ವಿಂಗ್‌ ಕಮಾಂಡರ್‌ ವಿರುದ್ಧ ಬಲವಂತದ ಕ್ರಮ ಬೇಡ : ಕೋರ್ಟ್‌

| N/A | Published : Apr 26 2025, 11:31 AM IST

karnataka highcourt

ಸಾರಾಂಶ

ಇತ್ತೀಚೆಗೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಭಾರತೀಯ ವಾಯುಸೇನೆಯ (ಐಎಎಫ್‌) ವಿಂಗ್‌ ಕಮಾಂಡರ್‌ ಶೀಲಾದಿತ್ಯ ಬೋಸ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಬೈಯಪ್ಪನಹಳ್ಳಿ ಠಾಣಾ ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

 ಬೆಂಗಳೂರು :  ಇತ್ತೀಚೆಗೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಭಾರತೀಯ ವಾಯುಸೇನೆಯ (ಐಎಎಫ್‌) ವಿಂಗ್‌ ಕಮಾಂಡರ್‌ ಶೀಲಾದಿತ್ಯ ಬೋಸ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಬೈಯಪ್ಪನಹಳ್ಳಿ ಠಾಣಾ ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರಿನ ಬೈಪ್ಪನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ಪಶ್ಚಿಮ ಬಂಗಾಳದ ಶೀಲಾದಿತ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಪೀಠ ಈ ಸೂಚನೆ ನೀಡಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ ಶ್ಯಾಮ್‌ ಅವರ ವಾದ ಪರಿಗಣಿಸಿದ ನ್ಯಾಯಪೀಠ, ಪೊಲೀಸರು ಬೋಸ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಕಾನೂನು ಪರಿಪಾಲಿಸದೆ ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದೆ ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬಾರದು ಎಂದು ಬೈಯಪ್ಪನಹಳ್ಳಿ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ.

ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಬೈಯಪ್ಪನಹಳ್ಳಿ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿ, ದೂರುದಾರ ಎಸ್‌.ಜೆ. ವಿಕಾಸ್‌ ಕುಮಾರ್‌ಗೆ ತುರ್ತು ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದ ಹಿನ್ನೆಲೆ: ಏ.21ರಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಸಿ.ವಿ. ರಾಮನ್‌ ನಗರದಲ್ಲಿ ಶೀಲಾದಿತ್ಯ ಬೋಸ್‌ ಮತ್ತು ಅವರ ಪತ್ನಿ ಇದ್ದ ಕಾರಿಗೆ ಟೆಕ್ಕಿ ವಿಕಾಸ್‌ ಬೈಕ್‌ ತಾಕಿತ್ತು. ಇದರಿಂದ ವಿಕಾಸ್‌ ಮತ್ತು ಶೀಲಾದಿತ್ಯ ಬೋಸ್‌ ನಡುವೆ ಕಲಹ ಆರಂಭವಾಗಿತ್ತು. ಘಟನೆ ಕುರಿತು ಘಟನೆ ಬಳಿಕ ಬೋಸ್‌ ಪತ್ನಿ ಠಾಣೆಗೆ ದೂರು ದಾಖಲಿಸಿದ್ದರು. ಶ್ರೀನಿವಾಸ್‌ ಅವರು ಕನ್ನಡದಲ್ಲಿ ತನ್ನನ್ನು ನಿಂದಿಸಿ ಬೈಕ್‌ ಕೀ ಮತ್ತು ಕಲ್ಲಿನಿಂದ ಬೋಸ್‌ ಮೇಲೆ ಹಲ್ಲೆ ನಡೆಸಿದರು ಎಂದು ದೂರು ನೀಡಿದ್ದರು.

ಇದರ ಬೆನ್ನಿಗೇ ವಿಕಾಸ್‌ ಕುಮಾರ್‌ ಕೂಡ ಪ್ರತಿ ದೂರು ಸಲ್ಲಿಸಿದ್ದರು. ಅದನ್ನಾಧರಿಸಿ ಬೈಯ್ಯಪ್ಪನಹಳ್ಳಿ ಠಾಣೆಯ ಪೊಲೀಸರು, ಶೀಲಾದಿತ್ಯ ಬೋಸ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 109 (ಕೊಲೆ ಯತ್ನ), 115(2) (ಸ್ವಇಚ್ಛೆಯಿಂದ ಹಾನಿ ಮಾಡುವುದು), 304 (ಕಳವು ಮಾಡಲು ಕಿತ್ತುಕೊಳ್ಳುವುದು), 324 (ಕಿರುಕುಳ), 351 (ಬೆದರಿಕೆ), 352 (ಶಾಂತಿಗೆ ಭಂಗ ಉಂಟು ಮಾಡಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಅಡಿ ಎಫ್‌ಐಆರ್‌ ದಾಖಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಶೀಲಾದಿತ್ಯ ಬೋಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.