ಮುಡಾ ಕೇಸ್ ಒಂದು ಸುಳ್ಳು ಸೃಷ್ಟಿ : ಬೈರತಿ ಸುರೇಶ್

| N/A | Published : Jul 24 2025, 11:19 AM IST

Byrathi Suresh

ಸಾರಾಂಶ

ಮುಡಾ. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಹುಟ್ಟು ಹಾಕಿದ್ದ ಪ್ರಕರಣ. ನಾಲ್ಕು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕಳಂಕ ತಗಲಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಭ್ರ ಬಿಳಿ ಪಂಚೆಗೆ ಕಪ್ಪು ಮೆತ್ತಿಕೊಳ್ಳುವ ಆತಂಕ ಹುಟ್ಟಿಸಿದ್ದ ಪ್ರಕರಣ.

ಬೈರತಿ ಸುರೇಶ್,

ನಗರಾಭಿವೃದ್ಧಿ ಸಚಿವರು

ಎಸ್. ಗಿರೀಶ್ ಬಾಬು/ಶ್ರೀಕಾಂತ ಎನ್. ಗೌಡಸಂದ್ರ

ಮುಡಾ. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಹುಟ್ಟು ಹಾಕಿದ್ದ ಪ್ರಕರಣ. ನಾಲ್ಕು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕಳಂಕ ತಗಲಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಭ್ರ ಬಿಳಿ ಪಂಚೆಗೆ ಕಪ್ಪು ಮೆತ್ತಿಕೊಳ್ಳುವ ಆತಂಕ ಹುಟ್ಟಿಸಿದ್ದ ಪ್ರಕರಣ. 

ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂಜರಿಯುವ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರನ್ನು ಎ-1 ಆರೋಪಿ ಮಾಡಿದ್ದ ಪ್ರಕರಣ. ನಿವೇಶನ ಹಂಚಿಕೆ ಸಮಯದಲ್ಲಿ ಸಚಿವರಲ್ಲದಿದ್ದರೂ ಬೈರತಿ ಸುರೇಶ್‌ ರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರತಿಪಕ್ಷಗಳ ಪ್ರಯತ್ನಕ್ಕೆ ಇಂಬು ನೀಡಿದ ಪ್ರಕರಣ. ಇಂಥ ಪ್ರಕರಣದಲ್ಲಿ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ(ಇ.ಡಿ.) ಪ್ರಯತ್ನಕ್ಕೆ ತಪರಾಕಿ ಹಾಕಿರುವ ಸುಪ್ರೀಂ ಕೋರ್ಟ್‌, ಪ್ರಕರಣವನ್ನೇ ರದ್ದುಪಡಿಸಿದೆ. ಈ ತೀರ್ಪು ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಬೈರತಿ ಸುರೇಶ್‌ ಮೇಲಿನ ಕಳಂಕವನ್ನು ಸಂಪೂರ್ಣವಾಗಿ ತೊಡೆದು ಹಾಕಿತೆ? ಪ್ರಕರಣದ ಮುಂದಿನ ಕಥೆಯೇನು? ಈ ಪ್ರಕರಣದ ಹೊರತಾಗಿ ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ದೇಸಾಯಿ ಸಮಿತಿ ವಿಚಾರಣೆ ಎಲ್ಲಿಗೆ ಬಂದಿದೆ? ಮುಂದೇನಾಗುತ್ತದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಕರಣದ ಉತ್ತುಂಗದ ಅವಧಿಯಲ್ಲಿ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ನೋವುಂಡ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇ.ಡಿ.ಗೆ ತಪರಾಕಿ ಬಾರಿಸಿದೆ. ಇದನ್ನು ನಿರೀಕ್ಷಿಸಿದ್ರಾ?

