ಸಾರಾಂಶ
ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ತೀವ್ರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.
ಬೆಂಗಳೂರು : ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ತೀವ್ರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.
ನೋಟಿಸ್ ಹಿನ್ನೆಲೆಯಲ್ಲಿ ನಗರದ ಅರಮನೆ ರಸ್ತೆಯಲ್ಲಿರುವ ಅಪರಾಧ ತನಿಖಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಎಸ್‌ಐಟಿ ತನಿಖಾಧಿಕಾರಿ ಹಾಗೂ ಡಿವೈಎಸ್ಪಿ ಬಿ.ಬಾಲರಾಜ್ ರವರ ಮುಂದೆ ವಿಚಾರಣೆಗೆ ನಲಪಾಡ್ ಹಾಜರಾಗಿದ್ದರು. ಬಳಿಕ ಸುಮಾರು ಒಂದು ತಾಸಿಗೂ ಅಧಿಕ ಕಾಲ ಅವರನ್ನು ಪ್ರಕರಣ ಕುರಿತು ಪ್ರಶ್ನಿಸಿ ತನಿಖಾಧಿಕಾರಿಗಳು ಹೇಳಿಕೆ ಪಡೆದಿದ್ದಾರೆ.
ಈ ವೇಳೆ ತನಗೂ ಬಿಟ್ ಕಾಯಿನ್ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜತೆ ಸ್ನೇಹವಿದೆಯೇ ಹೊರತು ಯಾವುದೇ ಆರ್ಥಿಕ ವ್ಯವಹಾರವಿಲ್ಲ ಎಂದು ನಲಪಾಡ್ ಹೇಳಿದ್ದಾರೆ ಎನ್ನಲಾಗಿದೆ.
ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಲಪಾಡ್, ಬಿಟ್ ಕಾಯಿನ್ ವಿಚಾರಣೆಗೆ ಶುಕ್ರವಾರ ಬರಬೇಕಿತ್ತು. ಆದರೆ ಕೆಲಸದ ನಿಮಿತ್ತ ಹೊರ ಹೋಗುವ ಕಾರಣಕ್ಕೆ ಒಂದು ದಿನ ಮುಂಚೆಯೇ ವಿಚಾರಣೆಗೆ ಹಾಜರಾಗಿದ್ದೇನೆ. ನಾನು ಯಾವುದೇ ಅಕ್ರಮ ವ್ಯವಹಾರದಲ್ಲಿ ಶಾಮೀಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ನನ್ನ ಸಹೋದರನಿಗೆ ಶ್ರೀಕಿ ಗೆಳೆಯನಾಗಿದ್ದು, ಸಹೋದರನಿಂದ ನನಗೂ ಆತ ಪರಿಚಯವಾಗಿದ್ದ. ಆದರೆ ನಾವು ಯಾರೂ ಶ್ರೀಕಿ ಜತೆ ಹಣಕಾಸು ವ್ಯವಹಾರ ನಡೆಸಿಲ್ಲ. ಈ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಹಾಗಾಗಿ ಪ್ರಕರಣದ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ಬಿಟ್ ಕಾಯಿನ್ ಹಗರಣದ ಪ್ರಮುಖ ರೂವಾರಿ ಎನ್ನಲಾದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜತೆ ನಲಪಾಡ್ ವ್ಯವಹಾರಿಕ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಲಪಾಡ್ ಅವರಿಗೆ ಫೆ.7 ರಂದು ವಿಚಾರಣೆಗೆ ಹಾಜರಾಗುವಂತೆ ಸಿಆರ್‌ಪಿಸಿ 41ಎರಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್ ನೀಡಿತ್ತು.