ಒಂಭತ್ತು ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ

| N/A | Published : May 24 2025, 07:36 AM IST

Corona new variant updates

ಸಾರಾಂಶ

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ 9 ತಿಂಗಳ ಗಂಡು ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ 9 ತಿಂಗಳ ಗಂಡು ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹವಾಮಾನ ಬದಲಾವಣೆಯಿಂದ ರಾಜ್ಯದಲ್ಲಿ ಈಗಾಗಲೇ ಡೆಂಘೀ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ. ಹೀಗಿರುವಾಗ ಯಾವುದೇ ಪ್ರವಾಸದ ಹಿನ್ನೆಲೆ ಇಲ್ಲದ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಏಷ್ಯಾದ ಕೆಲ ಭಾಗಗಳಲ್ಲಿ ಹಾಗೂ ನಿಧಾನವಾಗಿ ದೇಶದ ವಿವಿಧ ರಾಜ್ಯಗಳಲ್ಲೂ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಆಂಧ್ರಪ್ರದೇಶದಲ್ಲಿ ಜನದಟ್ಟಣೆ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ. ಇನ್ನು ರಾಜ್ಯದಲ್ಲೂ ಜೂನ್‌ ಮೊದಲ ವಾರದಲ್ಲಿ ಶಾಲೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸೋಂಕು ಹರಡುವ ಬಗ್ಗೆ ಆತಂಕ ಹೆಚ್ಚಾಗಿದೆ.

ಗುರುವಾರ ರಾತ್ರಿ ಚಳಿ, ಜ್ವರದ ಅನಾರೋಗ್ಯ ಸಮಸ್ಯೆಯಿಂದ ನಗರದ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿರುವ 9 ತಿಂಗಳ ಗಂಡು ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮಗುವನ್ನು ಮಕ್ಕಳ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, 24 ಗಂಟೆಗಳ ನಿಗಾ ವಹಿಸಲಾಗಿದೆ. ಮಗುವಿನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹೊಸಕೋಟೆ ಮೂಲದ ದಂಪತಿಯ 9 ತಿಂಗಳ ಈ ಮಗು ಕಳೆದ ಹತ್ತು ದಿನಗಳಿಂದ ಶೀತ, ನೆಗಡಿ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಗುಣಮುಖವಾಗದೆ ವಾರದ ಹಿಂದೆ ಮೂರ್ಛೆರೋಗ ಕಾಣಿಸಿಕೊಂಡಿದೆ. ಹಾಗಾಗಿ ಅಲ್ಲಿನ ಎಂವಿಜೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೇತರಿಕೆ ಕಾಣಿಸಿಕೊಳ್ಳದೆ ವಾಣಿವಿಲಾಸ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಈ ವೇಳೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದ ಆರ್‌ಟಿ-ಪಿಸಿಎಲ್‌ ಫಲಿತಾಂಶ ಬಂದಿದ್ದು, ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮಗು ಸಹಜಸ್ಥಿತಿಯಲ್ಲಿದ್ದು ನಿಗಾದಲ್ಲಿ ಇಡಲಾಗಿದೆ. ಗುಣಮುಖವಾದ ಕೂಡಲೇ ಮನೆಗೆ ಕಳುಹಿಸಲಾಗುವುದು. ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಸಹನ ದೇವದಾಸ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಾಣಿವಿಲಾಸ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ಸಂತೋಷ್‌ ಡಿ ಪ್ರಭ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚಳ:

ಹವಾಮಾನ ಬದಲಾವಣೆಯಿಂದಾಗಿ ಶೀತ ವಾತಾವರಣವಿದ್ದು, ಈ ಸಂದರ್ಭದಲ್ಲಿ ಶೀತ ಸಂಬಂಧಿ ಸಮಸ್ಯೆಗಳ ಜತೆಗೆ ಶ್ವಾಸಕೋಶ ಸಮಸ್ಯೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಅದರಂತೆ ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಂಖ್ಯೆ ಹೆಚ್ಚಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿಯಲ್ಲಿ (3), ಫೆಬ್ರವರಿಯಲ್ಲಿ (1), ಮಾರ್ಚ್‌ನಲ್ಲಿ (3), ಏಪ್ರಿಲ್‌ನಲ್ಲಿ (3) ಪ್ರಕರಣಗಳು ವರದಿಯಾಗಿದ್ದವು. ಮೇ ನಲ್ಲಿ (33) ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಈವರೆಗಿನ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಆದರೆ ಯಾವುದೇ ಹೊಸ ಅಲೆ ಕಾಣಿಸಿಕೊಂಡಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ದೃಢಪಟ್ಟ ಸೋಂಕು ಪ್ರಕರಣಗಳ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಹೊಸ ತಳಿ ಕಂಡು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಆತಂಕ ಬೇಡ ಎಚ್ಚರಿಕೆ ಇರಲಿ:

ರೋಗಿಗಳಲ್ಲಿ ಸುಸ್ತು, ಮೈ ಕೈ ನೋವು ಕಾಣಿಸಿಕೊಂಡಿದೆ. ಸದ್ಯಕ್ಕೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ 29 ರಿಂದ ನಗರದಾದ್ಯಂತ ಶಾಲೆಗಳು ಪುನಃ ತೆರೆಯುವುದರಿಂದ ಪ್ರಕರಣಗಳು ಹೆಚ್ಚಾಗಬಹುದು ಎಂಬ ಆತಂಕ ಇದೆ. ಸೋಂಕು ವರದಿ ಆದರೂ ಸೌಮ್ಯ ರೋಗಲಕ್ಷಣ ಹೊಂದಿರುವುದರಿಂದ ಯಾವುದೇ ಆತಂಕ ಇಲ್ಲ. ಜತೆಗೆ ಈವರೆಗೂ ಯಾವುದೇ ಹೊಸ ತಳಿ ವರದಿಯಾಗದ ಕಾರಣ ಜನ ಆತಂಕಕ್ಕೆ ಒಳಗಾಗಬೇಕಿಲ್ಲ. ಬದಲಿಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವವರು, ಶೀತ ಸಂಬಂಧ ಸಮಸ್ಯೆ ಹೊಂದಿರುವವರು, ವೃದ್ಧರು ಮಾಸ್ಕ್ ಧರಿಸುವಿಕೆಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Read more Articles on