ಹೌದು, ಇಡೀ ಪ್ರಕರಣ ಒಂದು ಸುಳ್ಳು ಸೃಷ್ಟಿ. ಪಾರ್ವತಮ್ಮ ಅವರ ಜಾಗವನ್ನು ಮುಡಾದವರು ಅನಧಿಕೃತವಾಗಿ ಒತ್ತುವರಿ ಮಾಡಿದ್ದರು. ಅದಕ್ಕೆ ಬದಲಿಯಾಗಿ ಈ ಜಾಗ ನೀಡಿದ್ದರು. ಇದರಲ್ಲಿ ಹಣ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ಕಾಯಿದೆ ಬರುವುದಿಲ್ಲ. ಇದರಲ್ಲಿ ಯಾವುದೇ ಲೇವಾದೇವಿ ನಡೆದಿಲ್ಲ. ಇನ್ನು ನನ್ನ ಮೇಲೂ ಆರೋಪ ಮಾಡಿದ್ದರು. 2021ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಿವೇಶನ ನೀಡಿದ್ದರು. ಆಗ ನಾನು ಮಂತ್ರಿಯೂ ಆಗಿರಲಿಲ್ಲ. ಹೀಗಾಗಿ ನನ್ನನ್ನು ನಿರಪರಾಧಿ ಎಂದು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಸ್ಪಷ್ಟಪಡಿಸಿದೆ. ಅಲ್ಲದೆ, ಇ.ಡಿ. ಓವರ್‌ ಆ್ಯಕ್ಟಿಂಗ್‌ ಮಾಡುವುದು ಬೇಡ ಎಂದು ಸ್ಪಷ್ಟವಾಗಿ ಹೇಳಿದೆ. ಸರ್ಕಾರಿ ಸಂಸ್ಥೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ರಾಜಕೀಯವಾಗಿ ಅವರು ಚುನಾವಣೆಯಲ್ಲಿ ಹೋರಾಟ ಮಾಡಲಿ, ನೀವು ಅದಕ್ಕೆ ಬಳಕೆಯಾಗಬೇಡಿ ಎಂದು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ, ಮುಖ್ಯನ್ಯಾಯಮೂರ್ತಿ ಗವಾಯಿ ಅವರು ಸುರೇಶ್ ಅವರು ಆಗ ಸಚಿವರೇ ಆಗಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ನೀಡಿಯಾಗಿದೆ. ಈ ಪ್ರಕರಣದ ಮುಂದಿನ ಕಥೆಯೇನು?

ನೋಡಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆಯೂ ತಪ್ಪು ಮಾಹಿತಿ ಹಬ್ಬಿಸಲಾಗುತ್ತಿದೆ. ವಾಸ್ತವವಾಗಿ ಸುಪ್ರೀಂ ಕೋರ್ಟ್ ಇಡೀ ಪ್ರಕರಣವನ್ನೇ ರದ್ದುಪಡಿಸಿದೆ. ಅಂದರೆ, ಪೊಲೀಸ್‌ ಇಲಾಖೆಯಲ್ಲಿ ಎಫ್‌ಐಆರ್‌ ಹಾಕುವಂತೆ ಇ.ಡಿ. ಅವರು ಇಸಿಐಆರ್‌ ಹಾಕುತ್ತಾರೆ. ಸುಪ್ರೀಂ ಕೋರ್ಟ್ ಆ ಇಸಿಐಆರ್‌ ಅನ್ನೇ ರದ್ದುಪಡಿಸಿದೆ. ಹೀಗಾಗಿ ಇನ್ನು ಈ ಪ್ರಕರಣಕ್ಕೆ ಜೀವ ಇಲ್ಲ.

ಹಾಗಾದರೆ, ನೀವೀಗ ತುಸು ನಿರಾಳರಾದ್ರಾ?

ಖಂಡಿತ. ನನ್ನ ಪುತ್ರನ ವಿವಾಹ ನಿಶ್ಚಿತಾರ್ಥ ಸಮಯದಲ್ಲಿ ಪ್ರಕರಣದ ವಿವಾದ ಶುರುವಾಗಿತ್ತು. ಪುತ್ರನ ವಿವಾಹದ ಸಂದರ್ಭದಲ್ಲೇ ನೋಟಿಸ್‌ ನೀಡಿದ್ದರು. ಅದೃಷ್ಟವಶಾತ್ ಹೈಕೋರ್ಟ್‌ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದರಿಂದ ವಿವಾಹದಲ್ಲಿ ಓಡಾಡುವಂತಾಯಿತು. ನನ್ನಂತೆಯೇ ಮುಖ್ಯಮಂತ್ರಿಗಳೂ ಬಹಳಷ್ಟು ಕಾಟ ಅನುಭವಿಸಿರುವುದಾಗಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್‌ನವರು ಕಾಲ್ನಡಿಗೆ ಜಾಥಾ ನಾಟಕ ಮಾಡಿ ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್‌ ಆದೇಶದಿಂದ ನನಗೆ ರಿಲೀಫ್‌ ಸಿಕ್ಕದಂತಾಗಿದೆ. ನನಗೆ ಆಗಿರುವ ನೋವುಗಳನ್ನು ಶೇ.50 ರಷ್ಟು ಅಳಸಿ ಹಾಕಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ದೇವರೇ ನೋಡಿಕೊಳ್ಳುತ್ತಾರೆ.

