. ಮಡಿಕೇರಿ, ಕುಶಾಲನಗರ, ಭಾಗಮಮಂಡಲ, ಸೋಮವಾರಪೇಟೆ, ವಿರಾಜಪೇಟೆ ಭಾಗಗಳಲ್ಲಿ ಹಾನಿಯಾಗಿದೆ. ವಿರಾಜಪೇಟೆಯಲ್ಲಿ ಬಡಾವಣೆಗಳಿಗೆ ಚರಂಡಿ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಗಂಟೆಗೆ 45 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿದೆ.

ಮರ, ವಿದ್ಯುತ್ ಕಂಬಗಳು ಧರೆಗುರುಳಿದಿದ ಪರಿಣಾಮ ಸೋಮವಾರಪೇಟೆ-ಮಡಿಕೇರಿ ರಸ್ತೆ, ಗುಡ್ಡೆಹೊಸೂರು-ಸಿದ್ದಾಪುರ ರಸ್ತೆಗಳಲ್ಲಿ ಕೆಲಕಾಲ ರಸ್ತೆ ಬಂದ್ ಆಗಿತ್ತು. ಜಿಲ್ಲೆಯ ಹಲವೆಡೆ ವಾಹನ ಸವಾರರರು ಪರದಾಡುವಂತಾಯಿತು. ಸೆಸ್ಕ್ ಮಡಿಕೇರಿ ವಿಭಾಗ ವ್ಯಾಪ್ತಿಯಲ್ಲಿ ಗಾಳಿ-ಮಳೆಗೆ ಈವರೆಗೆ ಸುಮಾರು 197 ಕಂಬಗಳಿಗೆ ಹಾನಿಯಾಗಿದ್ದು, ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

ಕೊಡಗು ಅಂಗನವಾಡಿ, ಕಾಲೇಜುಗಳಿಗೆ ರಜೆ:

ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್‌ ಘೋಷಿಸಲಾಗಿದ್ದು, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮೇ 26 ರಿಂದ 27ರವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇನ್ನೂ ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಘಟಕ ಸರ್ಕಾರಿ ಹಾಗೂ ಸಂಯೋಜಿತ ಕಾಲೇಜ್‌ಗಳಿಗೂ ಮೇ 26 ರಿಂದ 27ರವರೆಗೆ 2 ದಿನ ರಜೆ ಘೋಷಿಸಲಾಗಿದೆ ಎಂದಿ ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ತಿಳಿಸಿದ್ದಾರೆ.

ಸಕಲೇಶಪುರದಲ್ಲೂ ಭಾರಿ ಮಳೆ:

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ವ್ಯಾಪಕ ಗಾಳಿ-ಮಳೆಗೆ ಥಂಡಿ ವಾತಾವರಣ ಹೆಚ್ಚಾಗಿದೆ. ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಅಪಾರ ಬೆಳೆ ನಷ್ಟವಾಗಿದೆ. 160ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಸುಮಾರು 90ಕ್ಕೂ ಅಧಿಕ ಗ್ರಾಮಗಳಲ್ಲಿ ಕಳೆದ 4 ದಿನದಿಂದ ವಿದ್ಯುತ್ ವ್ಯತ್ಯಯವಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಮೀನುಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಾಸನದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಲ್ಟಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ದ.ಕ. ಜಿಲ್ಲೆಯಲ್ಲೂ ಹಾನಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯ ಜೀವನದಿ ನೇತ್ರಾವತಿ ಬಹುತೇಕ ನದಿಗಳ ಹರಿವಿನ ಮಟ್ಟ ಏರಿಕೆಯಾಗಿದೆ. ಕಳೆದ 2 ದಿನದಲ್ಲಿ 7 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 237 ವಿದ್ಯುತ್‌ ಕಂಬಗಳು ಜಖಂಗೊಂಡು 2 ಟ್ರಾನ್ಸ್‌ಫಾರ್ಮರ್‌ಗಳಿಗೆ ಕೆಟ್ಟುನಿಂತಿವೆ. ಇನ್ನೂ 5 ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಬಂಟ್ವಾಳ ತಾಲೂಕಿನ ಮನೆಗಳಿಗೆ ನೀರು ನುಗ್ಗಿದ್ದು, ಕಡಬದ ನೂಜಿಬಾಳ್ತಿಲದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಉರುಳಿ ನಾಲ್ವರು ಗಾಯಗೊಂಡಿದ್ದಾರೆ. ಆಡುಮರೋಳಿ ಎಂಬಲ್ಲಿ ಮಾರಿಕಾಂಬಾ ದೇವಾಲಯ ಬಳಿ ಗುಡ್ಡ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ. ಉಡುಪಿ ಜಿಲ್ಲಾದ್ಯಂತ ಬಲವಾದ ಗಾಳಿಯೊಂದಿಗೆ ಧಾರಾಕಾರ ಮಳೆಯಾಗಿ ಮರಗಳು ಉರುಳಿ ಒಟ್ಟು 11ಕ್ಕೂ ಅಧಿಕ ಮಳೆಗಳು ಜಖಂ ಆಗಿದ್ದು, ₹7.35 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಜೋಗ ಜಲಪಾತಕ್ಕೆ ಕಳೆ: ಮಂಜಿನಾಟಕ್ಕೆ ಜನಬೇಸ್ತು!

