ಸಾರಾಂಶ
ಬಾರ್ಸಿಲೋನಾ: ಜಗತ್ತು ಮತ್ತೆ ಆರ್ಥಿಕ ಅನಿಶ್ಚಿತತೆಯತ್ತ ಮುಖಮಾಡಿದ್ದು, ಇದು ಕೊರೋನಾ ಕಾಲಕ್ಕಿಂತಲೂ ಗಂಭೀರವಾಗಿರಲಿದೆ ಎಂದು ಅಂತಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ. ಈ ಕಾರಣಕ್ಕಾಗಿ ಅದು ತನ್ನ 3 ತಿಂಗಳ ಹಿಂದಿನ ಆರ್ಥಿಕ ಅಂದಾಜನ್ನೇ ಬದಲಿದೆ.
ಪ್ರತಿ ವರ್ಷದಂತೆ ಐಎಂಎಫ್, ಜಾಗತಿಕ ಆರ್ಥಿಕತೆ, ಅಂತಾರಾಷ್ಟ್ರೀಯ ಬೆಳವಣಿಗೆ, ವಿಶ್ವ ಆರ್ಥಿಕ ಮಾರುಕಟ್ಟೆ ಸಂಬಂಧಿತ ವಸಂತ ಮಾಸದ ವಿಚಾರಗೋಷ್ಠಿ ನಡೆಸಿದ್ದು, 2025ನೇ ಆರ್ಥಿಕ ವರ್ಷದಲ್ಲಿ ವಿಶ್ವ ಜಿಡಿಪಿ ಶೇ.2.8ರಷ್ಟು ಹಾಗೂ 2026ರಲ್ಲಿ ಶೇ.3.0ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಇದು, 3 ತಿಂಗಳ ಹಿಂದಿನ ಐಎಂಎಫ್ ಮುನ್ನೋಟಕ್ಕಿಂದ ಶೇ.0.5ರಷ್ಟು ಕಡಿಮೆಯಾಗಿದೆ.
ಟ್ರಂಪ್ ತೆರಿಗೆ ಪ್ರಭಾವ:
ಇಡೀ ವಿಶ್ವವೇ ಸ್ತಬ್ಧವಾಗಿದ್ದ ಕೋವಿಡ್ ಸಮಯಕ್ಕೆ ಹೋಲಿಸಿದರೆ, ಇಂದು ಆರ್ಥಿಕ ಅನಿಶ್ಚಿತತೆ ಅತ್ಯಧಿಕವಿದೆ. ಇದು, 2024ರ ಅಕ್ಟೋಬರ್‌ನಲ್ಲಿ ಇದ್ದುದಕ್ಕಿಂತ 7 ಪಟ್ಟು ಅಧಿಕ. ಈ ಪರಿಸ್ಥಿತಿಗೆ ಮುಖ್ಯ ಕಾರಣ, ಟ್ರಂಪ್ ಅಮೆರಿಕದ ವ್ಯಾಪಾರಿ ಪಾಲುದಾರ ದೇಶಗಳ ಮೇಲೆ ಹೇರಿದ ತೆರಿಗೆ. ಪ್ರಸ್ತುತ ಬಹುತೇಕ ದೇಶಗಳ ಮೇಲೆ ಹೇರಿಕೆಯಾಗಿದ್ದ ತೆರಿಗೆಯನ್ನು 90 ದಿನಗಳ ಮಟ್ಟಿಗೆ ತಡೆಹಿಡಿಯಲಾಗಿದೆಯಾದರೂ, ಶೇ.10ರಷ್ಟು ತೆರಿಗೆ ಎಲ್ಲಾ ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಜೊತೆಗೆ, ಟ್ರಂಪ್ ಇದ್ದಕ್ಕಿದ್ದಂತೆ ಮತ್ತಷ್ಟು ತೆರಿಗೆ ಘೋಷಿಸುವ ಸಂಭವವೂ ಇದೆ.