ಷಡ್ಯಂತ್ರ ಅಂದ್ರಿ, ಯಾರು ಮಾಡಿದ್ದು?

ಅದು ಓಪನ್‌ ಸೀಕ್ರೇಟ್‌. ರಾಜ್ಯದಿಂದ ಹೋಗಿ ಕೇಂದ್ರ ಸಚಿವರಾಗಿರುವವರೇ ಬಹಿರಂಗವಾಗಿ ಹೇಳಿಕೆ ನೀಡಿದರಲ್ಲವೇ? ಇಲ್ಲ ಸಲ್ಲದ ಆರೋಪಗಳನ್ನು ಮಾಡಲಿಲ್ಲವೇ? ಆ ದುಷ್ಟ ಶಕ್ತಿಗಳಿಗೆ ದೇವರು ಸದ್ಬುದ್ಧಿ ನೀಡಲಿ. ರಾಜಕಾರಣವನ್ನು ರಾಜಕಾರಣವನ್ನಾಗಿಯೇ ನೋಡಬೇಕು. ನನಗೆ ಆದಂತಹ ನೋವು, ಮಾನಸಿಕ ಹಿಂಸೆ ಬೇರೆ ಯಾರಿಗೂ ಆಗಬಾರದು. ನನ್ನ ವಿರೋಧಿಸಿದವರಿಗೂ ಆಗಬಾರದು.

ಹೆಲಿಕಾಪ್ಟರ್‌ನಲ್ಲಿ ಹೋಗಿ ದಾಖಲೆ ತಂದ್ರಿ ಅಂತ ನಿಮ್ಮ ಮೇಲೆ ಆರೋಪವೂ ಇತ್ತು?

ಹೌದು, ಸಣ್ಣ ಮಕ್ಕಳ ಆಟದ ರೀತಿ ನನ್ನ ಮೇಲೆ ಆರೋಪ ಮಾಡಿದರು. ನಾನು ಆಗ ಸಚಿವನಾಗಿಯೇ ಇರಲಿಲ್ಲ. ಹೀಗಿದ್ದರೂ ನನ್ನ ಮೇಲೆ ಆರೋಪ ಮಾಡಿದರು. ಅವರಿಗೆ ದಾಖಲೆ ಕದ್ದು ಅಭ್ಯಾಸ ಇರಬಹುದು. ನನ್ನ ರಾಜಕೀಯ ಜೀವನದಲ್ಲಿ ನಾನು ಒಂದು ಪೇಪರ್‌ ಸಹ ಅನಧಿಕೃತವಾಗಿ ಮುಟ್ಟಿದವನಲ್ಲ. ನಾನು ಈಗ ಮುಖ್ಯಮಂತ್ರಿಗಳ ಜತೆ ಆಪ್ತನಾಗಿರುವುದಕ್ಕೆ ಹೊಟ್ಟೆಯುರಿಯಿಂದ ಷಡ್ಯಂತ್ರ ಮಾಡಿರಬಹುದು. ಹಿಂದುಳಿದ ವರ್ಗದ ಹುಡುಗ ಬೆಳೆಯುತ್ತಿದ್ದಾನೆ. ಅವನನ್ನು ಮಟ್ಟ ಹಾಕಬೇಕು ಎಂದು ಮಾಡಿರಬಹುದು. ಆದರೆ, ಸುಪ್ರೀಂ ಕೋರ್ಟ್‌ ಆದೇಶದಿಂದ ನನ್ನ ಶಕ್ತಿ ಹೆಚ್ಚಾಗಿದೆ.

ಒಂದು ವರ್ಷದ ನಡೆದ ಸುದೀರ್ಘ ಪ್ರಕರಣ ಇದು. ಆರೋಪ ಬಂದಾಗ ಪಕ್ಷದ ಬೆಂಬಲ ಹೇಗಿತ್ತು?