ಶಿವಮೊಗ್ಗ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರಿನ ಮೊದಲ ದಿನವೇ ಶರಾವತಿ ನದಿ ತುಂಬಿ ಹರಿಯುತ್ತಿದ್ದು, ಜೋಗ ಜಲಪಾತ ಮೈದಳೆಯಲಾರಂಭಿಸಿದೆ. ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಸೀಳುಗಳಲ್ಲಿ ನೀರು ಧರೆಗಿಳಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯಲು ಆರಂಭಿಸಿದೆ. ಗಳಿಗೆಗೊಮ್ಮೆ ಸೌಂದರ್ಯವನ್ನು ಮುಚ್ಚಿ ಮತ್ತೆ ಬಿಚ್ಚಿಡುವ ಮಂಜಿನ ಆಟವೂ ಜಲಪಾತದ ಸೌಂದರ್ಯಕ್ಕೆ ಇನ್ನಷ್ಟು ಕಳೆ ತಂದಿದೆ. ಹೊಸನಗರ ತಾಲೂಕಿನ ಚಕ್ರಾನಗರದಲ್ಲಿ ಕಳೆದ 24 ಗಂಟೆಗಳಲ್ಲಿ 20 ಸೆಂ.ಮೀ. ಮಳೆ ದಾಖಲಾಗಿದ್ದು, ಚಕ್ರ, ಸಾವೆ ಹಕ್ಲು, ಶರಾವತಿ ಮೊದಲಾದ ನದಿಗಳು ಹರಿಯುತ್ತಿವೆ. 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1764 ಅಡಿ ತಲುಪಿದ್ದು, ಜಲಾಶಯಕ್ಕೆ 10,954 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಉತ್ತರ ಕನ್ನಡ ಜಿಲ್ಲೆಗೆ ನಾಳೆವರೆಗೂ ಅಲರ್ಟ್‌

ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲಿನ ತಾಲೂಕುಗಳಿಗಿಂತ ಕರಾವಳಿಯಲ್ಲಿ ಭಾನುವಾರ ಭಾರಿ ಮಳೆ ಬಿದ್ದಿದ್ದು, ಮೇ 27ರ ತನಕ ರೆಡ್ ಅಲರ್ಟ್‌ ಘೋಷಿಸಲಾಗಿದೆ. ಅಂಕೋಲಾದಲ್ಲಿ 4-5 ದಿನಗಳಿಂದ ಸುರಿದ ಮಳೆಯಿಂದ ಸಂಗ್ರಹವಾದ ನೀರನ್ನು ಕೋಡಿ ಕಡಿದು ಸಮುದ್ರಕ್ಕೆ ಬಿಡಲಾಯಿತು.

ಕೊಟ್ಟಿಗೆಹಾರದಲ್ಲಿ 21 ಸೆಂ.ಮೀ. ಮಳೆ

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ಹವಾಮಾನ ಇಲಾಖೆ ವರದಿ ಪ್ರಕಾರ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಅತಿ ಹೆಚ್ಚು 21 ಸೆಂ.ಮೀ ಮಳೆಯಾಗಿದೆ. ಆಗುಂಬೆ 19, ಭಾಗಮಂಡಲ 17, ಉಡುಪಿ 14, ಪುತ್ತೂರು 13, ಸಿದ್ದಾಪುರ 11, ಬೆಳ್ತಂಗಡಿ, ಕುಂದಾಪುರ, ಶೃಂಗೇರಿಯಲ್ಲಿ ತಲಾ 10, ಪೊನ್ನಂಪೇಟೆ, ಧರ್ಮಸ್ಥಳ, ಕಾರ್ಕಳ, ಉಪ್ಪಿನಂಗಡಿಯಲ್ಲಿ ತಲಾ 9, ಗೇರುಸೊಪ್ಪ, ಕೋಟಾದಲ್ಲಿ ತಲಾ 8, ಮಾಣಿ, ಕೊಪ್ಪ, ಕಳಸ, ಹುಂಚದಕಟ್ಟೆಯಲ್ಲಿ ತಲಾ 7, ಯಲ್ಲಾಪುರ, ಜಯಪುರ ತಲಾ 6, ಕ್ಯಾಸಲ್‌ ರಾಕ್‌, ಮಂಗಳೂರು, ಕಾರವಾರ, ಕದ್ರಾದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

6 ಜಿಲ್ಲೆಗಳಲ್ಲಿ ಭಾರಿ ಮಳೆ ರೆಡ್‌ ಅಲರ್ಟ್‌

ಮುಂದಿನ ಮೂರು ದಿನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಮೈಸೂರು, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

--ಅಂಗನವಾಡಿ, ಕಾಲೇಜಿಗೆಕೊಡಗಲ್ಲಿ 2 ದಿನ ರಜೆಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಅಂಗನವಾಡಿ ಹಾಗೂ ಕೊಡಗು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೆ ಸೋಮವಾರ, ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ.--ಜೋಗಕ್ಕೆ ಜೀವ ಕಳೆ:ಡ್ಯಾಂನಿಂದ ಭಾರಿ ನೀರುಶರಾವತಿ ನದಿಯಲ್ಲಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತ ಮೈದುಂಬಿಕೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯ ಭರ್ತಿಯಾಗಿದ್ದು, 2000 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗುತ್ತಿದೆ.

Read more Articles on