ಸಾರಾಂಶ
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗೆಲ್ಲಲು ಗ್ಯಾರಂಟಿ ಯೋಜನೆಗಳು ವಾಮಮಾರ್ಗವಾಗಿವೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು : ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗೆಲ್ಲಲು ಗ್ಯಾರಂಟಿ ಯೋಜನೆಗಳು ವಾಮಮಾರ್ಗವಾಗಿವೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸೋಮವಾರ ಫ್ರೀಡಂಪಾರ್ಕ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡದಿರುವ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಬರುವವರೆಗೆ ಗೃಹಲಕ್ಷ್ಮಿ ಹಣ ಹಾಕುವುದಿಲ್ಲ. ಜನರ ತೆರಿಗೆ ಹಣವನ್ನು ಗಾಂಧಿ ಕುಟುಂಬಕ್ಕೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡಿನ ಮಹಿಳೆಯರು ಹಣ ಯಾವಾಗ ಬರಲಿದೆ ಎಂದು ಕಾಯುತ್ತಿದ್ದಾರೆ. ಕೊಟ್ಟಿರುವ ಮಾತನ್ನ ಉಳಿಸಿಕೊಂಡು ಒಂದು ದಿನಾಂಕ ನಿಗದಿ ಮಾಡಬೇಕು. ಬಜೆಟ್‌ನಲ್ಲಿ ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಹಣ ಡಿಬಿಟಿ ಮಾಡುವ ದಿನ ಹೇಳಬೇಕು. ಗ್ಯಾರಂಟಿಗಳನ್ನು ರಾಜ್ಯದ ಜನತೆ ಕೇಳಿರಲಿಲ್ಲ. ಕರ್ನಾಟಕಕ್ಕೂ ಮೀರಿ ಹಿಮಾಚಲ ಪ್ರದೇಶ ದಿವಾಳಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಂದ ನಂತರ ₹40 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇಂತಹ ಪರಿಸ್ಥಿತಿ ಈ ಸರ್ಕಾರದಲ್ಲಿ ಬಂದರು ಆಶ್ಚರ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್‌ನ ಕೇಂದ್ರದ ವರಿಷ್ಠರು ಘಂಟಾಘೋಷವಾಗಿ ಹೇಳಿದ್ದರು. ಈಗ ಅವರು ಉತ್ತರ ನೀಡಬೇಕು. ಗುತ್ತಿಗೆದಾರರಿಗೆ ಹಣದ ನೀಡಿದ ಕಾರಣ ಬೀದಿಗೆ ಬಂದಿದ್ದಾರೆ. ಗುತ್ತಿಗೆದಾರರು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಲು ಮುಂದಾಗಿದ್ದಾರೆ. ಭೇಟಿಯಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.