ಇದರಲ್ಲಿ ನನ್ನದಾಗಲಿ, ಮುಖ್ಯಮಂತ್ರಿಗಳದ್ದಾಗಲಿ ಯಾವುದೇ ತಪ್ಪಿಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಹೀಗಾಗಿ ರಾಜ್ಯ ಕಾಂಗ್ರೆಸ್‌ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ ಸಿದ್ದರಾಮಯ್ಯ ಹಾಗೂ ನನ್ನ ಬೆನ್ನಿಗೆ ನಿಂತಿತ್ತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಸಚಿವ ಸಂಪುಟದ ಅಷ್ಟೂ ಮಂದಿ ಸದಸ್ಯರು ನಮಗೆ ಬೆಂಬಲ ನೀಡಿದರು. ಮಾನಸಿಕ ಸ್ಥೈರ್ಯ ತುಂಬಿದ್ದರು.

ಇನ್ನೂ ಹಲವು ಮಂದಿ ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಹೇಳಿದ್ರಿ. ಅವುಗಳ ಕತೆಯೇನು?

ಮುಡಾ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಹಲವರು ಸುಳ್ಳು ಹಾಗೂ ನಕಲಿ ದಾಖಲೆ ನೀಡಿ ನಿವೇಶನ ಪಡೆದಿದ್ದಾರೆ. ಅದರ ಬಗ್ಗೆ ನ್ಯಾ. ದೇಸಾಯಿ ಆಯೋಗ ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಿದೆ. 10,000 ಪುಟಗಳಷ್ಟು ಕಡತ ನೀಡಿದ್ದೇವೆ. ವರದಿಯಲ್ಲಿ ಯಾರದ್ದು ತಪ್ಪು ಎಂದು ಬರುತ್ತದೆಯೋ ಅವರ ನಿವೇಶನ ವಾಪಸು ಪಡೆದು ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ.

ಅವೆಲ್ಲಾ ಅಕ್ರಮ ಹೊರಬರಲು ಇನ್ನೂ ಎಷ್ಟು ಸಮಯ ಬೇಕಾಗಬಹುದು?

ನಾವು ಬಿಜೆಪಿಯವರ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ. ಕರಾರುವಾಕ್ಕಾಗಿ ಅವರು ವರದಿ ನೀಡಿದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಮೊದಲು ದೇಸಾಯಿ ಅವರ ವರದಿ ಬರಬೇಕು. ಅವರ ವರದಿ ಆಧಾರದ ಮೇಲೆ ಮುಂದಿನ ಕ್ರಮ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೂ ಬದಲಿ ಕೈಗಾರಿಕಾ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರಲ್ವಾ?

ಮುಡಾದಲ್ಲಿ ಯಾರೇ ನಿಯಮ ಬಾಹಿರವಾಗಿ ನಿವೇಶನ ತೆಗೆದುಕೊಂಡಿದ್ದರೆ ನ್ಯಾಯಮೂರ್ತಿ ದೇಸಾಯಿ ವರದಿ ಬಂದ ನಂತರ ತನಿಖೆ ನಡೆಸಿ ಅಕ್ರಮ ಸಾಬೀತಾದರೆ ನಿವೇಶನ ವಾಪಸು ಪಡೆಯುತ್ತೇವೆ. ಹಾಗಂತ ನಾವು ಬೇರೆಯವರಂತೆ ವೈಯಕ್ತಿಕ ದ್ವೇಷ ಸಾಧಿಸುವುದಿಲ್ಲ. ನ್ಯಾಯಯುತವಾಗಿ ನಿವೇಶನ ಪಡೆದಿದ್ದರೆ ನಾವು ಯಾವುದೇ ತೊಂದರೆ ನೀಡುವುದಿಲ್ಲ.

ಇ.ಡಿ. ತನಿಖೆ ಎದುರಿಸಿದ್ದರೆ ಪ್ರಾಮಾಣಿಕತೆ ಸಾಬೀತಾಗುತ್ತಿತ್ತು ಅಂತಾರೆ ಬಿಜೆಪಿಯವರು?

