ನಿಖಿಲ್‌ ನೇತೃತ್ವದಲ್ಲೇ ಪಕ್ಷ ಸಂಘಟನೆ - ಚನ್ನಪಟ್ಟಣದಲ್ಲಿ ಕೃತಜ್ಞತಾ ಸಮಾವೇಶ : ಕುಮಾರಸ್ವಾಮಿ ಮರಳಿ ಯತ್ನ

| Published : Dec 01 2024, 11:33 AM IST

HD Kumaraswamy
ನಿಖಿಲ್‌ ನೇತೃತ್ವದಲ್ಲೇ ಪಕ್ಷ ಸಂಘಟನೆ - ಚನ್ನಪಟ್ಟಣದಲ್ಲಿ ಕೃತಜ್ಞತಾ ಸಮಾವೇಶ : ಕುಮಾರಸ್ವಾಮಿ ಮರಳಿ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಸಂಕ್ರಾಂತಿಯಿಂದ ಪಕ್ಷ ಸಂಘಟನೆ ಆರಂಭಿಸಲಾಗುವುದು. ಜೆಡಿಎಸ್‌ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

   ಚನ್ನಪಟ್ಟಣ : ಮುಂದಿನ ಸಂಕ್ರಾಂತಿಯಿಂದ ಪಕ್ಷ ಸಂಘಟನೆ ಆರಂಭಿಸಲಾಗುವುದು. ಜೆಡಿಎಸ್‌ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಕೂಡ್ಲೂರು ಗ್ರಾಮದ ಖಾಸಗಿ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಿಖಿಲ್ ಅವರು ಚನ್ನಪಟ್ಟಣದಲ್ಲಿ ಇರಲಿ ಎಂಬುದು ಕಾರ್ಯಕರ್ತರ ಭಾವನೆ. ಆದರೆ, ನಿಖಿಲ್ ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ, ನನಗೆ ಆರೋಗ್ಯದ ಸಮಸ್ಯೆ ಇದೆ. ಮೂರನೇ ಬಾರಿ ಆಪರೇಷನ್ ಮಾಡಿಸಿಕೊಂಡಿದ್ದೇನೆ. ಈಗ ಪಕ್ಷದ ಸಂಘಟನೆಯ ಜವಾಬ್ದಾರಿ ನಿಖಿಲ್ ಮೇಲಿದೆ. ನಿಖಿಲ್ ಕುಮಾರಸ್ವಾಮಿ ಒಬ್ಬರೇ ಇವತ್ತು ಈ ಪಕ್ಷದ ಜೀವಾಳ ಎಂದರು.

ಇದಕ್ಕೂ ಮೊದಲು ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿ, ಕ್ಷೇತ್ರದ ಜನ 87 ಸಾವಿರ ಮತಗಳನ್ನು ನೀಡಿದ್ದಾರೆ. ಅವರಿಗೆ ಧನ್ಯವಾದ ತಿಳಿಸುವೆ. ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಕಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತರ ಕೊಟ್ಟೇ ಕೊಡ್ತೀವಿ ಎಂದರು.

ಉಪಚುನಾವಣೆಯ ಸೋಲನ್ನು ನಾನೇ ತೆಗೆದುಕೊಳ್ಳುತ್ತೇನೆ. ನಾಲ್ಕು ತಿಂಗಳ ಹಿಂದೇನೆ ಅಭ್ಯರ್ಥಿ ಘೋಷಣೆ ಮಾಡಿದ್ದರೆ ಈ ಸೋಲಾಗುತ್ತಿರಲಿಲ್ಲ. ನಮಗೆ ಅಭ್ಯರ್ಥಿ ಕೊರತೆ ಆಯ್ತು. ಈ ಹಿನ್ನೆಲೆಯಲ್ಲಿ ಸೋಲುವಂತಾಯಿತು. ದೇವೇಗೌಡರ ಕುಟುಂಬ ರಣಹೇಡಿ ಕುಟುಂಬ ಅಲ್ಲ, ರಣಧೀರ ಕುಟುಂಬ. ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿದರು. ಕಾರ್ಯಕರ್ತರಿಗಾಗಿ ತಲೆ ಕೊಟ್ಟರು. ನಿಖಿಲ್ ರಣಧೀರನಾಗಿ ಕಣಕ್ಕೆ ಇಳಿದರು ಎಂದು ಯೋಗೇಶ್ವರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಹಾಸನದಲ್ಲಿ ಕಾಂಗ್ರೆಸ್‌ ನಡೆಸಲು ಉದ್ದೇಶಿಸಿರುವ ಸ್ವಾಭಿಮಾನಿ ಸಮಾವೇಶ ಕುರಿತು ಮಾತನಾಡಿ, ಹಾಸನದಲ್ಲಿ ಸಿದ್ದರಾಮಯ್ಯ ಪರ್ವ ಮಾಡ್ತಾರಂತೆ. ಅಹಿಂದ ಸಮಾವೇಶವನ್ನು ಯಾವ ಕಾರಣಕ್ಕೆ ಮಾಡುತ್ತಿದ್ದಾರೆ? ಜನತಾದಳವನ್ನು ಮುಗಿಸಲು ಸಮಾವೇಶ ಮಾಡ್ತಾ ಇದ್ದೀರ ಎಂದು ಕಿಡಿಕಾರಿದರು.

ದೇವೇಗೌಡರ ಕೋಟೆಗೆ ಬಂದು ಅಹಿಂದ ಸಮಾವೇಶ ಮಾಡ್ತೀರಾ, ಮಾಡಿ ನೋಡೋಣ. ಸಿದ್ದರಾಮಯ್ಯನವರೇ, 2028ರ ಚುನಾವಣೆಯಲ್ಲಿ ರಾಜ್ಯದಲ್ಲಿ 38 ಸೀಟು ಗೆಲ್ಲಿ ನೋಡೋಣ ಎಂದು ಸವಾಲು ಹಾಕಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ 4 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಶಪಥ ಮಾಡಿದರು.

ಸಿದ್ದರಾಮಯ್ಯ ಈಗ ಮತಯಂತ್ರ ಬೇಡ, ಪೇಪರ್ ಬ್ಯಾಲೆಟ್‌ ಬೇಕು ಎನ್ನುತ್ತಾರೆ. ಹಾಗಿದ್ದರೆ, ಚನ್ನಪಟ್ಟಣ ಚುನಾವಣೆಯನ್ನು ಹೇಗೆ ಗೆದ್ರು? ಕಳೆದ ವಿಧಾನಸಭಾ ಚುನಾವಣೆಯಲ್ಲಿ 138 ಸೀಟ್ ಹೇಗೆ ಗೆದ್ರು? ಎಂದು ಪ್ರಶ್ನಿಸಿದರು.

ನಿಖಿಲ್‌ ರಣಧೀರ

ದೇವೇಗೌಡರ ಕುಟುಂಬ ರಣಹೇಡಿ ಕುಟುಂಬ ಅಲ್ಲ, ರಣಧೀರ ಕುಟುಂಬ. ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿದರು. ಕಾರ್ಯಕರ್ತರಿಗಾಗಿ ತಲೆ ಕೊಟ್ಟರು. ನಿಖಿಲ್ ರಣಧೀರನಾಗಿ ಚುನಾವಣೆಯ ಕಣಕ್ಕೆ ಇಳಿದಿದ್ದರು.

- ಎಚ್‌.ಡಿ.ಕುಮಾರಸ್ವಾಮಿ