ಸಾರಾಂಶ
ರಾಜ್ಯದ ಮಾವು ಬೆಳೆಗಾರರಿಂದ ಬೆಂಬಲ ಬೆಲೆಯಡಿ ಮಾವು ಖರೀದಿಗೆ ಈ ಮೊದಲು ನಿಗದಿಪಡಿಸಿದ್ದ ಗರಿಷ್ಠ ಮಿತಿಯನ್ನು ದುಪ್ಪಟ್ಟು ಗೊಳಿಸಿ ಸರ್ಕಾರ ಆದೇಶಿಸಿದೆ.
ಬೆಂಗಳೂರು : ರಾಜ್ಯದ ಮಾವು ಬೆಳೆಗಾರರಿಂದ ಬೆಂಬಲ ಬೆಲೆಯಡಿ ಮಾವು ಖರೀದಿಗೆ ಈ ಮೊದಲು ನಿಗದಿಪಡಿಸಿದ್ದ ಗರಿಷ್ಠ ಮಿತಿಯನ್ನು ದುಪ್ಪಟ್ಟು ಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಮೊದಲು ಪ್ರತಿ ಮಾವು ಬೆಳೆಗಾರರಿಂದ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 5 ಎಕರೆಗೆ 100 ಕ್ವಿಂಟಲ್‌ವರೆಗೆ ಮಿತಿಗೊಳಿಸಲಾಗಿತ್ತು. ಇದೀಗ ಈ ಮಿತಿಯನ್ನು ಪ್ರತಿ ಎಕರೆಗೆ 40 ಕ್ವಿಂಟಲ್‌ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್‌ವರೆಗೆ ಖರೀದಿ ಪ್ರಮಾಣ ಹೆಚ್ಚಿಸಿ ಪರಿಷ್ಕೃತ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಮಾವು ಬೆಲೆ ತೀವ್ರ ನೆಲಕಚ್ಚಿದ್ದರಿಂದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಸಂವಹನ ನಡೆಸಿ ಬೆಂಬಲ ಬೆಲೆಯಡಿ ಮಾವು ಖರೀದಿಗೆ ಕ್ರಮ ವಹಿಸಿತ್ತು. ಪ್ರತಿ ಕೆ.ಜಿ ಮಾವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ 2 ರು. ನಂತೆ ಒಟ್ಟು 4 ರು. ಬೆಂಬಲ ಬೆಲೆಯೊಂದಿಗೆ ಮಾವು ಖರೀದಿಗೆ ಕಳೆದ ಜೂನ್ 25 ರಂದು ಆದೇಶ ಹೊರಡಿಸಲಾಗಿತ್ತು.
ಈ ವೇಳೆ ಪ್ರತಿ ರೈತನಿಂದ ಖರೀದಿಗೆ ನಿಗದಿಪಡಿಸಿದ್ದ ಗರಿಷ್ಠ ಮಿತಿಯನ್ನು ಈಗ ಪರಿಷ್ಕರಿಸಲಾಗಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿರವರು ಖರೀದಿ ಮಿತಿ ವಿಸ್ತರಣೆ ಕುರಿತಂತೆ ಪತ್ರ ಬರೆದು ಕೇಂದ್ರಕ್ಕೂ ಮನವಿ ಮಾಡಿದ್ದು, ಖರೀದಿ ಕೇಂದ್ರಗಳಲ್ಲಿ ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.