ಕೃಷಿ ಪಂಪ್‌ಗೆ ಆಧಾರ್‌ ಲಿಂಕ್‌ ಮಾಡದಿದ್ರೆ ಸಬ್ಸಿಡಿ ಕಡಿತವಿಲ್ಲ - 34 ಲಕ್ಷದಲ್ಲಿ 32 ಲಕ್ಷ ಪಂಪ್‌ಸೆಟ್‌ಗೆ ಈಗಾಗಲೇ ಲಿಂಕ್‌

| Published : Sep 23 2024, 10:16 AM IST

KJ George

ಸಾರಾಂಶ

ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.  

ಬೆಂಗಳೂರು : ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್‌ ಜೋಡಣೆ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ. ಶೇ.95.4ರಷ್ಟು ಕೃಷಿ ಪಂಪ್‌ಸೆಟ್‌ಗಳಿಗೆ ಈಗಾಗಲೇ ಆಧಾರ್‌ ಲಿಂಕ್‌ ಆಗಿದೆ. ಲಿಂಕ್‌ ಮಾಡದ ಸಂಪರ್ಕಗಳಿಗೆ ಸಹಾಯಧನ ಕಡಿತ ಮಾಡುವ ಯಾವುದೇ ಚಿಂತನೆ ಸರ್ಕಾರಕ್ಕೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

10 ಎಚ್‌​.ಪಿ.ವರೆಗಿನ ಕೃಷಿ ಪಂಪ್‌ಸೆಟ್​​ ಸ್ಥಾವರಗಳ ಆಧಾರ್​ ಜೋಡಣೆ ಪ್ರಕ್ರಿಯೆಯನ್ನು ಸೆ.24ರ ಒಳಗಾಗಿ ಪೂರ್ಣಗೊಳಿಸಿ ವರದಿ ನೀಡಬೇಕು, ಇಲ್ಲದಿದ್ದರೆ ಸಹಾಯಧಯನ ತಡೆಹಿಡಿಯುವುದಾಗಿ ಎಸ್ಕಾಂಗಳಿಗೆ ಇಂಧನ ಇಲಾಖೆ ಸೂಚನೆ ನೀಡಿತ್ತು. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿರುವ ಜಾರ್ಜ್, ರಾಜ್ಯದಲ್ಲಿರುವ ಒಟ್ಟು 34 ಲಕ್ಷ ಕೃಷಿ ಪಂಪ್‌ಸೆಟ್​​ಗಳ ಪೈಕಿ 32 ಲಕ್ಷ ಪಂಪ್‌ಸೆಟ್​​ಗೆ ಆಧಾರ್ ಲಿಂಕ್ ಆಗಿದೆ. ಇದರಿಂದ ಎಷ್ಟು ಸಬ್ಸಿಡಿ ಕೊಡಲಾಗುತ್ತಿದೆ ಎಂಬ ಲೆಕ್ಕ ಹಾಗೂ ಅರ್ಹರಿಗೆ ಸಹಾಯಧನ ಹೋಗುತ್ತಿದೆಯೇ ಎಂಬ ಮಾಹಿತಿ ದೊರೆಯುತ್ತದೆ. ಆಧಾರ್ ಲಿಂಕ್ ಮಾಡದೇ ಇರುವವರಿಗೆ ಸಹಾಧಯನ ಕಡಿತ ಮಾಡಬೇಕು ಎಂಬ ಉದ್ದೇಶವಿಲ್ಲ ಎಂದರು.

ಲಿಂಕ್ ಮಾಡದೇ ಇರುವವರಿಗೆ ಏನು ಮಾಡಬೇಕು ಎಂಬುದನ್ನು ಪರಿಶೀಲಿಸುತ್ತೇವೆ. ಅವರಿಗೆ ಸಹಾಯಧನ ಕಡಿತ ಮಾಡುವ ಬಗ್ಗೆ ಸದ್ಯ ಯಾವುದೇ ಚಿಂತನೆ ಇಲ್ಲ. ಆಧಾರ್ ಲಿಂಕ್ ಮಾಡುವ ಮೂಲಕ ದುರ್ಬಳಕೆ ಆಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.