ಸಾರಾಂಶ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಶನಿವಾರವೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಶನಿವಾರವೇ (ಜ.25 ರಂದು) ನ್ಯಾಯಾಲಯಕ್ಕೆ ವರದಿ ಸಲ್ಲಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಇದು ಅಂತಿಮ ವರದಿಯಲ್ಲ, ಈವರೆಗಿನ ತನಿಖಾ ಪ್ರಗತಿ ವರದಿಯಷ್ಟೇ ಸಲ್ಲಿಕೆ ಆಗುತ್ತಿದೆ. ಇನ್ನೂ ಸಂಪೂರ್ಣವಾಗಿ ತನಿಖೆ ಮುಗಿಯದ ಕಾರಣ ಅಂತಿಮ ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೋರಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ.
ಮುಡಾ ಹಗರಣ ಸಂಬಂಧ ವರದಿ ಸಲ್ಲಿಸಲು ನ್ಯಾಯಾಲಯ ಜ.27ರ ಗಡುವು ನೀಡಿದೆ. ಜ.27ಕ್ಕೆ ಒಂದು ದಿನ ಮುಂಚಿತವಾಗಿ ವರದಿ ಸಲ್ಲಿಸಲು ಸೂಚಿಸಿದೆ. ಆದರೆ, ಜ.26 ಭಾನುವಾರ ಆಗಿರುವುದರಿಂದ, ಲೋಕಾಯುಕ್ತ ಅಧಿಕಾರಿಗಳು ಜ.25 ರಂದೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದು, ಜ.27ರಂದು ವಿಚಾರಣೆ ನಡೆಯಲಿದೆ.
ಸಾವಿರಕ್ಕೂ ಹೆಚ್ಚಿನ ಪುಟಗಳ ವರದಿ:
ಈವರೆಗಿನ ತನಿಖಾ ಪ್ರಗತಿಯ 1 ಸಾವಿರಕ್ಕೂ ಹೆಚ್ಚು ಪುಟಗಳ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಇದರಲ್ಲಿ ಮಹತ್ವದ ದಾಖಲೆಗಳು ಅಡಗಿವೆ. ಈ ವರದಿಯಲ್ಲಿ 25ಕ್ಕೂ ಹೆಚ್ಚು ಮಂದಿಯ ಹೇಳಿಕೆಗಳು, 17ಎ ಅಡಿಯಲ್ಲಿ ಸಂಗ್ರಹಿಸಿರುವ ವರದಿ, ಆಡಿಯೋ, ವಿಡಿಯೋ, ಎಫ್‌ಎಸ್ಎಲ್ ವರದಿಗಳು, ದಾಖಲೆಗಳ ಸಂಗ್ರಹದ ಹಾರ್ಡ್ ಡಿಸ್ಕ್, ಸಿಡಿ, ಪೆನ್ ಡ್ರೈವ್ ಗಳು, ವಿಜಯನಗರದ 14 ಸೈಟ್ ಗಳು, ಕೆಸರೆಯ ಸರ್ವೇ ನಂ.464ರ 3.16 ಎಕರೆ ಭೂಮಿಯ ಮಾಹಿತಿ, ಆರ್ ಟಿಸಿ, ಭೂ ಪರಿವರ್ತನೆ, ಮೂಲ ಮಾಲೀಕರ ಬಳಿಯ ದಾಖಲೆಗಳು, ಕೈ ಬದಲಾವಣೆಯಾದ ದಾಖಲೆಗಳ ಸಂಗ್ರಹಗಳು ಇವೆ.
