ಸಾರಾಂಶ
ರಾಜ್ಯ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ದರದಂತೆ ಪ್ರತಿ ಕ್ವಿಂಟಲ್ ಮಾವಿಗೆ 1,616 ರು. ನಿಗದಿ ಪಡಿಸಲಾಗಿದ್ದು, ಮುಂದಿನ ಒಂದು ತಿಂಗಳವರೆಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಜಾರಿಯಲ್ಲಿರಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಬೆಂಗಳೂರು : ಬೆಲೆ ಕುಸಿತದಿಂದ ಸಮಸ್ಯೆಗೆ ಸಿಲುಕಿರುವ ಮಾವು ಬೆಳೆಗಾರರಿಗೆ ನೆರವಾಗಲು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ದರದಂತೆ ಪ್ರತಿ ಕ್ವಿಂಟಲ್ ಮಾವಿಗೆ 1,616 ರು. ನಿಗದಿ ಪಡಿಸಲಾಗಿದ್ದು, ಮುಂದಿನ ಒಂದು ತಿಂಗಳವರೆಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಜಾರಿಯಲ್ಲಿರಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರಂತರ ಬೆಲೆ ಕುಸಿತದಿಂದಾಗಿ ಮಾವು ಬೆಳೆಗಾರರು ಕಂಗೆಟ್ಟಿದ್ದು, ಅವರ ನೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಜೂ.11 ಮತ್ತು 13ರಂದು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿ ಮಾವು ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜತೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರೊಂದಿಗೂ ವಿಡಿಯೋ ಸಂವಾದದ ಮೂಲಕ ಚರ್ಚಿಸಲಾಗಿತ್ತು. ಅದರಂತೆ ಇದೀಗ ಮಾರುಕಟ್ಟೆ ಮಧ್ಯಪ್ರವೇಶ ದರದಂತೆ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿದ್ದು, 2.5 ಲಕ್ಷ ಮೆಟ್ರಿಕ್ ಮಾವು ಖರೀದಿಸಲಿದೆ. ಅದರಂತೆ ಬೆಲೆ ವ್ಯತ್ಯಾಸ ಪಾವತಿ ವ್ಯವಸ್ಥೆಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಕೆಜಿ ಮಾವಿಗೆ ತಲಾ 2 ರು.ನಂತೆ ಒಟ್ಟು 4 ರು.ಗಳನ್ನು ನೀಡುವ ಮೂಲಕ ಮಾರುಕಟ್ಟೆ ಚೈತನ್ಯಕ್ಕೆ ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತದೆ. 2025-26ನೇ ಸಾಲಿನಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, 8ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ಅಲ್ಲದೆ, ಮೇ ತಿಂಗಳಿನಿಂದ ಜುಲೈವರೆಗೆ ಮಾವು ಕಟಾವು ಮಾಡಲಾಗುತ್ತದೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸ ಗಮನಿಸಿ ವ್ಯತ್ಯಾಸ ದರ ಪಾವತಿ ಮಾಡಲಾಗುತ್ತಿದೆ ಎಂದರು.
ಕೇಂದ್ರ ಮಾರ್ಗಸೂಚಿಯಂತೆ ಕ್ವಿಂಟಲ್ ಮಾವಿಗೆ ಗರಿಷ್ಠ 1,616 ರು. ನಿಗದಿ ಮಾಡಲಾಗಿದೆ. ಅದರ ಜತೆಗೆ 2.50 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮಾರುಕಟ್ಟೆ ಮಧ್ಯಪ್ರವೇಶ ದರದಡಿ ಖರೀದಿಸಲು ನಿರ್ಧರಿಸಲಾಗಿದೆ. ಅದಕ್ಕೆ 101 ಕೋಟಿ ರು. ವೆಚ್ಚವಾಗಲಿದ್ದು, ಅದರಲ್ಲಿ ಕೇಂದ್ರ ಸರ್ಕಾರ 50.50 ಕೋಟಿ ರು. ನೀಡಬೇಕಾಗುತ್ತದೆ ಎಂದು ಹೇಳಿದರು.
ಮಾವು ಬೆಳೆಗೆ ಮಾರುಕಟ್ಟೆ ಮಧ್ಯಪ್ರವೇಶ ದರ ನೀಡುವ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದ ಕುರಿತು ಪ್ರತಿಕ್ರಿಯಿಸಿ, ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಪತ್ರ ಬರೆದಿದ್ದರು. ಆದರೆ, ನಾವು ಅವರಿಗಿಂತ ಮುಂಚೆಯೇ ಕೇಂದ್ರ ಕೃಷಿ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ. ಮಾವು ಬೆಳೆಗಾರರ ಬಗ್ಗೆ ಕಾಳಜಿ ತೋರಿದ ಕುಮಾರಸ್ವಾಮಿ ಅವರಿಗೂ ಧನ್ಯವಾದ. ಇದೇ ರೀತಿ ರಾಜ್ಯದ ಎಲ್ಲ ಸಂಕಷ್ಟಗಳಿಗೂ ಅವರು ಸ್ಪಂದಿಸಲಿ ಎಂದು ಹೇಳಿದರು.
101 ಕೋಟಿ ರು. ಬಿಡುಗಡೆಗೆ ಆದೇಶ
ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ವ್ಯವಸ್ಥೆ ಅನ್ವಯ ಎಪಿಎಂಸಿಗಳಲ್ಲಿ ರೈತರಿಗೆ ವ್ಯತ್ಯಾಸದ ಮೊತ್ತ ಪಾವತಿಸಲು ತಗಲುವ ಒಟ್ಟಾರೆ ವೆಚ್ಚ 101 ಕೋಟಿ ರು.ಗಳನ್ನು ತೋಟಗಾರಿಕೆ ಇಲಾಖೆಯ ಮಾವು ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಲು ಸಹಕಾರ ಇಲಾಖೆ ಆದೇಶಿಸಿದೆ. ಅಲ್ಲದೆ, ಒಬ್ಬ ಮಾವು ಬೆಳೆಗಾರನಿಂದ ಗರಿಷ್ಠ 5 ಎಕರೆಗೆ 100 ಕ್ವಿಂಟಲ್‌ವರೆಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತ ನೀಡುವಂತೆಯೂ ಎಪಿಎಂಸಿಗಳಿಗೆ ಸೂಚಿಸಲಾಗಿದೆ.