ಆಹಾ, ಅವರೇ ಪೊಲೀಸರು, ನ್ಯಾಯಮೂರ್ತಿಗಳು ಸಹ ಆಗಿಬಿಡಲಿ. ರಾಜಕಾರಣ, ಪೊಲೀಸ್‌, ನ್ಯಾಯಾಲಯದ ಕೆಲಸ ಎಲ್ಲವೂ ಬಿಜೆಪಿಯವರೇ ಮಾಡಿದರೆ ಸಂವಿಧಾನ ಯಾಕೆ ಬೇಕು? ಅಂಬೇಡ್ಕರ್‌ ಅವರ ಸಂವಿಧಾನಕ್ಕೆ ಬೆಲೆಯೇ ಇಲ್ಲವೇ? ನ್ಯಾಯಾಲಯದ ಕದ ತಟ್ಟುವುದು ಸಂವಿಧಾನ ನನಗೆ ನೀಡಿರುವ ಹಕ್ಕು, ಅದು ನನ್ನ ಸ್ವಾತಂತ್ರ್ಯ. ತನಿಖೆ ರದ್ದುಪಡಿಸುವುದು ಅಥವಾ ಬಿಡುವುದು ನ್ಯಾಯಾಲಯಕ್ಕೆ ಬಿಟ್ಟದ್ದು. ಇದೀಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳೇ ತನಿಖೆಗೆ ಅನುಮತಿ ನಿರಾಕರಿಸಿದ್ದಾರೆ. ಇವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳೇ ದೊಡ್ಡವರಾ?

ಮುಡಾ ಪ್ರಕರಣದ ಬೆನ್ನಲ್ಲೇ ಸಿಎಂ ಬದಲಾವಣೆ ಕೂಗು ಶುರುವಾಗಿತ್ತು? ಈಗ ಆ ಕೂಗು?

ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಅಧಿಕಾರ ಬದಲಾವಣೆ ಬಗ್ಗೆ ಕುರಿತು ಯಾವತ್ತೂ ಮಾತನಾಡಿಲ್ಲ. ಸಿಎಂ ಬದಲಾವಣೆ ಅಥವಾ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಎಂಬುದು ಕೇವಲ ಯಾರೋ ಕೆಲವರು ಗಾಳಿಯಲ್ಲಿ ಹೊಡೆಯುತ್ತಿರುವ ಗುಂಡು ಅಷ್ಟೇ. ನಮ್ಮ ಪಕ್ಷದಲ್ಲಿ ಹೈಕಮಾಂಡ್‌ ಏನೇ ತೀರ್ಮಾನ ಮಾಡಿದರೂ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಆಗಲಿ ನಾನು ಆಗಲಿ ಒಪ್ಪಬೇಕಾಗುತ್ತದೆ. ಪ್ರತಿಯೊಂದನ್ನೂ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ.

ಎರಡು ವರ್ಷಗಳಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವರಾಗಿ ಇಲಾಖಾ ಸಾಧನೆಗಳೇನು?

ಇಲಾಖೆಯಲ್ಲಿ ಸಾಕಷ್ಟು ಸಾಧನೆಗಳು ಆಗಿವೆ. 12 ಪಾಲಿಕೆಗಳಿಗೆ 2,400 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. 6,795 ಪೌರಕಾರ್ಮಿಕರನ್ನು ನನ್ನ ಅವಧಿಯಲ್ಲೇ ಕಾಯಂ ಮಾಡಿದ್ದೇವೆ. ರಾಯಚೂರು, ಹಾಸನ, ಬೀದರ್‌ ಎಂಬ ಮೂರು ಪಾಲಿಕೆ ಮಾಡಿದ್ದೇವೆ. 160 ನಗರಗಳಿಗೆ ಹೊಸದಾಗಿ ನೀರು ಕೊಡುವ ವ್ಯವಸ್ಥೆ, 70ಕ್ಕೂ ಹೆಚ್ಚು ಕಡೆ ಯುಜಿಡಿ ಕೆಲಸ ಶುರು ಮಾಡಿದ್ದೇವೆ. ನಾನು ಸಚಿವನಾದ ಮೇಲೆ ಬಂಗಾರಪೇಟೆ ಬಳಿ ಎರಗೋಳ್‌ ಜಲಾಶಯ ಮಾಡಿ ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದೇವೆ. 124 ಹೊಸ ಇಂದಿರಾ ಕ್ಯಾಂಟೀನ್‌, 34 ವಿದ್ಯುತ್‌ ಚಿತಾಗಾರ, ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುಗುಣವಾಗಿ ಆಹಾರದ ಮೆನು, ಎನ್‌ಜಿಟಿ ಅಡಿ 500ಕ್ಕೂ ಹೆಚ್ಚು ಕೋಟಿ ರು. ವೆಚ್ಚದಲ್ಲಿ ಉದ್ಯಾನ, ಕೆರೆ ಅಭಿವೃದ್ಧಿ ಮಾಡುತ್ತಿದ್ದೇವೆ. ಎಲ್ಲಾ ತಾಲೂಕುಗಳಲ್ಲೂ ಸುಸಜ್ಜಿತ ಬಸ್ಸು ನಿಲ್ದಾಣ, ಉತ್ತಮ ರಸ್ತೆ ಸೇರಿ ಸಾಲು-ಸಾಲು ಕಾಮಗಾರಿ ನಡೆಸುತ್ತಿದ್ದೇವೆ.

