ನಮ್ಮ ಕ್ಲಿನಿಕ್‌ನಲ್ಲಿ ದಿನಕ್ಕೆ 100 ಮಂದಿಗೆ ಚಿಕಿತ್ಸೆಯ ಗುರಿ - ಆರೋಗ್ಯ ಸೇವೆಗಾಗಿ 222 ನಮ್ಮ ಕ್ಲಿನಿಕ್‌ ಕಾರ್ಯ ನಿರ್ವಹಣೆ

| Published : Jan 24 2025, 10:43 AM IST

Namma Clinic
ನಮ್ಮ ಕ್ಲಿನಿಕ್‌ನಲ್ಲಿ ದಿನಕ್ಕೆ 100 ಮಂದಿಗೆ ಚಿಕಿತ್ಸೆಯ ಗುರಿ - ಆರೋಗ್ಯ ಸೇವೆಗಾಗಿ 222 ನಮ್ಮ ಕ್ಲಿನಿಕ್‌ ಕಾರ್ಯ ನಿರ್ವಹಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿರುವ ನಮ್ಮ ಕ್ಲಿನಿಕ್‌ಗಳ ಸೇವೆಯನ್ನು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪಾಲಿಕೆ ಪ್ರತಿ ಕ್ಲಿನಿಕ್‌ನಲ್ಲಿ ದಿನಕ್ಕೆ ಕನಿಷ್ಠ 100 ರೋಗಿಗಳ ಚಿಕಿತ್ಸೆ ನೀಡುವ ಗುರಿ ಹಾಕಿಕೊಂಡಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿರುವ ನಮ್ಮ ಕ್ಲಿನಿಕ್‌ಗಳ ಸೇವೆಯನ್ನು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪಾಲಿಕೆ ಪ್ರತಿ ಕ್ಲಿನಿಕ್‌ನಲ್ಲಿ ದಿನಕ್ಕೆ ಕನಿಷ್ಠ 100 ರೋಗಿಗಳ ಚಿಕಿತ್ಸೆ ನೀಡುವ ಗುರಿ ಹಾಕಿಕೊಂಡಿದೆ.

ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಗೊಂಡ 222 ನಮ್ಮ ಕ್ಲಿನಿಕ್‌ಗಳ ಪೈಕಿ ಬಹುತೇಕ ಕಡೆ 10ರಿಂದ 29 ರಷ್ಟು ಮಾತ್ರ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಜನರು ಇವುಗಳ ಪ್ರಯೋಜನ ಪಡೆಯಲು ಹಲವು ಸುಧಾರಣಾ ಕ್ರಮ ಕೈಗೊಳ್ಳಲು ಮುಂದಾಗಿದೆ.

ಪ್ರಸ್ತುತ 10 ಕ್ಲಿನಿಕ್‌ಗಳಲ್ಲಿ ದಿನಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಎರಡಂಕಿ ತಲುಪುತ್ತಿಲ್ಲ. 63 ಕ್ಲಿನಿಕ್‌ನಲ್ಲಿ ಸರಾಸರಿ ದಿನಕ್ಕೆ 10-19 ಮಂದಿ, 106 ಕ್ಲಿನಿಕ್‌ನಲ್ಲಿ 20- 29 ಮಂದಿ, 29 ಕ್ಲಿನಿಕ್‌ನಲ್ಲಿ 30-39 ಮಂದಿ, 13 ಕ್ಲಿನಿಕ್‌ನಲ್ಲಿ 40-49 ಮಂದಿ ಹಾಗೂ ಒಂದೇ ಒಂದು ಕ್ಲಿನಿಕ್‌ನಲ್ಲಿ 50 ರಿಂದ 59 ಮಂದಿ ದಿನಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ನಮ್ಮ ಕ್ಲಿನಿಕ್‌ನಲ್ಲಿ ದಿನಕ್ಕೆ ಕನಿಷ್ಠ 100 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲು ಗುರಿ ಹಾಕಿಕೊಂಡಿದ್ದು, ನಮ್ಮ ಕ್ಲಿನಿಕ್‌ನ ಡಾಕ್ಟರ್‌ ಹಾಗೂ ಸಿಬ್ಬಂದಿ ತಮ್ಮದೇ ಆದ ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಕ್ರಿಯಾ ಯೋಜನೆಯಲ್ಲಿ ತಮ್ಮ ಕ್ಲಿನಿಕ್‌ ವ್ಯಾಪ್ತಿಯಲ್ಲಿ ಸರ್ವೇ ನಡೆಸಿಕೊಂಡು ಎಷ್ಟು ಹಿರಿಯ ನಾಗರಿಕರಿದ್ದಾರೆ, ಎಷ್ಟು ಮಂದಿ ಗರ್ಭಿಣಿಯರಿದ್ದಾರೆ, ಎಷ್ಟು ಮಕ್ಕಳು ಇದ್ದಾರೆ, ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರು ಎಷ್ಟು ಮಂದಿ ದೀರ್ಘಾವಧಿಯಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಅಂಕಿ ಅಂಶ ಸಂಗ್ರಹಿಸಬೇಕು. ಅವರಿಗೆ ನಮ್ಮ ಕ್ಲಿನಿಕ್‌ನ ಚಿಕಿತ್ಸೆ, ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ ಜಾಗೃತಿಗೊಳಿಸಬೇಕೆಂಬ ನಿರ್ದೇಶನ ನೀಡಲಾಗಿದೆ.