ಅಲ್ಲದೆ, ಮುಡಾದಲ್ಲಿ ಯಾವ, ಯಾವ ಹಂತದಲ್ಲಿ ಪತ್ರ ವ್ಯವಹಾರ ನಡೆದಿದೆ, ಯಾವ, ಯಾವ ಅಧಿಕಾರಿಗಳು ಸೈಟ್ ಹಂಚಿಕೆಗೆ ಸಹಿ ಹಾಕಿದ್ದರು, 1994ರಿಂದ 2024ರವರೆಗಿನ ಎಲ್ಲಾ ಮಾಹಿತಿಗಳ ಸಂಗ್ರಹ, ಹಿಂದಿನ ಆಯುಕ್ತರುಗಳು, ಅಧ್ಯಕ್ಷರು, ಎಂಜಿನಿಯರ್ ಗಳು, ನಗರ ಯೋಜನಾ ಅಧಿಕಾರಿಗಳು, ಸರ್ವೇ ಅಧಿಕಾರಿಗಳು, ತಹಸೀಲ್ದಾರ್ ಗಳು, ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು, ಅಂದಿನ ಎಡಿಸಿ ಅವರ ಹೇಳಿಕೆಗಳು, ದೂರುದಾರ ಸ್ನೇಹಮಯಿ ಕೃಷ್ಣ ಅವರಿಂದ ಸಂಗ್ರಹಿಸಲಾದ ದಾಖಲೆಗಳು, ಆರೋಪಿತರಾದ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ಹೇಳಿಕೆಗಳನ್ನು ಆಧರಿಸಿ ಸಿದ್ಧಗೊಂಡಿರುವ ತನಿಖಾ ಪ್ರಗತಿ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಆಡಿಯೋ ಪರಿಶೀಲನೆ ಬಾಕಿ:
ಇನ್ನು ಮುಡಾ ಕಚೇರಿಯಲ್ಲಿ ಬುಧವಾರ ಮತ್ತು ಗುರುವಾರ, ಎರಡು ದಿನ ತಪಾಸಣೆ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, 6-11-2020ರ ಮುಡಾ ಸಭೆಯ ಆಡಿಯೋ ಮತ್ತು 20-11-2020ರ ಸಭೆಯ ಆಡಿಯೋವನ್ನು ವಶಪಡಿಸಿಕೊಂಡಿದ್ದು, 6-11-2020 ಸಭೆಯ ಆಡಿಯೋ ಮತ್ತು ದಾಖಲೆ ಪರಿಶೀಲಿಸಿದ್ದಾರೆ. ಸೋಮವಾರದ ನಂತರ 20-11-2020ರ ಸಭೆಯ ಆಡಿಯೋ ಮತ್ತು ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಹೀಗಾಗಿ, ಅಂತಿಮ ವರದಿಯನ್ನು ಸಲ್ಲಿಸುತ್ತಿಲ್ಲ, ತನಿಖಾ ಪ್ರಗತಿ ವರದಿಯಷ್ಟೇ ಸಲ್ಲಿಕೆ ಆಗುತ್ತಿದೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಎಸ್ಪಿ ಬೆಂಗಳೂರಿಗೆ:
ನ್ಯಾಯಾಲಯವು ನೀಡಿರುವ ಗಡುವಿನಂತೆ ವರದಿ ಸಲ್ಲಿಸಲು ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ಶುಕ್ರವಾರವೇ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಡಿಜಿ ಅವರನ್ನು ಭೇಟಿಯಾಗಿ ವರದಿ ನೀಡಿದ್ದು, ಶನಿವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಿದ್ಧತೆ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.
ಸಿಎಂ, ಪತ್ನಿಗೆ ಕ್ಲೀನ್ ಚಿಟ್ ವದಂತಿ
ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ವದಂತಿ ಸಹ ಹಬ್ಬಿದೆ.
ಆದರೆ, ಲೋಕಾಯುಕ್ತ ಪೊಲೀಸರು ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಲಿರುವ ವರದಿಯಲ್ಲಿ ತಮಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡುವ ಮೂಲಕ ಮುಡಾ ಹಗರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದು, ಈ ಬಗ್ಗೆ ಮತ್ತೆ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಆದರೆ, ಲೋಕಾಯುಕ್ತ ಮೂಲಗಳ ಪ್ರಕಾರ ಇನ್ನೂ ಅಂತಿಮ ವರದಿಯೇ ಸಿದ್ಧಗೊಂಡಿಲ್ಲ. ಈವರೆಗಿನ ತನಿಖೆಯ ಪ್ರಗತಿ ವರದಿಯನ್ನಷ್ಟೇ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ.
ಮುಡಾ: ಸಿಎಂ ಅರ್ಜಿ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಶನಿವಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಲಿದೆ.
ಮುಖ್ಯಮತ್ರಿಗಳ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಲಿದೆ. ಇದರ ಜೊತೆಗೆ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ವಿವಾದಿತ ಜಮೀನನ್ನು ಮುಖ್ಯಮಂತ್ರಿಯವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಮಾರಾಟ ಮಾಡಿದ್ದ ಮೂಲ ಭೂ ಮಾಲೀಕ ಜೆ. ದೇವರಾಜು ಸಲ್ಲಿಸಿರುವ ಎರಡು ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆಯೂ ನಡೆಯಲಿದೆ.
ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೊಲೀಸ್ ತನಿಖೆಗೆ ಅನುಮತಿ ನೀಡಿ 2024ರ ಸೆ.24ರಂದು ಹೈಕೋರ್ಟ್ ಏಕ ಸದಸ್ಯ ತೀರ್ಪು ನೀಡಿತ್ತು. ಆ ಆದೇಶ ರದ್ದುಪಡಿಸಲು ಕೋರಿ ಮುಖ್ಯಮಂತ್ರಿಗಳು ಮೇಲ್ಮನವಿ ಸಲ್ಲಿಸಿದ್ದಾರೆ. ಇದೇ ವೇಳೆ ತಮಗೆ ಯಾವುದೇ ಸಂಬಂಧವಿಲ್ಲದಿದ್ದರೂ ಪ್ರಕರಣದಲ್ಲಿ ತಮ್ಮನ್ನು ಎಳೆದು ತರಲಾಗಿದೆ. ಹಾಗಾಗಿ, ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸುವಂತೆ ಕೋರಿ ದೇವರಾಜು ಮೇಲ್ಮನವಿ ಸಲ್ಲಿಸಿದ್ದಾರೆ.