ಇ-ಖಾತಾ ಗೊಂದಲ ಬಗೆಹರಿದಿದೆಯೇ? ಈ ನಿಟ್ಟಿನಲ್ಲಿ ಆಗಿರುವ ಪ್ರಗತಿಯೇನು?

ಇ-ಖಾತಾ ವ್ಯವಸ್ಥೆ ಜಾರಿಗೆ ತಂದಿದ್ದೇ ಮೊದಲು ನಮ್ಮ ಇಲಾಖೆಯಲ್ಲಿ. ಈಗಾಗಲೇ 23 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡಿದ್ದೇವೆ. ಇ-ಖಾತಾ ಗೊಂದಲ ಬಗೆಹರಿಸಲು ಕೇವಲ ಸೇಲ್‌ ಡೀಡ್, ಇಸಿ, ಫೋಟೋ ಇದ್ದರೆ ಸಾಕು ಅದಕ್ಕೆ ಇ-ಖಾತಾ ನೀಡಲಾಗುತ್ತದೆ. ಇ-ಕಾನೂನು ಇಲಾಖೆ ಅಡಿ ನೀಡುತ್ತೇವೆ.

ನಗರಾಭಿವೃದ್ಧಿ ಇಲಾಖೆ ಪ್ರದೇಶಗಳಲ್ಲೂ ಬಿ-ಖಾತಾಗೆ ಎ-ಖಾತಾ ಮಾನ್ಯತೆ ಪ್ರಸ್ತಾವನೆ ಇದೆಯೇ?

ಹೌದು. ಬಿ ಖಾತಾ ಎ ಖಾತಾ ನೀಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಕಾನೂನು ಇಲಾಖೆ ಅಭಿಪ್ರಾಯ ಕೇಳಿದ್ದು, ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತೀರ್ಮಾನಿಸಿ ಜಾರಿಗೆ ಮಾಡುತ್ತೇವೆ. ಯಾವುದೇ ಆಸ್ತಿಯ ಅರ್ಹ ಮಾಲೀಕ ನೆಮ್ಮದಿಯಿಂದ ನಿದ್ದೆ ಮಾಡಬೇಕೆಂಬುದು ನಮ್ಮ ಉದ್ದೇಶ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅಕ್ರಮಗಳಾಗಿವೆ ಎಂದು ತನಿಖೆಗೆ ನೀಡಿದ್ದೀರಿ. ಆ ತನಿಖೆ ಎಲ್ಲಿಗೆ ಬಂತು?

ಸ್ಮಾರ್ಟ್‌ ಸಿಟಿ ತನಿಖೆ ಬಗ್ಗೆ ನೇಮಿಸಿದ್ದ ತನಿಖಾ ತಂಡ ಅವಧಿ ವಿಸ್ತರಣೆಗೆ ಕೇಳಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ.

ಇಷ್ಟೆಲ್ಲಾ ಆದರೂ ಕೆಲ ಶಾಸಕರ ಅಸಮಾಧಾನ ಕಡಿಮೆಯಾಗಿಲ್ಲ. ಸುರ್ಜೇವಾಲಾ ಅವರ ಬಳಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆಯಲ್ಲ?

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಹೊರತುಪಡಿಸಿ 222 ಜನ ಶಾಸಕರಲ್ಲಿ ಒಬ್ಬರೂ ನನ್ನ ಬಗ್ಗೆ ದೂರು ನೀಡಿಲ್ಲ. ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಕೈಗೆ ಹಾಗೂ ಫೋನಿಗೆ ಸಿಗುತ್ತಾರೆ ಎಂದು ಶ್ಲಾಘಿಸಿದ್ದಾರೆ. ಸುರ್ಜೇವಾಲ ಅವರು ಸಹ 2ನೇ ಹಂತದ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಲಹೆಯಷ್ಟೇ ನೀಡಿದ್ದಾರೆ.

Read more Articles on