ಅಗತ್ಯ ಔಷಧಿ ಖರೀದಿಗೆ ಅವಕಾಶ:

ನಮ್ಮ ಕ್ಲಿನಿಕ್‌ನಲ್ಲಿ ಬಿಬಿಎಂಪಿ ಹಾಗೂ ಸರ್ಕಾರದಿಂದ ಔಷಧಿಗಳನ್ನು ಖರೀದಿ ಮಾಡಿ ಪೂರೈಕೆ ಮಾಡಲಾಗುತ್ತಿದೆ. ಅದನ್ನು ಹೊರತು ಪಡಿಸಿ ಅಗತ್ಯವಿರುವ ಔಷಧಿ, ಮಾತ್ರೆಗಳನ್ನು ಖರೀದಿ ಮಾಡಿ ರೋಗಿಗಳಿಗೆ ನೀಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ರೋಗಿಗಳು ಆಗಮಿಸಲಿದ್ದಾರೆ ಎಂಬ ಚಿಂತನೆಯನ್ನು ಬಿಬಿಎಂಪಿ ಅಧಿಕಾರಿಗಳು ಹೊಂದಿದ್ದಾರೆ.

ಇತರೆ ಸುಧಾರಣೆಗೂ ಕ್ರಮ:

ಕೆಲವು ಕಡೆ ವೈದ್ಯರ ಸಮಸ್ಯೆಯಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿಲ್ಲ. ಇದೀಗ ಆ ಕ್ಲಿನಿಕ್‌ಗಳಿಗೆ ಇದೀಗ ವೈದ್ಯರನ್ನು ನೇಮಕ ಮಾಡಲಾಗಿದೆ. ವೈದ್ಯರು ಇದ್ದರೂ ರೋಗಿ ಸಂಖ್ಯೆ ಕಡಿಮೆ ಇರುವ ಕಡೆ ವೈದ್ಯರ ಬದಲಾವಣೆ ಮಾಡಲಾಗಿದೆ. ನಮ್ಮ ಕ್ಲಿನಿಕ್‌ ವೈದ್ಯರ ವೇತನವನ್ನು 60 ಸಾವಿರ ರು.ಗೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ. ಸಿಬ್ಬಂದಿ ಸೇರಿದಂತೆ ಔಷಧಿ ಶೇಖರಣೆಗೆ ಫ್ರಿಡ್ಜ್‌, ಸಿಸಿಟಿವಿ ಕ್ಯಾಮರಾ, ಎಲ್‌ಇಡಿ ಟಿವಿ ಸೇರಿದಂತೆ ಮೊದಲಾದ ಅಗತ್ಯ ಮೂಲಸೌಕರ್ಯ ಒದಗಿಸುವುದಕ್ಕೆ ಕ್ರಮವಹಿಸಲಾಗುತ್ತಿದೆ.

ನಮ್ಮ ಕ್ಲಿನಿಕ್‌ ಬಗ್ಗೆ ಪ್ರಚಾರ

ನಗರದ ಹಲವರಿಗೆ ನಮ್ಮ ಕ್ಲಿನಿಕ್‌ ಬಗ್ಗೆ ಅರಿವಿಲ್ಲದೇ ಇರುವುದರಿಂದ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲ ನಮ್ಮ ಕ್ಲಿನಿಕ್‌ ಸುತ್ತಮುತ್ತಲಿನ 6 ರಸ್ತೆಗಳಲ್ಲಿ ಆಯಾ ನಮ್ಮ ಕ್ಲಿನಿಕ್ ವಿಳಾಸ, ಲೋಕೇಷನ್‌ ಕ್ಯೂಆರ್‌ ಕೋಡ್‌, ಡಾಕ್ಟರ್‌ ಹೆಸರು ಹಾಗೂ ಫೋಟೋ, ಮೊಬೈಲ್‌ ಸಂಖ್ಯೆ ಒಳಗೊಂಡ ಫಲಕ ಅಳವಡಿಕೆಗೆ ತೀರ್ಮಾನಿಸಲಾಗಿದೆ.

ನಮ್ಮ ಕ್ಲಿನಿಕ್‌ಗಳಲ್ಲಿ ಗುಣಮಟ್ಟ ಚಿಕಿತ್ಸೆ ನೀಡಬೇಕು ಹಾಗೂ ಹೆಚ್ಚಿನ ಜನರಿಗೆ ಇದರ ಉಪಯೋಗ ದೊರೆಯಬೇಕೆಂಬ ಉದ್ದೇಶದಿಂದ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ. ವಲಯವಾರು ಹಾಗೂ ವಿಧಾನಸಭಾ ಕ್ಷೇತ್ರವಾರು ನಮ್ಮ ಕ್ಲಿನಿಕ್‌ ಡಾಕ್ಟರ್‌ ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ.

- ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತರು, ಬಿಬಿಎಂಪಿ ಆರೋಗ್ಯ ವಿಭಾಗ